ಹತ್ತು ವರ್ಷ ಜೊತೆಯಲ್ಲಿ ಸಂಸಾರ, 'ಪವಿತ್ರಾ ಗೌಡ'ಗೋಸ್ಕರ 'ದರ್ಶನ್' ಮಾಡಿದ ಕೆಲಸಗಳು ಒಂದೆರಡಲ್ಲ..!
ಈ ವರ್ಷದ ಆರಂಭದಲ್ಲಿ ಪವಿತ್ರಾ ಗೌಡ ಎಂಬ ಮಾಯಾಂಗನೆ, ನನ್ನ ಮತ್ತು ದರ್ಶನ್ ಸಂಬಂಧಕ್ಕೆ ಹತ್ತು ವರ್ಷ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಳು. ಸಹಜವಾಗಿ ತನ್ನ ಗಂಡನ ಈ ಅಪವಿತ್ರ ಸಂಬಂಧ ಜಗಜ್ಜಾಹೀರಾದ ಹಿನ್ನೆಲೆ ದರ್ಶನ್ ಅವರ ಅಧಿಕೃತ ಪತ್ನಿ ವಿಜಯಲಕ್ಷ್ಮಿ ಕೆರಳಿದ್ದರು. ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪವಿತ್ರಾ ಗೌಡ ಮುಖಕ್ಕೆ ಉಗಿದು ಉಪ್ಪಾಕಿ ಮಂಗಳಾರತಿಯನ್ನೂ ಎತ್ತಿದ್ದರು.
ಆ ನಂತರ ದರ್ಶನ್ ತಮ್ಮ ಅಧಿಕೃತ ಹೆಂಡತಿ ವಿಜಯಲಕ್ಷ್ಮಿಯವರನ್ನು 22ನೇ ವರ್ಷದ ವಿವಾಹ ಮಹೋತ್ಸವದ ನೆಪದಲ್ಲಿ ದುಬೈಗೆ ಕರೆದುಕೊಂಡು ಹೋದರು. ಅಲ್ಲಿ ಕೆಲ ಕಾಲವಾದರೂ ನೆಮ್ಮದಿಯಾಗಿದ್ದರು. ವಿಜಯಲಕ್ಷ್ಮಿ ಅವರ ಮನ ಒಲಿಸಿದರು. ಆದರೆ ಇತ್ತ ಪವಿತ್ರಾ ಗೌಡ ಮನಸು ಕಾದ ಕಾವಲಿಯಾಗಿತ್ತು. ದರ್ಶನ್ ಮತ್ತು ವಿಜಯಲಕ್ಷ್ಮಿ ಅನ್ಯೋನ್ಯತೆ ಕಂಡು ಹೊಟ್ಟೆಗೆ ಬೆಂಕಿ ಬಿದ್ದಿತ್ತು. ಪ್ರತಿಕಾರದ ಜ್ವಾಲೆ ಹೊತ್ತಿ ಉರಿಯುತ್ತಿತ್ತು.

ಹೀಗಾಗಿಯೇ ದರ್ಶನ್ ಮೇಲೆ ಕೋಪ ಮಾಡಿಕೊಂಡು ದರ್ಶನ್ ಜೊತೆ ಮಾತನಾಡುವುದನ್ನು ಬಿಟ್ಟು ಕುಂತಳು ಪವಿತ್ರಾ ಗೌಡ. ಹಾಗಂಥ ತನ್ನ ಸಖಿಯನ್ನ ಸಂತೈಸಲು ದಾಸ, ದುಬೈನಿಂದ ಓಡೋಡಿಯೇನು ಬರಲಿಲ್ಲ. ಬೆಂಗಳೂರಿಗೆ ಬಂದ ನಂತರ ಸೀದಾ ಆಕೆಯನ್ನು ನೋಡಲು ಕೂಡ ಹೋಗಲಿಲ್ಲ. ಆದರೆ, ಅದ್ಯಾವಾಗ ಕರಿಯ ತಿಂಗಳುಗಳು ಕಳೆದರೂ ತನ್ನ ಮನೆಕಡೆ ಬರೋದನ್ನೇ ನಿಲ್ಲಿಸಿದ್ನೋ, ಆಗ ಪವಿತ್ರಾಗೆ ಸಹಿಸಲಾಗಲಿಲ್ಲ. ಏನಾದರೂ ಮಾಡಿ, ಮತ್ತೆ ದರ್ಶನ್ ನ ತನ್ನತ್ತ ಸೆಳೆಯಲು ಪವಿತ್ರಾ ಗೌಡ ಪ್ಲಾನು ಮಾಡುತ್ತಿದ್ದಳು. ಆಗ ಶುರುವಾಗಿದ್ದೇ ಈ ರೇಣುಕಾಸ್ವಾಮಿಯ ಎಪಿಸೋಡು.
ಅದ್ಯಾವನೋ ಗೌತಮ್ ಕೆ ಎಸ್ ಎಂಬ ಹುಡುಗ ಅಮ್ಮಾಜಿ ಪವಿತ್ರಾಗೆ ಕೆಟ್ಟದಾಗಿ ಮೆಸೇಜು ಮಾಡುತ್ತಿದ್ದಾನೆʼ ಅಂತಾ ಪವನ ಬಂದು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿದ್ದ ಯಜಮಾನನ ಕಿವಿ ಕಚ್ಚಿದ್ದ. ಎಷ್ಟೇ ಆದರೂ ಹತ್ತು ವರ್ಷದ ಸಖಿಯಲ್ಲವಾ? ಕಾಟೇರ ಕಟಕಟಕಟಕಟ ಅಂಥಾ ಹಲ್ಲು ಕಡಿದ. ಮುಂದಾಗಿದ್ದು ಘನಘೋರ ದುರಂತ.

