ಜಾಮೀನು ಪಡೆಯುವ ಕಸರತ್ತಿಗೆ ಬ್ರೇಕ್ ; ಅರ್ಜಿ ಹಿಂಪಡೆದ ಪವಿತ್ರಾ ಗೌಡ - ಕಾರಣವೇನು ?
ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು.. ಕರ್ಮದ ಫಲ ಇದೇ ಜನ್ಮದಲ್ಲಿ ಅನುಭವಿಸಬೇಕು.. ನಾವು ಬಿತ್ತಿದ ಬೀಜವೇ ನಮಗೆ ಫಲ ನೀಡುತ್ತೆ.. ನಮ್ಮ ಭವಿಷ್ಯ ನಮ್ಮದೇ ಆಯ್ಕೆ.. ಯಾರೇ ಇರಲಿ.. ಎಷ್ಟೇ ದೊಡ್ಡವರಾಗಿರಲಿ.. ಕರ್ಮದ ಲೆಕ್ಕವನ್ನು ಇಲ್ಲಿ ಚುಕ್ತಾ ಮಾಡಲೇಬೇಕು. ಈ ಮಾತುಗಳಿಗೆ ಜ್ವಲಂತ ಉದಾಹರಣೆಯಂತಿರುವವರು ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾ ಗೌಡ.
ಮಾಡಬಾರದ್ದನ್ನೆಲ್ಲ ಮಾಡಿ ಒಂದು ಸುಂದರ ಸಂಸಾರವನ್ನು ಹಾಳುಗೆಡುವುದರ ಜೊತೆ ಒಬ್ಬ ಸೂಪರ್ ಸ್ಟಾರ್‌ನ ಘನತೆ, ಗೌರವವನ್ನು ಮಣ್ಣು ಪಾಲು ಮಾಡಿದ ಕುಖ್ಯಾತಿ ಪವಿತ್ರಾ ಗೌಡಗೆ ಸಲ್ಲುತ್ತೆ. ಕೇವಲ ದರ್ಶನ್ ಮಾತ್ರವಲ್ಲ ದರ್ಶನ್ ಜೊತೆ ಒಳ ಹೋದ ಇನ್ನು ಕೆಲ ಹುಡುಗರ ಬದುಕು ಕೂಡ ಬರ್ಬಾದ್ ಆಗಿದೆ. ಇದಕ್ಕೆಲ್ಲವೂ ಪ್ರಮುಖವಾದ ಕಾರಣ ಪವಿತ್ರಾ ಗೌಡ ಎಂಬ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಇಂಥಾ ಪವಿತ್ರಾ ಗೌಡ ಎರಡನೇ ಬಾರಿ ಜೈಲು ಸೇರಿ ಒಂದಲ್ಲ ಎರಡಲ್ಲ ಇಂದಿಗೆ ಬರೋಬ್ಬರಿ 235 ದಿನಗಳಾಗಿವೆ. ಇನ್ನೂ ಕಳೆದ ವರ್ಷ ಜೈಲಿನಲ್ಲಿದ್ದ ಕಾಲವನ್ನು ಕೂಡ ಇಲ್ಲಿ ಲೆಕ್ಕ ಹಾಕಿದರೆ ಪವಿತ್ರಾ ಗೌಡ 424 ದಿನಗಳಿಂದ ಸೆರೆವಾಸ ಅನುಭವಿಸುತ್ತಿದ್ದಾರೆ.
ಆದರೆ, ಈ ಬಾರಿ ಕಳೆದ ಬಾರಿ ಹೊರ ಬಂದಂತೆ ಬರಲು ಸಾಧ್ಯ ಇಲ್ಲ. ಹೊರ ಬರಲು ಸರಿಯಾದ ಸಮಯ ಇನ್ನೂ ಬರಬೇಕಿದೆ. ವಿಚಾರಣೆ ಪೂರ್ಣಗೊಳ್ಳಬೇಕಿದೆ. ಸಂಪೂರ್ಣ ವಿಚಾರಣೆ ನಡೆದ ನಂತರವಷ್ಟೇ ಪವಿತ್ರಾ ಗೌಡ ತಮ್ಮ ಮುಂದಿನ ದಿನಗಳನ್ನು ಜೈಲಿನಲ್ಲಿಯೇ ಕಳೆಯುತ್ತಾರಾ ಅಥವಾ ಮನೆಗೆ ಮರಳುತ್ತಾರಾ ಎನ್ನುವುದು ಗೊತ್ತಾಗಲಿದೆಯಾದರೂ ಸದ್ಯ ಪವಿತ್ರಾ ಗೌಡ ಜಾಮೀನು ಪಡೆಯುವ ತಮ್ಮ ಪ್ರಯತ್ನವನ್ನು ಕೈ ಚೆಲ್ಲಿದ್ದಾರೆ.
