ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನಿರ್ದೇಶಕ ಪವನ್ ಒಡೆಯರ್ ಪತ್ನಿ ಆಪೇಕ್ಷಾ
ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಅವರ ಪತ್ನಿ ಆಪೇಕ್ಷಾ ಪುರೋಹಿತ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಸ್ಟಾರ್ ನಿರ್ದೇಶಕ ಹಾಗೂ ನಟಿಯ ಜೀವನಕ್ಕೆ ಎರಡನೇ ಮಗುವಿನ ಆಗಮನವಾಗಿದೆ.
ಹೌದು, ಪವನ್ ಒಡೆಯರ್ ಹಾಗೂ ನಟಿ ಆಪೇಕ್ಷಾ ಪುರೋಹಿತ್ ದಂಪತಿಗೆ ಈಗಾಗಲೇ ಗಂಡು ಮಗನಿದ್ದು, ಇದೀಗ ಮಗಳ ಆಗಮನವಾಗಿದೆ. 2018ರಲ್ಲಿ ಫ್ಯಾಷನ್ ಡಿಸೈನರ್ ಆಪೇಕ್ಷಾ ಪುರೋಹಿತ್ ಜತೆಗೆ ವಿವಾಹ ಬಂಧನಕ್ಕೆ ಒಳಗಾಗಿದ್ದ ಪವನ್ ಒಡೆಯರ್ ಎರಡನೇ ಮಗು ಜನಿಸಿದ ಸಿಹಿ ಸುದ್ದಿಯನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಹಾಗೂ ಪತ್ನಿ ಆಪೇಕ್ಷಾ ಪುರೋಹಿತ್ ಸೆಲ್ಫಿ ಫೋಟೊವನ್ನು ಹಂಚಿಕೊಂಡಿರುವ ಪವನ್ ಒಡೆಯರ್ ಹೆಣ್ಣು ಮಗು ಜನಿಸಿದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಪವನ್ ಒಡೆಯರ್ ಹಾಗೂ ಆಪೇಕ್ಷಾ ಪುರೋಹಿತ್ ದಂಪತಿಗೆ ನೆಟ್ಟಿಗರು ಶುಭಾಶಯ ಕೋರಿದ್ದು, ಮಗು ಆರೋಗ್ಯವಾಗಿರಲಿ ಎಂದು ಆಶಿಸಿದ್ದಾರೆ.
ಇನ್ನು ಯೋಗರಾಜ್ ಭಟ್‌ರ ಗರಡಿಯಲ್ಲಿ ಬೆಳೆದ ನಿರ್ದೇಶಕ ಪವನ್ ಒಡೆಯರ್ ಕೋಮಲ್ ಕುಮಾರ್ ನಟನೆಯ ಗೋವಿಂದಾಯ ನಮಃ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದರು. ಈ ಚಿತ್ರ ಕನ್ನಡದಲ್ಲಿ ಹಿಟ್ ಆದ ಬಳಿಕ ತೆಲುಗಿಗೂ ಡಬ್ ಆಗಿತ್ತು. ಅಲ್ಲಿಯೂ ಸಹ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿದ್ದರು.
ಬಳಿಕ ರಾಕಿಂಗ್ ಸ್ಟಾರ್ ಯಶ್‌ಗೆ ಗೂಗ್ಲಿ ಚಿತ್ರವನ್ನು ನಿರ್ದೇಶಿಸಿದ ಪವನ್ ಒಡೆಯರ್ ದೊಡ್ಡ ಬ್ರೇಕ್ ಪಡೆದುಕೊಂಡರು ಹಾಗೂ ಚಿತ್ರರಂಗದಲ್ಲಿ ದೊಡ್ಡ ಬೇಡಿಕೆ ಸೃಷ್ಟಿಸಿಕೊಂಡರು. ಆ ನಂತರ ಪುನೀತ್ ರಾಜ್‌ಕುಮಾರ್ ನಟನೆಯ ರಣವಿಕ್ರಮ, ಜೆಸ್ಸಿ, ನಟರಾಜ ಸರ್ವಿಸ್, ಪುಷ್ಪಕ ವಿಮಾನ, ನಟಸಾರ್ವಭೌಮ ಹಾಗೂ ರೇಮೊ ಚಿತ್ರಗಳಿಗೆ ಪವನ್ ಒಡೆಯರ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಇನ್ನು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದ ಆಪೇಕ್ಷಾ ಪುರೋಹಿತ್ ಇದೀಗ ನಟಿಯಾಗಿದ್ದು, ಕಾಫಿ ತೋಟ ಹಾಗೂ ಸಾಗುತ ದೂರ ದೂರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











