Kabzaa Chapter 2: 'ಕಬ್ಜ ಚಾಪ್ಟರ್ 2'ನಲ್ಲಿ ಉಪ್ಪಿ, ಕಿಚ್ಚ, ಶಿವಣ್ಣ ಜತೆ ಪವನ್ ಕಲ್ಯಾಣ್; ಪವರ್‌ಫುಲ್ ಪೋಸ್ಟರ್ ರಿಲೀಸ್!
ಕಳೆದ ಶುಕ್ರವಾರವಷ್ಟೇ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ತೆರೆಗೆ ಬಂದ ಆರ್ ಚಂದ್ರು ಹಾಗೂ ಉಪೇಂದ್ರ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಕಬ್ಜ ಯಶಸ್ವಿಯಾಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬರೋಬ್ಬರಿ 4000 ಪರದೆಗಳಲ್ಲಿ ಬಿಡುಗಡೆಗೊಂಡ ಕಬ್ಜ ಉಪೇಂದ್ರ ಸಿನಿ ಕೆರಿಯರ್‌ನಲ್ಲಿ ಬೃಹತ್ ಓಪನಿಂಗ್ ಪಡೆದುಕೊಂಡ ಚಿತ್ರ ಹಾಗೂ ಚೊಚ್ಚಲ ಪ್ಯಾನ್ ಇಂಡಿಯಾ ಚಿತ್ರ ಎನಿಸಿಕೊಂಡಿದೆ.
ಮೊದಲ ದಿನ ವಿಶ್ವದಾದ್ಯಂತ ಬರೋಬ್ಬರಿ 54 ಕೋಟಿ ರೂಪಾಯಿಗಳನ್ನು ಗಳಿಸಿ ದೊಡ್ಡ ಓಪನಿಂಗ್ ಪಡೆದುಕೊಂಡ ಕಬ್ಜ ಚಿತ್ರ ಸದ್ಯ ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ್ದು, ಅಧಿಕೃತವಾಗಿ ಪೋಸ್ಟರ್ ರಿಲೀಸ್ ಮಾಡುವ ಮೂಲಕ ನೂರು ಕೋಟಿ ಕ್ಲಬ್ ಸೇರಿರುವುದನ್ನು ತಿಳಿಸಿದೆ.

ಇನ್ನು ಕಬ್ಜ ಚಿತ್ರದಲ್ಲಿ ಉಪೇಂದ್ರ ಮಾತ್ರವಲ್ಲದೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ವಿಶೇಷ ಪಾತ್ರಗಳನ್ನು ನಿರ್ವಹಿಸಿದ್ದು ಚಿತ್ರದ ಮೇಲಿನ ಹೈಪ್ ಅನ್ನು ಹೆಚ್ಚಿಸಿತ್ತು. ಈ ಇಬ್ಬರೂ ಚಿತ್ರದಲ್ಲಿ ಕೆಲ ನಿಮಿಷಗಳು ಮಾತ್ರ ಕಾಣಿಸಿಕೊಂಡರೂ ಸಹ ಇವರ ಸ್ಕ್ರೀನ್ ಪ್ರೆಸೆನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು.
ಅದರಲ್ಲಿಯೂ ಚಿತ್ರದ ಕೊನೆಯಲ್ಲಿ ಶಿವ ರಾಜ್‌ಕುಮಾರ್ ಎಂಟ್ರಿಗೆ ಸಿಕ್ಕಾಪಟ್ಟೆ ದೊಡ್ಡ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಹೀಗೆ ಚಿತ್ರ ಬಿಡುಗಡೆಯಾಗುವ ಕೊನೆಯಲ್ಲಿ ಚಿತ್ರದಲ್ಲಿ ನಟ ಶಿವ ರಾಜ್‌ಕುಮಾರ್ ಸಹ ನಟಿಸಿರುವ ಸುದ್ದಿಯನ್ನು ಬಿಟ್ಟುಕೊಟ್ಟು ಬಳಿಕ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನಿರ್ದೇಶಕ ಆರ್ ಚಂದ್ರು ಶಿವ ರಾಜ್‌ಕುಮಾರ್ ಎಂಟ್ರಿಯಾಗುತ್ತಾ ಇದ್ದಂತೆ ಕಬ್ಜ 2 ಬರಲಿದೆ ಎಂದು ಚಿತ್ರದಲ್ಲಿ ಟೈಟಲ್ ಮೂಲಕ ತಿಳಿಸಿದ್ದಾರೆ.
ಇನ್ನು ಇದೀಗ ಕಬ್ಜ 2 ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಮಾತ್ರವಲ್ಲದೇ ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಹೌದು, ಕಬ್ಜ 2 ಸಿನಿಮಾದಲ್ಲಿ ಪವನ್ ಕಲ್ಯಾಣ್ ನಟಿಸಲಿದ್ದಾರೆ ಎಂಬುದನ್ನು ಚಿತ್ರತಂಡ ಪೋಸ್ಟರ್ ಬಿಡುಗಡೆಯಾಗುವ ಮೂಲಕ ಬಹಿರಂಗಪಡಿಸಿದೆ. ಉಪ್ಪಿ, ಸುದೀಪ್ ಹಾಗೂ ಶಿವಣ್ಣ ಅವರ ಜತೆ ಪವನ್ ಕಲ್ಯಾಣ್ ಸಹ ಇರುವ ಪೋಸ್ಟರ್ ಇದಾಗಿದ್ದು, ಕಬ್ಜ 2 ಎಂಬ ಟೈಟಲ್ ಇದೆ.
ಹೀಗೆ ಇಬ್ಬರು ಸ್ಟಾರ್‌ಗಳಿರುವ ಮಲ್ಟಿಸ್ಟಾರರ್ ಚಿತ್ರವಾಗಿದ್ದ ಕಬ್ಜ ಬಳಿಕ ಮೂವರು ಸ್ಟಾರ್ ನಟರ ಮಲ್ಟಿಸ್ಟಾರ್‌ಗಳ ಚಿತ್ರವಾಯಿತು ಮತ್ತು ಇದೀಗ ನಾಲ್ವರು ಸ್ಟಾರ್ ನಟರು ನಟಿಸಿರುವ ಚಿತ್ರವಾಗಿದೆ. ಅಲ್ಲದೇ ಕನ್ನಡದ ಸ್ಟಾರ್ ನಟರು ಹಾಗೂ ತೆಲುಗಿನ ಸ್ಟಾರ್ ನಟ ಒಂದೇ ಚಿತ್ರದಲ್ಲಿ ನಟಿಸಲಿರುವುದು ಹೊಸ ಅನುಭವವನ್ನು ಸಿನಿ ರಸಿಕರಿಗೆ ನೀಡಲಿದೆ. ಈ ಚಿತ್ರದ ಮೂಲಕ ಪವನ್ ಕಲ್ಯಾಣ್ ಕನ್ನಡ ಚಲನಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಒಟ್ಟಿನಲ್ಲಿ ಕಬ್ಜ ಚಿತ್ರ ಮೂರನೇ ದಿನದ ಪ್ರದರ್ಶನ ಕಾಣುತ್ತಿರುವಾಗಲೇ ಕಬ್ಜ 2 ಚಿತ್ರದ ಪೋಸ್ಟರ್ ಬಿಡುಗಡೆಗೊಂಡು ತನ್ನ ಹವಾ ಸೃಷ್ಟಿಸಿದೆ.


Click it and Unblock the Notifications











