₹200 ಟಿಕೆಟ್ ದರ ನಿಗದಿಗೆ ಕೋರ್ಟ್ ತಡೆ; 'OG' ಟಿಕೆಟ್ ದರ ಕೇಳಿದ್ರೆ ಬೆಚ್ಚಿ ಬೀಳ್ತಿರಾ!
ರಾಜ್ಯದಲ್ಲಿ ಸರ್ಕಾರ ಏಕರೂಪ ಸಿನಿಮಾ ಟಿಕೆಟ್ ದರ ನಿಗದಿಗೆ ಮುಂದಾಗಿತ್ತು. 200 ರೂ. ಟಿಕೆಟ್ ದರ ಮೀರಬಾರದು ಎಂದು ಆದೇಶ ಹೊರಡಿಸಿತ್ತು. ಸೆಪ್ಟೆಂಬರ್ 13ರಂದು ಈ ನಿಮಯ ಜಾರಿಗೆ ಬಂದಿತ್ತು. ಆದರೆ 10 ದಿನಗಳಲ್ಲಿ ಇದಕ್ಕೆ ಹಿನ್ನಡೆಯಾಗಿದೆ. ಹೈಕೋರ್ಟ್ ಸಿನಿಮಾ ಟಿಕೆಟ್ ದರ ನಿಗದಿಗೆ ತಡೆಯಾಜ್ಞೆ ತಂದಿದೆ. ಅದರ ಪರಿಣಾಮ ಈಗ 'OG' ಸಿನಿಮಾ ಟಿಕೆಟ್ ದರದಲ್ಲಿ ಗೊತ್ತಾಗುತ್ತಿದೆ.
ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 200 ರೂ. ಟಿಕೆಟ್ ದರ, ತೆರಿಗೆ 36 ರೂ. ಸೇರಿ 236 ರೂ.ಗೆ ಒಂದು ಟಿಕೆಟ್ ಮಾರಾಟ ಮಾಡಬೇಕು ಎಂದು ಸರ್ಕಾರ ನಿಯಮ ಜಾರಿಗೆ ತಂದಿತ್ತು. ಸೆಪ್ಟೆಂಬರ್ 12ರಂದು ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ಮರುದಿನವೇ ಇದು ಜಾರಿಗೆ ಬಂದಿತ್ತು. ಗೋಲ್ಡ್‌ಕ್ಲಾಸ್ ಬಿಟ್ಟು ಸಾಧಾರಣ ಮಲ್ಟಿಪ್ಲೆಕ್ಸ್‌ಗಳಲ್ಲಿ 236 ರೂ.ಗೆ ಬುಕ್ ಮಾಡಬಹುದು ಎಂದು ಸಿನಿರಸಿಕರು ಖುಷಿಯಾಗಿದ್ದರು. ಆದರೆ ಬಹಳ ದಿನ ಈ ಸಂಭ್ರಮ ಉಳಿಯಲಿಲ್ಲ.

ಸಿನಿಮಾ ಟಿಕೆಟ್ ದರ ವಿಚಾರದಲ್ಲಿ ಸರ್ಕಾರ ಹೊರಡಿಸಿದ್ದ ಆದೇಶದ ವಿರುದ್ಧ ಹೊಂಬಾಳೆ ಫಿಲ್ಮ್ಸ್ ಸೇರಿದಂತೆ ಕೆಲ ಚಿತ್ರನಿರ್ಮಾಣ ಸಂಸ್ಥೆಗಳು ಹಾಗೂ ಮಲ್ಟಿಪ್ಲೆಕ್ಸ್ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿದ್ದವು. ಕಳೆದ ವಾರ ಈ ಸಂಬಂಧ ಕೋರ್ಟ್‌ನಲ್ಲಿ ವಾದ- ಪ್ರತಿವಾದ ನಡೆದಿತ್ತು. ನಿನ್ನೆ(ಸೆಪ್ಟೆಂಬರ್ 23) ಕೋರ್ಟ್ ಆದೇಶ ಹೊರ ಬಿದ್ದಿದ್ದು ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಫಿಲ್ಮ್ ಚೇಂಬರ್ ಕೂಡ ಸಿನಿಮಾ ಟಿಕೆಟ್ ದರ ನಿಗದಿಗೆ ಒತ್ತಾಯಿಸಿತ್ತು.
