ಜೈಲಿನಿಂದ ಮನೆಗೂ ಹೋಗದೇ ನೇರವಾಗಿ ದೇವಸ್ಥಾನಕ್ಕೆ ತೆರಳಿದ ಪವಿತ್ರಾಗೌಡ; ಅಂತಹ ಹರಕೆ ಏನಿತ್ತು?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ 1 ಆರೋಪಿಯಾಗಿದ್ದ ಪವಿತ್ರಾ ಗೌಡಗೆ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಂದು (ಡಿಸೆಂಬರ್ 17) ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು ಆರು ತಿಂಗಳು ಇದ್ದ ಪವಿತ್ರಾ ಗೌಡ ಹೊರ ಬಂದಿದ್ದಾರೆ. ನಗು ಮುಖದಲ್ಲೇ ಹೊರ ಬಂದು ಪವಿತ್ರಾ ಗೌಡ ಸೀದಾ ದೇವಸ್ಥಾನಕ್ಕೆ ತೆರಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆ ಪವಿತ್ರಗೌಡ ನೇರವಾಗಿ ರಾಜರಾಜೇಶ್ವರಿ ನಗರದಲ್ಲಿರುವ ಅವರ ನಿವಾಸಕ್ಕೆ ಹೋಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಜೈಲಿನಿಂದ ಸೀದಾ ತಲಘಟ್ಟಪುರ ಸಮೀಪವಿರುವ ಐತಿಹಾಸಿ ವಜ್ರಮುನೇಶ್ವರ ದೇಗುಲಕ್ಕೆ ತೆರಳಿ ಪುಣ್ಯಸ್ನಾನವನ್ನು ಮಾಡಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

ಪವಿತ್ರಾ ಗೌಡ ಜೈಲಿನಿಂದ ಮನೆಗೂ ತೆರಳದೆ ನೇರವಾಗಿ ವ್ರಜಮುನೇಶ್ವರ ದೇವಸ್ಥಾನಕ್ಕೆ ಓಡಿ ಬಂದಿದ್ದು ಏಕೆ? ಅಂತಹ ಹರಕೆ ಏನಿತ್ತು? ಅದನ್ನು ಈ ಕ್ಷಣಕ್ಕೆ ತೀರಿಸಬೇಕಾದ ಅನಿವಾರ್ಯತೆ ಏನಿತ್ತು? ಅನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ತಲಘಟ್ಟಪುರ ಸಮೀಪವಿರುವ ವಜ್ರಮುನೇಶ್ವರ ದೇಗುಲಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಬರುತ್ತಾರೆ. ತಾವು ಮಾಡಿಕೊಂಡಿದ್ದ ಹರಕೆಯನ್ನು ತೀರಿಸಿ ಹೋಗುತ್ತಾರೆ. ಭಕ್ತರು ಕೇಳಿಕೊಂಡಿದ್ದನ್ನು ವಜ್ರಮುನೇಶ್ವರ ನೀಡಿ ಆಶೀರ್ವದಿಸುತ್ತಾನೆ ಎಂಬುವುದು ನಂಬಿಕೆ. ಈ ಕಾರಣಕ್ಕೆ ಹರಕೆ ತೀರಿದ ಕೂಡಲೇ ಇಲ್ಲಿಗೆ ಬಂದು ಮೊದಲು ಹರಕೆಯನ್ನು ಅರ್ಪಿಸುತ್ತಾರೆ ಎಂದು ದೇವಸ್ಥಾನದ ಸಿಬ್ಬಂದಿ ಹೇಳುತ್ತಾರೆ.

ಪವಿತ್ರಾ ಗೌಡ ಕೂಡ ವಜ್ರಮುನೇಶ್ವರನಲ್ಲಿ ಹರಕೆಯನ್ನು ಮಾಡಿಕೊಂಡಿದ್ದರು. ಅದು ಈಡೇರಿದ ಬಳಿಕ ನೇರವಾಗಿ ಹರಕೆಯನ್ನು ಈಡೇರಿಸುವುದಕ್ಕೆ ತಲಘಟ್ಟಪುರದ ಸಮೀಪವಿರುವ ಐತಿಹಾಸಿ ವಜ್ರಮುನೇಶ್ವರ ದೇವಾಲಯಕ್ಕೆ ಬಂದು ಹರಕೆ ಸಲ್ಲಿಸಿದ್ದಾರೆ. ಈ ವೇಳೆ ದೇವಸ್ಥಾನದಲ್ಲಿ ಪುಣ್ಯಸ್ನಾನ ಮಾಡಿ ಪುಷ್ಕರಣಿಯಲ್ಲಿ ಮುಳುಗಿ ದೇವರಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
ವಜ್ರಮುನೇಶ್ವರ ದೇಗುಲದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ಪವಿತ್ರಾ ಗೌಡ ನೇರವಾಗಿ ಅವರ ಅಮ್ಮನ ಮನೆಗೆ ತೆರಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲಿಯೇ ಕೆಲವು ದಿನಗಳು ಇರಲಿದ್ದಾರೆ ಅನ್ನೋ ಮಾಹಿತಿ ಹರಿದಾಡುತ್ತಿದೆ. ಸದ್ಯ ಜಾಮೀನಿನ ಮೇಲೆ ಪವಿತ್ರಾ ಗೌಡ ಹೊರಬಂದಿದ್ದು ಆಗಿದೆ. ಹೀಗಾಗಿ ಅವರ ಮುಂದಿನ ನಡೆಯೇನು? ಈ ಕೇಸ್ ಅನ್ನು ಯಾವ ರೀತಿ ಮುನ್ನಡೆಸುತ್ತಾರೆ? ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾರಾ? ಅನ್ನೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಇತ್ತ ದರ್ಶನ್ ಕೂಡ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿರುವ ಗೆಳತಿ ಪವಿತ್ರಾ ಗೌಡರನ್ನು ದರ್ಶನ್ ಭೇಟಿಯಾಗುತ್ತಾರಾ? ಇಬ್ಬರೂ ಸೇರಿ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಮುಂದಿನ ದಿನಗಳಲ್ಲಿ ಹೇಗೆ ಮುನ್ನಡೆಸುತ್ತಾರೆ ಅನ್ನೋ ಕುತೂಹಲವಿದೆ. ಸದ್ಯ ಪವಿತ್ರಾ ಗೌಡ ಆರು ತಿಂಗಳು ಜೈಲಿನಲ್ಲಿ ಕಾಲ ಕಳೆದ ಬಳಿಕ ಹೊರ ಬಂದಿದ್ದಾರೆ. ಸದ್ಯ ರಿಲ್ಯಾಕ್ಸ್ ಮೂಡನಲ್ಲಿರುವ ಪವಿತ್ರಾ ಗೌಡ ಮುಂದಿನ ನಡೆಯ ಮೇಲೆ ಎಲ್ಲರ ಕಣ್ಣು ಇರೋದಂತೂ ಸತ್ಯ.


Click it and Unblock the Notifications