ಹೀಗೆ ಸಿನಿಮಾದಲ್ಲಿ ಮಾನವೀಯತೆಯ ಪಾಠವನ್ನೂ ಮಾಡಿ, ಆ ಮಾನವೀಯತೆಯನ್ನು ತಾನೇ ಮರೆತ ದರ್ಶನ್ ಅಲಿಯಾಸ್ ಡಿ ಬಾಸ್ ಈ ಹಿಂದೆ ತನ್ನ ಪ್ರಿಯತಮೆಯ ಮನಸು ಖುಷಿ ಪಡಿಸಲು ಐವತ್ತು-ಅರವತ್ತು ಲಕ್ಷದ ಬಂಗ್ಲೆಯನ್ನಲ್ಲ, ಬರೋಬ್ಬರಿ ಎರಡು ಕೋಟಿಯ ಮನೆಯನ್ನೇ ದಾನವನ್ನಾಗಿ ನೀಡಿದ್ದ. ಹಾಗಂಥ ದರ್ಶನ್‌ನ ಕಲಿಯುಗದ ಕರ್ಣ ಎನ್ನುವಂತೆ ಇಲ್ಲ. ಯಾಕೆಂದರೆ ದರ್ಶನ್ ನೀಡಿದ್ದು ತಾನು ಬೆವರು ಸುರಿಸಿ ದುಡಿದ ದುಡ್ಡನ್ನಲ್ಲ. ಬದಲಿಗೆ ದರ್ಶನ್ ನೀಡಿದ್ದು ಬೇರೆಯವರ ದುಡ್ಡು. ಆ ದುಡ್ಡು ಬೇರೆ ಯಾರದ್ದು ಅಲ್ಲ ಸಾಲದ ಬಾಧೆ ತಾಳಲಾರದೇ ನೇಣಿಗೆ ಕೊರಳೊಡ್ಡಿದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ದುಡ್ಡು.
ಸೌಂದರ್ಯ ಜಗದೀಶ್ ಅವರಿಂದ ಹಣವನ್ನು ಸಾಲದ ರೂಪದಲ್ಲಿ ಪಡೆದ ದರ್ಶನ್, ತನ್ನ ಪ್ರಿಯತಮೆಯ ಸಲುವಾಗಿ ತನ್ನ ಮನೆಯ ಬಳಿ ಕೇವಲ ಒಂದೂವರೆ ಕೀಲೋ ಮೀಟರ್ ಅಂತರದಲ್ಲಿ ಮೂರು ಅಂತಸ್ತಿನ ಮನೆಯನ್ನು ನೀಡಿದ. ಆಕೆಯ ಜೊತೆ ಮನೆಯ ಗ್ರಹಪ್ರವೇಶವನ್ನೂ ಕೂಡ ಮಾಡಿದ. ಆಕೆಯ ಸಾಂಗತ್ಯದ ಫಲ ಆಕೆಯ ಜೊತೆಯಲ್ಲಿಯೇ ಜೈಲನ್ನೂ ಕೂಡ ಪ್ರವೇಶಿಸಿದ ದಾಸ.
ಅಂದ್ಹಾಗೇ ಇದೆಲ್ಲವೂ ನಾವು ಹೇಳಿದ್ದಲ್ಲ. ಕಪೋಲಕಲ್ಪಿತ ಸುದ್ದಿ ಕೂಡ ಇದಲ್ಲ. ಇದೆಲ್ಲವೂ ಕೆಂಪಿ ಮತ್ತು ಕರಿಯ ತಮ್ಮ ಸ್ವಇಚ್ಛೆಯಿಂದ ಹೇಳಿರುವ ಹೇಳಿಕೆಗಳು ಎಂದು ಮಾಧ್ಯಮಗಳು ವರದಿ ಮಾಡಿವೆ. ಪೊಲೀಸರು ಸಲ್ಲಿಸಿರುವ 3991 ಪುಟದ ಜಾರ್ಜ್ಶೀಟ್ನಲ್ಲಿ ಪವಿತ್ರಾ ಗೌಡ ಹೇಳಿಕೆ ಪುಟ ಸಂಖ್ಯೆ 3849 ರಿಂದ 3851 ಪುಟದವರೆಗೆ ದಾಖಲಾಗಿದೆ. ನನ್ನ ಮತ್ತು ಪವಿತ್ರಾ ಗೌಡ ಸಂಬಂಧಕ್ಕೆ ಹತ್ತು ವರ್ಷವಾಗಿದೆ ನಾವು ಇಬ್ಬರು ಲಿವ್ ಇನ್ ರಿಲೇಶನ್‌ಶಿಫ್‌ನಲ್ಲಿದ್ದೇವೆ ಎಂಬ ದರ್ಶನ್ ಹೇಳಿಕೆ ಕೂಡ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.


Click it and Unblock the Notifications