10 ದಿನಗಳಲ್ಲಿ ಟಿಕೆಟ್ ದರ ನಿಗದಿ ನಿಯಮ ಬದಲಾಗಿದೆ. ಈಗ ದಿಢೀರನೆ ತೆಲುಗಿನ 'OG' ಸಿನಿಮಾ ಟಿಕೆಟ್ ದರ ಹೆಚ್ಚಿಸಲಾಗಿದೆ. ಪವನ್ ಕಲ್ಯಾಣ್ ನಟನೆಯ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಕಳೆದ ನಾಲ್ಲೈದು ದಿನಗಳಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿತ್ತು. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಬುಕ್ಕಿಂಗ್ ಈಗ ಶುರುವಾಗಿದ್ದು ಟಿಕೆಟ್ ದರ ನೋಡಿದವರು ಶಾಕ್ ಆಗಿದ್ದಾರೆ. ಬುಕ್‌ಮೈಶೋ ವೆಬ್‌ಸೈಟ್‌ನಲ್ಲಿ ಅದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಅಚ್ಚರಿ ಎಂದರೆ ಹೈದರಾಬಾದ್‌ಗಿಂತ ಬೆಂಗಳೂರಿನಲ್ಲಿ 'OG' ಸಿನಿಮಾ ಟಿಕೆಟ್ ದರ ಜಾಸ್ತಿಯಿದೆ. ಇಂದು ರಾತ್ರಿ 10 ಗಂಟೆಗೆ ಚಿತ್ರದ ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಈಗಾಗಲೇ ಸಾಕಷ್ಟು ಜನ ಟಿಕೆಡ್ ಬುಕ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಗೋಲ್ಡ್ ಕ್ಲಾಸ್ ಟಿಕೆಟ್ ದರ 900 ರೂ. ದಾಟಿದೆ. ಇತರೆ ಸ್ಕ್ರೀನ್ ಗಳಲ್ಲಿ 650 ರೂ.ಗೂ ಹೆಚ್ಚಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಕೂಡ 500 ರೂ, 600 ರೂ, 700 ರೂ,ಗೆ ದರ ನಿಗದಿ ಮಾಡಲಾಗಿದೆ.
ಸರಿ ಪ್ರೀಮಿಯರ್ ಶೋ ಹಾಗಾಗಿ ಹೆಚ್ಚು ಟಿಕೆಟ್ ದರ ಇರಬಹುದು ಎಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ನಾಳೆ ಕೂಡ ಬೆಂಗಳೂರಿನಲ್ಲಿ 'OG' ಸಿನಿಮಾ ಟಿಕೆಟ್ ದರ 800 ರೂ, 900 ರೂ, ನಿಗದಿಯಾಗಿದೆ. ಹೈದರಾಬಾದ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೂಡ ಟಿಕೆಟ್ ದರ 550 ರೂ, ಮೀರಿಲ್ಲ. ಆದರೆ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ 800 ರೂ, 900 ರೂ, ಇರುವುದು ವಿಪರ್ಯಾಸವೇ ಸರಿ. ಮುಂದಿನ ವಾರ 'ಕಾಂತಾರ- 1' ಸಿನಿಮಾ ಬಿಡುಗಡೆ ಆಗಲಿದ್ದು ಟಿಕೆಟ್ ದರ ಎಷ್ಟು ಇರುತ್ತೋ ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾ ಟಿಕೆಟ್ ದರ ವಿಚಾರದಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ. ರಾ ಗೋವಿಂದು ಟಿವಿ9 ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
ಸುಜಿತ್ ನಿರ್ದೇಶನದ 'OG' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಪವನ್ ಕಲ್ಯಾಣ್ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸಿದ್ದಾರೆ. ಇಮ್ರಾನ್ ಹಶ್ಮಿ ವಿಲನ್ ಆಗಿ ಸೆಡ್ಡು ಹೊಡೆದಿದ್ದಾರೆ. ಡಿವಿವಿ ದಾನಯ್ಯ ಚಿತ್ರ ನಿರ್ಮಾಣ ಮಾಡಿದ್ದು ಎಸ್. ತಮನ್ ಸಂಗೀತವಿದೆ. ಪವನ್ ನಟಿಸಿರುವ ಕೊನೆಯ ಸಿನಿಮಾಗಳಲ್ಲಿ ಇದು ಒಂದು. ಹಾಗಾಗಿ ದೊಡ್ಡದಾಗಿ ಸಿನಿಮಾ ಸ್ವಾಗತಿಸಲು ಅಭಿಮಾನಿಗಳು ಮುಂದಾಗಿದ್ದಾರೆ.


Click it and Unblock the Notifications











