'ರೆಮೋ' ಚಿತ್ರಕ್ಕಾಗಿ ನಿರ್ಮಿತವಾಗಿದೆ 1 ಕೋಟಿ ವೆಚ್ಚದ ದುಬಾರಿ ಸೆಟ್
Recommended Video
'ನಟಸಾರ್ವಭೌಮ' ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಪವನ್ ಒಡೆಯರ್ 'ರೆಮೋ' ಸಿನಿಮಾ ಮಾಡ್ತಿದ್ದಾರೆ. ರೋಗ್ ಚಿತ್ರದ ಮೂಲಕ ಕನ್ನಡ ಮತ್ತು ತೆಲುಗು ಇಂಡಸ್ಟ್ರಿಗೆ ಪರಿಚಿತವಾಗಿದ್ದ ಇಶಾನ್ ಈಗ ರೆಮೋ ಚಿತ್ರಕ್ಕೆ ನಾಯಕ.
ಹೈದ್ರಾಬಾದ್, ಬೆಂಗಳೂರು ಸುತ್ತಾ ಮುತ್ತ ಶೂಟಿಂಗ್ ಮಾಡಿರುವ ರೆಮೋ ಚಿತ್ರತಂಡ ಸದ್ಯ ಬೆಂಗಳೂರಿನ ವಿಜಯನಗರದಲ್ಲಿ ಚಿತ್ರೀಕರಣ ಮಾಡುತ್ತಿದೆ. ಚಿತ್ರದಲ್ಲಿ ಬರುವ ಬಹುಮುಖ್ಯ ದೃಶ್ಯಕ್ಕಾಗಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸೆಟ್ ಹಾಕಿ ಶೂಟ್ ಮಾಡಲಾಗುತ್ತಿದೆ.
ವಿಜಯನಗರದ ಬಸ್ ನಿಲ್ದಾಣದ ಬಳಿಯಿರುವ ಕಟ್ಟಡವೊಂದರ ಟೆರಸ್ ಮೇಲೆ ಐಷಾರಾಮಿ ಕಚೇರಿಯ ಸೆಟ್ ಹಾಕಲಾಗಿದೆ. ನಾಯಕನ ವ್ಯಕ್ತಿತ್ವಕ್ಕೆ ತಕ್ಕಂತೆ ಈ ಐಷಾರಾಮಿ ಕಚೇರಿ ನಿರ್ಮಿಸಲಾಗಿದ್ದು, ಸಂಪೂರ್ಣ ಗಾಜಿನ ಸೆಟ್ ರೂಪಿಸಲಾಗಿದೆ. ಪಕ್ಕದಲ್ಲೇ ಮೆಟ್ರೋ ಸಾಗುವುದರಿಂದ ಒಂದೊಳ್ಳೆ ಲೊಕೇಶನ್ ಇದಾಗಲಿದೆ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಕಲಾ ನಿರ್ದೇಶಕರಾದ ಗುಣ ಮತ್ತು ಕರಣ್ ಈ ಸೆಟ್ ಹಾಕಿದ್ದಾರೆ.

ಈ ಬಗ್ಗೆ ನಿರ್ದೇಶಕ ಪವನ್ ಒಡೆಯರ್ ಫಿಲ್ಮಿಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದು, ''ಸುಮಾರು ಒಂದು ಕೋಟಿ ವೆಚ್ಚದಲ್ಲಿ ಸೆಟ್ ಹಾಕಲಾಗಿದೆ. ನಾಯಕನ ವ್ಯಕ್ತಿತ್ವಕ್ಕೆ ತಕ್ಕಂತೆ ಆಫೀಸ್ ಬೇಕಾಗಿತ್ತು. ಅದಕ್ಕಾಗಿ ಒಂದಿಷ್ಟು ಸ್ಕೆಚ್ ಹಾಕಿ ಈ ವಿಜಯನಗರದಲ್ಲಿ ಸೆಟ್ ಹಾಕ್ತಿದ್ದೀವಿ. ಚಿತ್ರದ ಬಹುಮುಖ್ಯ ದೃಶ್ಯದ ಚಿತ್ರೀಕರಣ ಇಲ್ಲಿ ನಡೆಯಲಿವೆ. ತುಂಬಾ ಅದ್ಧೂರಿಯಾಗಿ ಸಿನಿಮಾ ಬರ್ತಿದೆ'' ಎಂದು ತಿಳಿಸಿದರು.

'ದಿ ವಿಲನ್' ಚಿತ್ರಕ್ಕೆ ಬಂಡವಾಳ ಹಾಕಿದ್ದ ಸಿಆರ್ ಮನೋಹರ್ ಈ ಚಿತ್ರವನ್ನ ಜಯಾಧಿತ್ಯ ನಿರ್ಮಾಣ ಸಂಸ್ಥೆಯ ಅಡಿ ನಿರ್ಮಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಅಂದ್ಹಾಗೆ, ರೆಮೋ ಸಿನಿಮಾ ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದೆ. ಗೂಗ್ಲಿ ಚಿತ್ರದ ಬಳಿಕ ಪೂರ್ಣ ಪ್ರಮಾಣದ ಪ್ರೇಮಕಥೆ ಕೈಗೆತ್ತಿಕೊಂಡಿರುವ ಪವನ್ ಒಡೆಯರ್ ಈ ಸಲ ಅದ್ಭುತವಾದ ಮನರಂಜನೆ ನೀಡುವ ತಯಾರಿಯಲ್ಲಿದ್ದಾರೆ.

ಇಲ್ಲಿಯವರೆಗೂ ರೆಮೋ ಚಿತ್ರದ ಶೇಕಡಾ 25ರಷ್ಟು ಚಿತ್ರೀಕರಣ ಮುಗಿದಿದೆ. ಆಗಸ್ಟ್ 31 ರಂದು ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಲಿದೆ. ಬಳಿಕ ಸೆಪ್ಟೆಂಬರ್ 15 ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದ್ದು, ಸಿಂಗಾಪೂರ್, ಮಂಗಳೂರಿನಲ್ಲಿ ನಿಗದಿಯಾಗಿದೆ.


Click it and Unblock the Notifications











