ನಟನೆ ಕಡೆಗೆ ಮತ್ತೆ 'ಯೂ-ಟರ್ನ್' ಹೊಡೆದ 'ಲೂಸಿಯಾ' ಪವನ್ ಕುಮಾರ್
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಹುಟ್ಟಿದ್ದರೂ, ಪವನ್ ಕುಮಾರ್ ಖ್ಯಾತಿ ಪಡೆದಿರುವುದು ಕರ್ನಾಟಕದಲ್ಲಿ. ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿ ಪವನ್ ಕುಮಾರ್ ಜನಪ್ರಿಯತೆ ಪಡೆದಿರುವುದು ಕನ್ನಡ ಚಿತ್ರರಂಗದಲ್ಲಿ.
'ಮನಸಾರೆ', 'ಪಂಚರಂಗಿ' ಚಿತ್ರಗಳಿಗೆ ಕಥೆ-ಚಿತ್ರಕಥೆ ಬರೆದ ಪವನ್ ಕುಮಾರ್ 'ಲೈಫು ಇಷ್ಟೇನೇ' ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟರು. 'ಲೂಸಿಯಾ', 'ಯೂ ಟರ್ನ್' ನಂತಹ ಜನ ಮೆಚ್ಚುಗೆಯ ಚಿತ್ರಗಳನ್ನು ನಿರ್ದೇಶನ ಮಾಡಿರುವ ಪವನ್ ಕುಮಾರ್ ಉತ್ತಮ ನಟ ಕೂಡ ಹೌದು.
'ಮಿಸ್ಟರ್ ಗರಗಸ', 'ಇಂತಿ ನಿನ್ನ ಪ್ರೀತಿಯ', 'ಮನಸಾರೆ', 'ಗುಳ್ಟು' ಚಿತ್ರಗಳಲ್ಲಿ ಪವನ್ ಕುಮಾರ್ ಅಭಿನಯಿಸಿದ್ದರು. ಇದೀಗ 'ಅಳಿದು ಉಳಿದವರು' ಸಿನಿಮಾದ ಪ್ರಮುಖ ಪಾತ್ರಕ್ಕೆ ಪವನ್ ಕುಮಾರ್ ಬಣ್ಣ ಹಚ್ಚಿದ್ದಾರೆ.

'ಅಳಿದು ಉಳಿದವರು' ಚಿತ್ರಕ್ಕೆ ಆಶು ಬೆದ್ರ ಹೀರೋ. ಆದರೂ, ಸಿನಿಮಾದಲ್ಲಿ ಪವನ್ ಕುಮಾರ್ ಗೆ ಮಹತ್ವದ ಪಾತ್ರ ಇದ್ಯಂತೆ. 'ಕಹಿ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ಅರವಿಂದ್ ಶಾಸ್ತ್ರಿ 'ಅಳಿದು ಉಳಿದವರು' ಚಿತ್ರಕ್ಕೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
'ಅಳಿದು ಉಳಿದವರು' ಔಟ್ ಅಂಡ್ ಔಟ್ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಪ್ರಮುಖ ತಾರಾಗಣದಲ್ಲಿ ಆಶು ಬೆದ್ರ, ಪವನ್ ಕುಮಾರ್ ಜೊತೆಗೆ ಸಂಗೀತ ಭಟ್, ಅತುಲ್ ಕುಲಕರ್ಣಿ, ಧರ್ಮಣ್ಣ ಕೂಡ ಇರಲಿದ್ದಾರೆ.
'ಅಳಿದು ಉಳಿದವರು' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ನಟನೆ ಜೊತೆಗೆ ನಿರ್ಮಾಣದ ಜವಾಬ್ದಾರಿಯೂ ಆಶು ಬೆದ್ರ ಹೆಗಲ ಮೇಲಿದೆ. ಸದ್ಯದಲ್ಲೇ 'ಅಳಿದು ಉಳಿದವರು' ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ.


Click it and Unblock the Notifications











