ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಪವನ್ ಒಡೆಯರ್
Recommended Video

ಕನ್ನಡದ ಸ್ಟಾರ್ ನಿರ್ದೇಶಕ ಪವನ್ ಒಡೆಯರ್ ಇಂದು ದಾಂಪತ್ಯ ಜೀವನಕ್ಕೆ ಲಗ್ಗೆ ಇಟ್ಟಿದ್ದಾರೆ. ಬಾಗಲಕೋಟೆಯಲ್ಲಿ ಇಂದು ಅವರ ಮದುವೆ ಅದ್ದೂರಿಯಾಗಿ ನಡೆದಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ರವರ ನಿಶ್ಚಿತಾರ್ಥ ಸಮಾರಂಭ ಬಾಗಲಕೋಟೆಯಲ್ಲಿ ನಡೆದಿತ್ತು. ಅಪೇಕ್ಷಾ ಪುರೋಹಿತ್ ಮೂಲತಃ ಬಾಗಲಕೋಟೆಯವರಾಗಿದ್ದು, ಅಲ್ಲಿಯ ವಿದ್ಯಗಿರಿಯಲ್ಲಿರುವ ಗೌರಿಶಂಕರ್ ಕಲ್ಯಾಣ ಮಂಟಪದಲ್ಲಿ ವಿವಾಹ ಕಾರ್ಯಕ್ರಮ ಸಹ ಜರುಗಿದೆ. ಇಂದು (ಆಗಸ್ಟ್ 20) ಬೆಳಗ್ಗೆ 9.05 ಶುಭ ಮುಹೂರ್ತದಲ್ಲಿ ಅಪೇಕ್ಷಾ ಕೊರಳಿಗೆ ಪವನ್ ತಾಳಿ ಕಟ್ಟಿದ್ದಾರೆ.
ಪವನ್ ಒಡೆಯರ್ ಹಾಗೂ ಅಪೇಕ್ಷಾ ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಆದ ಎಂಟು ತಿಂಗಳ ಬಳಿಕ ಈ ಜೋಡಿ ಹಸೆಮಣೆ ಏರಿದೆ. ನಿನ್ನೆ ಆರತಕ್ಷತೆ ಕಾರ್ಯಕ್ರಮ ಸಹ ಗ್ರಾಂಡ್ ಆಗಿ ನೆರವೇರಿದೆ.

ಅಂದಹಾಗೆ, ನಿರ್ದೇಶಕ ಪವನ್ ಒಡೆಯರ್ ಸದ್ಯ ಪುನೀತ್ ರಾಜ್ ಕುಮಾರ್ ಅವರ 'ನಟ ಸಾರ್ವಭೌಮ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೂ ಮುಂಚೆ 'ರಣವಿಕ್ರಮ', 'ನಟರಾಜ ಸರ್ವಿಸ್', 'ಗೂಗ್ಲಿ' ಹಾಗೂ 'ಗೋವಿಂದಾಯ ನಮಃ' ಸಿನಿಮಾಗಳನ್ನು ಪವನ್ ನಿರ್ದೇಶನ ಮಾಡಿದ್ದರು.

ಅಪೇಕ್ಷಾ ಸಹ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಟಿ ಎನ್ ಸೀತಾರಾಮ್ ಅವರ ನಿರ್ದೇಶನದಲ್ಲಿ ಬಂದ 'ಕಾಫಿತೋಟ' ಸಿನಿಮಾದ ಒಂದು ಪಾತ್ರದಲ್ಲಿ ಅಪೇಕ್ಷ ನಟಿಸಿದ್ದರು.


Click it and Unblock the Notifications











