ತಾವು ಸಾಕಿದ ನಾಯಿಗಳಿಗಾಗಿ ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡ ಬಿಗ್ ಬಾಸ್ ಮಾಜಿ ಸ್ಫರ್ಧಿ..!
ಪ್ರೀತಿ ಎನ್ನುವ ಈ ಎರಡಕ್ಷರ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಅನೇಕರಿಗೆ ಜೀವನ ನೀಡಿದೆ. ಇನ್ನೂ ಹಲವರ ಜೀವನ ಕಸಿದುಕೊಂಡಿದೆ. ಖುಷಿ, ನೋವು, ಸ್ವಾರ್ಥ, ಜಗಳ, ನಗು, ಮಾತು, ಮೌನ, ಆಸೆ, ಅಭಿಲಾಸೆ, ವಿರಹ, ಹೀಗೆ ಎಲ್ಲವೂ ಕೂಡ ಪ್ರೀತಿ ಹುಟ್ಟಿದ ದಿನವೇ ಚಿಗುರೊಡೆದು ಮರವಾಗಿ ಬೆಳೆಯುತ್ತದೆ. ಕೆಲವೊಮ್ಮೆ ಅಷ್ಟೇ ಬೇಗ ಉಸಿರನ್ನು ಚೆಲ್ಲುತ್ತದೆ. ಇದಕ್ಕೆ ಪವಿ ಪೂವಪ್ಪ ಅವರ ವ್ಯೆಯಕ್ತಿಕ ಬದುಕು ಮತ್ತೊಂದು ಉದಾಹರಣೆ.
ಹೌದು, ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಾ, ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿರುವ ಪವಿ ಪೂವಪ್ಪ ಪ್ರೇಮದ ಅಮಲನ್ನೇರಿಸಿಕೊಂಡಿದ್ದರು. ಫೇಸ್ ಬುಕ್ ಮೂಲಕ ಪರಿಚಯವಾದ ಡಿಜೆ ಮ್ಯಾಡಿ ಅವರನ್ನು ಮನಸಾರೆ ಪ್ರೀತಿಸುತ್ತಿದ್ದರು. ತಮ್ಮ ಪ್ರಿಯಕರ ಆರು ತಿಂಗಳು ಅಂಡಮಾನ್‌ನಲ್ಲಿ ಇದ್ದರು ಕೂಡ ಅವರ ಮೇಲೆ ಪವಿ ಪೂವಪ್ಪಗೆ ಪ್ರೀತಿ ಒಂಚೂರು ಕಡಿಮೆಯಾಗಿರಲಿಲ್ಲ. ಬದಲಿಗೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಡಿಜೆ ಮ್ಯಾಡಿ ಅವರನ್ನು ಪವಿ ಮಿಸ್ ಮಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಆರು ತಿಂಗಳ ನಂತರ ಡಿಜೆ ಮ್ಯಾಡಿ ಭಾರತಕ್ಕೆ ಮರಳಿದಾಗ ಖುದ್ದು ಓಡೋಡಿ ಹೋಗಿ ವಿಮಾನ ನಿಲ್ದಾಣದಲ್ಲಿ ತಮ್ಮ ಗೆಳೆಯನಿಗೆ ನಲ್ಮೆಯ ಸ್ವಾಗತ ಕೋರಿದ್ದರು. ಶೀಘ್ರದಲ್ಲಿಯೇ ನಾವು ಮದುವೆಯಾಗಲಿದ್ದೇವೆ ಎಂದು ಕೂಡ ಪವಿ ಪೂವಪ್ಪ ಖುಷಿ ಖುಷಿಯಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಆದರೆ ಈಗ ಇವರ ಪ್ರೀತಿ ಉಸಿರು ಚೆಲ್ಲಿದೆ. ಇಬ್ಬರ ನಡುವೆ ಬ್ರೇಕಪ್ ಆಗಿದೆ.