ಹೌದು, ಅಸಲಿಗೆ ರೇಣುಕಾಸ್ವಾಮಿ ಪ್ರಕರಣದಲ್ಲಿ ತಮಗೆ ಜಾಮೀನು ನೀಡಬೇಕೆಂದು ಪವಿತ್ರಾ ಗೌಡ ನ್ಯಾಯಾಲಯದ ಮೊರೆ ಹೋಗಿದ್ದರು. ನನ್ನ ಮಗಳು ಈಗ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಿನ್ನೆಲೆ ಜಾಮೀನು ನೀಡಬೇಕೆಂದು 57ನೇ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಬೋರ್ಡ್ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಪರೀಕ್ಷೆಯ ಈ ನಿರ್ಣಾಯಕ ಸಮಯದಲ್ಲಿ ಮಗಳ ಜೊತೆಗಿದ್ದು ಅವಳಿಗೆ ಮಾನಸಿಕ ಸ್ಥೈರ್ಯ ತುಂಬಲು ತನಗೆ ಜಾಮೀನು ನೀಡಬೇಕು ಎಂದು ಪವಿತ್ರಾ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪವಿತ್ರಾ ಗೌಡ ಅವರ ಈ ಮನವಿಗೆ ಸರ್ಕಾರಿ ಅಭಿಯೋಜಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರೇಣುಕಾಸ್ವಾಮಿ ಪ್ರಕರಣ ಸಾಮಾನ್ಯ ಪ್ರಕರಣವಲ್ಲ, ಇಡೀ ದೇಶದೆಲ್ಲೆಡೆ ಚರ್ಚೆಯಾದ ಪ್ರಕರಣ, ಎಲ್ಲಕ್ಕಿಂತ ಹೆಚ್ಚಾಗಿ ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ, ಇಂತಹ ಸಮಯದಲ್ಲಿ ಪ್ರಮುಖ ಆರೋಪಿಗೆ ಜಾಮೀನು ನೀಡುವುದು ತನಿಖೆ ಮತ್ತು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು ಎಂದು ವಾದ ಮಾಡಿದ್ದರು. ಪರೀಕ್ಷೆಯ ನೆಪವನ್ನಷ್ಟೇ ಮುಂದಿಟ್ಟುಕೊಂಡು ಜಾಮೀನು ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು.

ಎರಡು ಕಡೆ ವಾದ-ಪ್ರತಿವಾದವನ್ನು ಆಲಿಸಿದ 57ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಐ.ಪಿ. ನಾಯಕ್, ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿದ್ದರು ಜಾಮೀನು ನೀಡಲು ಮಗಳ ಪರೀಕ್ಷೆ ಬಲವಾದ ಕಾರಣವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆ ಪವಿತ್ರಾ ಗೌಡ ಹೈಕೋರ್ಟ್ ಮೊರೆ ಹೋಗಿದ್ದರು.ಆದರೆ ಈಗ ತಮ್ಮ ಈ ಅರ್ಜಿಯನ್ನು ಪವಿತ್ರಾ ಗೌಡ ಹಿಂಪಡೆದಿದ್ಧಾರೆ. ಯಾಕೆಂದರೆ ಪವಿತ್ರಾ ಗೌಡ ಅವರ ಮಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಕ್ತಾಯಗೊಂಡಿವೆ.
ಹೀಗಾಗಿ ಜಾಮೀನಿಗಾಗಿ ಇನ್ನೂ ಹೋರಾಡುವುದರಲ್ಲಿ ಅರ್ಥ ಇಲ್ಲ ಎನ್ನುವುದನ್ನು ಅರಿತ ಪವಿತ್ರಾ ಗೌಡ ತಮ್ಮ ವಕೀಲರ ಸಲಹೆಯಂತೆ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಪವಿತ್ರಾ ಗೌಡ ಪರ ವಕೀಲರು ಅರ್ಜಿಯನ್ನು ವಾಪಸ್ ಪಡೆಯುವುದಾಗಿ ನ್ಯಾಯಾಲಯಕ್ಕೆ ಹೇಳಿದ್ದು, ನ್ಯಾಯಪೀಠವು ಈ ಮನವಿಯನ್ನು ಪುರಸ್ಕರಿಸಿ, ಅರ್ಜಿಯನ್ನು ವಜಾಗೊಳಿಸಿದೆ.


Click it and Unblock the Notifications











