ಮತ್ತೆ ತೆರೆಗೆ ಬರಲಿದೆ ದಿಗಂತ್ - ಪವನ್ ಕುಮಾರ್ ಕಾಂಬಿನೇಶನ್‌ನ 'ಲೈಫು ಇಷ್ಟೇನೆ'
ರಿ ರಿಲೀಸ್ ಸದ್ಯ ಸಿನಿಮಾ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಟ್ರೆಂಡ್. ಈ ಹಿಂದೆ ಆಗೊಮ್ಮೆ ಈಗೊಮ್ಮೆ ಚಿತ್ರಗಳು ಮರು ಬಿಡುಗಡೆಯಾಗುತ್ತಿದ್ದವು. ಅದರಲ್ಲೂ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದ ಚಿತ್ರಗಳು, ಹೆಚ್ಚು ಕಲೆಕ್ಷನ್ ಮಾಡಿದ್ದ ಚಿತ್ರಗಳನ್ನು ಮರು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈಗ ತಿಂಗಳಗೊಂದು ಚಿತ್ರವಾದರೂ ಮರು ಬಿಡುಗಡೆಯಾಗುವುದು ಖಚಿತ. ಅದರಲ್ಲಿಯೂ ತೆಲುಗಿನಲ್ಲಿ ದೊಡ್ಡ ಸ್ಟಾರ್ ನಟರ ಹುಟ್ಟುಹಬ್ಬದ ಪ್ರಯುಕ್ತ ಆ ನಟರ ವಿಂಟೇಜ್ ಹಿಟ್ ಚಿತ್ರಗಳನ್ನು ಮರು ಬಿಡುಗಡೆ ಮಾಡಲಾಗಿತ್ತು.
ಆಶ್ಚರ್ಯವೆಂದರೆ ಈ ಚಿತ್ರಗಳೂ ಸಹ ಕೋಟಿ ಕೋಟಿ ಗಳಿಸಿದವು. ಹೀಗೆ ವಿಂಟೇಜ್ ಚಿತ್ರಗಳಿಂದಲೂ ಗಳಿಕೆ ಬರುತ್ತಿದೆ ಎಂಬುದನ್ನು ತಿಳಿದ ತೆಲುಗು ಸಿನಿಮಾ ನಿರ್ಮಾಪಕರು ಹಾಗೂ ವಿತರಕರು ಮತ್ತಷ್ಟು ಚಿತ್ರಗಳನ್ನು ಮರು ಬಿಡುಗಡೆ ಮಾಡಲು ನಿರ್ಧರಿಸಿದರು. ಇನ್ನು ಕೆಲ ಚಿತ್ರಗಳನ್ನು ದುಡ್ಡು ಮಾಡಲು ಮರು ಬಿಡುಗಡೆ ಮಾಡಿದರೆ, ಇನ್ನೂ ಕೆಲ ಚಿತ್ರಗಳನ್ನು ಸಂದರ್ಭಕ್ಕೆ ತಕ್ಕಂತೆ ಜನರಿಗೆ ಮನರಂಜನೆ ನೀಡಲು ಮರು ಬಿಡುಗಡೆ ಮಾಡಲಾಗುತ್ತದೆ.

ಇದೀಗ ಅಂತಹದ್ದೇ ಚಿತ್ರವಾದ ದಿಗಂತ್ ನಟನೆಯ ಲೈಫು ಇಷ್ಟೇನೆ ಮರುಬಿಡುಗಡೆಯಾಗಲು ಸಿದ್ಧವಾಗಿದೆ. ಹೌದು, 2011ರಲ್ಲಿ ತೆರೆಕಂಡಿದ್ದ ಪವನ್ ಕುಮಾರ್ ನಿರ್ದೇಶನದ ಮೊದಲ ಸಿನಿಮಾ ಲೈಫು ಇಷ್ಟೇನೆ ಚಿತ್ರವನ್ನು ಆಯ್ದ ಚಿತ್ರಮಂದಿರಗಳಲ್ಲಿ ಇದೇ ಫೆಬ್ರವರಿ 10ರಂದು ಮರು ಬಿಡುಗಡೆ ಮಾಡಲಾಗುತ್ತಿದೆ. ಈ ಕುರಿತು ನಿರ್ದೇಶಕ ಪವನ್ ಕುಮಾರ್ ಪೋಸ್ಟ್ ಹಂಚಿಕೊಂಡಿದ್ದು, ಪ್ರೇಮಿಗಳ ದಿನಾಚರಣೆಯ ವಾರದ ಪ್ರಯುಕ್ತ ಲೈಫು ಇಷ್ಟೇನೆ ಚಿತ್ರವನ್ನು ಮರು ಬಿಡುಗಡೆ ಮಾಡಲಾಗ್ತಿದೆ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಹಾಗೂ ಪಂಚರಂಗಿ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದರು. ಇನ್ನು ಲೈಫು ಇಷ್ಟೇನೆ ಬಳಿಕ ಲೂಸಿಯಾ ಹಾಗೂ ಯು ಟರ್ನ್ ಚಿತ್ರಗಳನ್ನು ನಿರ್ದೇಶಿಸಿ ಗೆದ್ದ ಪವನ್ ಕುಮಾರ್ ಲೈಲಾ ಹಾಗೂ ಕುಡಿ ಎಡಮೈತೆ ಎಂಬ ವೆಬ್ ಸರಣಿಗಳನ್ನೂ ಸಹ ನಿರ್ದೇಶಿಸಿದ್ದರು. ಇನ್ನು ಯು ಟರ್ನ್ ಬಳಿಕ ಯಾವುದೇ ಚಿತ್ರವನ್ನೂ ಸಹ ನಿರ್ದೇಶಿಸದಿದ್ದ ಪವನ್ ಕುಮಾರ್ ಈಗ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಧೂಮಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್ ಹಾಗೂ ಅಪರ್ಣ ಬಾಲಮುರಳಿ ನಾಯಕ - ನಾಯಕಿ ಪಾತ್ರ ನಿರ್ವಹಿಸಿದ್ದಾರೆ.


Click it and Unblock the Notifications