ಹೌದು, PublicNext ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪವಿ ಪೂವಪ್ಪ ನಮ್ಮ ಸಂಬಂಧ ಮುರಿದು ಬಿದ್ದಿದೆ ಎಂದು ಹೇಳಿದ್ದಾರೆ. ಸುಮಾರು ಐದು ವರ್ಷಗಳಿಂದ ನಾವು ಇಬ್ಬರು ಜೊತೆಯಲ್ಲಿಯೇ ಇದ್ವಿ ನಮ್ಮ ನಡುವೆ ಎಲ್ಲವೂ ಚೆನ್ನಾಗಿತ್ತು. ಒಳ್ಳೆ ಹೊಂದಾಣಿಕೆ ಕೂಡ ಇತ್ತು ಆದರೆ ದಿನಗಳು ಉರುಳಿದಂತೆ ಅವರಿಗೆ ನನ್ನ ನಾಯಿಗಳಿಂದ ಸಮಸ್ಯೆಯಾಗಲು ಶುರುವಾಯ್ತು ಎಂದಿದ್ದಾರೆ. ಮದ್ವೆಯಾದ ಮೇಲೆ ನಾಯಿಯನ್ನು ಮನೆಯೊಳಗೆ ಬಿಡುವುದಿಲ್ಲ ಎನ್ನಲು ಶುರುಮಾಡಿದರು. ಆ ನಂತರ ಚಿಕ್ಕ ಚಿಕ್ಕ ವಿಚಾರಕ್ಕೆ ಕಾರಣ ಹೇಳಲು ಶುರು ಮಾಡಿದರು. ಈ ಕಾರಣಕ್ಕೆ ದೂರವಾಗುವುದೇ ಉತ್ತಮ ಎಂದು ನಾನೇ ಸಂಬಂಧದಿಂದ ಹೊರ ಬಂದೆ ಎಂದು ಹೇಳಿದ್ದಾರೆ.
ಇನ್ನೂ ಪವಿ ಪೂವಪ್ಪ ತಮ್ಮ ಬಾಯ್ ಫ್ರೆಂಡ್ ಜೊತೆ ಬ್ರೇಕಪ್ ಆದ ವಿಚಾರವನ್ನು ಹಂಚಿಕೊಂಡ ಬೆನ್ನಲ್ಲೇ ನಾಯಿಗೋಸ್ಕರ ಸಂಬಂಧವನ್ನೇ ಕಡಿದುಕೊಳ್ಳುತ್ತಾರಾ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಬಹುತೇಕರಿಗೆ ಗೊತ್ತಿರುವಂತೆ ಪವಿ ಪೂವಪ್ಪಗೆ ನಾಯಿಗಳು ಅಂದರೆ ಪಂಚ ಪ್ರಾಣ. ಇದಕ್ಕೆ ಕೈಗನ್ನಡಿ ಎನ್ನುವಂತೆ ಹನ್ನೆರಡು ನಾಯಿಗಳನ್ನು ಪವಿ ಪೂವಪ್ಪ ತಮ್ಮ ಮನೆಯಲ್ಲಿ ಸಾಕಿ ಸಲಹುತ್ತಿದ್ದಾರೆ. ನಾನು ನನ್ನ ನಾಯಿಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬಿಗ್ ಬಾಸ್ ಮನೆಗೆ ಹೋಗುವಾಗ ಕೂಡ ಪವಿ ಪೂವಪ್ಪ ಹೇಳಿದ್ದರು.
ಈ ಕಾರಣಕ್ಕೆ ನಾಯಿಯ ವಿಚಾರಕ್ಕೆ ಬ್ರೇಕಪ್ ಮಾಡಿಕೊಂಡಿದ್ದೇಕೆ ಎಂದು ಕೇಳುತ್ತಿರುವ ಅನೇಕರಿಗೆ ಉತ್ತರವನ್ನು ನೀಡಿರುವ ಪವಿ ಪೂವಪ್ಪ ಐದು ನಿಮಿಷದ ವಿಡಿಯೋವನ್ನು ನೋಡಿ ಯಾರ ಬಗ್ಗೆಯೂ ಜಡ್ಜ್ ಮಾಡಬೇಡಿ ಎಂದಿದ್ದಾರೆ. ಬ್ರೇಕಪ್ ಮಾಡಿಕೊಳ್ಳಲು ಕೇವಲ ನಾಯಿಯೊಂದೇ ಕಾರಣ ಅಲ್ಲ, ಸಾರ್ವಜನಿಕವಾಗಿ ಕಾರಣವನ್ನು ಬಹಿರಂಗಗೊಳಿಸಬಾರದು ಎಂಬ ಕಾರಣಕ್ಕೆ ನಾನು ಹೇಳ್ತಿಲ್ಲ ಅಷ್ಟೇ ಎಂದಿದ್ದಾರೆ. ನಿಜವಾದ ಕಾರಣ ನನಗೆ, ನನ್ನ ಸ್ನೇಹಿತರಿಗೆ, ನನ್ನ ಕುಟುಂಬಕ್ಕೆ ಗೊತ್ತು ಅಷ್ಟೇ ಸಾಕು ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್‌ವೊಂದಕ್ಕೆ ಪವಿ ಪೂವಪ್ಪ ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











