ಯಾವ ಚಿತ್ರವನ್ನು ಒಪ್ಪದ ಬಿ.ಸರೋಜಾದೇವಿ ನಟಸಾರ್ವಭೌಮ ಚಿತ್ರವನ್ನು ಒಪ್ಪಿಕೊಂಡಿದ್ದೇಕೆ ?
ಅಭಿನಯ ಸರಸ್ವತಿ .. ಕನ್ನಡದ ಗಿಳಿ .. ಎಂದೇ ಖ್ಯಾತರಾದ ಪದ್ಮಭೂಷಣ .. ಪದ್ಮಶ್ರೀ .. ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ .. ಆರೂವರೆ ದಶಕಗಳ ಕಾಲ ಕಲಾ ಸೇವೆಯನ್ನು ಮಾಡಿದ ಭಾರತದ ಖ್ಯಾತ ನಾಯಕಿ.. ಕನ್ನಡದ ಹೆಮ್ಮೆಯ ಮಹಾ ನಟಿ .. ಬಿ.ಸರೋಜಾದೇವಿ ತಮ್ಮ ವೃತ್ತಿ ಬದುಕಿನಲ್ಲಿ 5 ಭಾಷೆಗಳಲ್ಲಿ 200ಕ್ಕೂ ಅಧಿಕ ಚಿತ್ರಗಳನ್ನು ಮಾಡಿದ್ದರು.
ಆ ಪೈಕಿ ಹತ್ತು ಹಲವು ಚಿತ್ರಗಳು ಹಲವಾರು ವಿಶೇಷತೆಗಳಿಂದ ಕೂಡಿವೆ. ಹಲವು ಚಿತ್ರಗಳ ಜೊತೆ ಸರೋಜಾ ದೇವಿಯವರ ನೆನಪುಗಳಿವೆ. ಆ ಪೈಕಿ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಕೂಡ ಒಂದು.

ಹೌದು, ಅಸಲಿಗೆ 1998ರ ನಂತರ ಸರೋಜಾ ದೇವಿ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿದ್ದರು. ಹಲವರು ಸರೋಜಾ ದೇವಿ ಅವರನ್ನು ಮರಳಿ ಕರೆತರುವ ಪ್ರಯತ್ನ ಮಾಡಿದ್ದರು ಕೂಡ ಯಾವುದು ಫಲಿಸಿರಲಿಲ್ಲ. ಯಾವ ಕಥೆ ಕೂಡ ಬಿ.ಸರೋಜಾ ದೇವಿ ಅವರ ಹೃದಯವನ್ನು ಗೆದ್ದಿರಲಿಲ್ಲ.
ಆದರೆ .. 'ನಟಸಾರ್ವಭೌಮ' ವಿಚಾರದಲ್ಲಿ ಹೀಗೆ ಆಗಲಿಲ್ಲ. ಬದಲಿಗೆ 'ನಟಸಾರ್ವಭೌಮ' ಚಿತ್ರದಲ್ಲಿ ನೀವೊಂದು ಪಾತ್ರ ಮಾಡಬೇಕೆಂದು ನಿರ್ದೇಶಕರ ಪವನ್ ಒಡೆಯರ್ ಮನವಿಯನ್ನು ಮಾಡಿಕೊಂಡಾಗ ಸರೋಜಾ ದೇವಿ ಖುಷಿ ಖುಷಿಯಾಗಿಯೇ ಚಿತ್ರವನ್ನು ಒಪ್ಪಿಕೊಂಡಿದ್ದರು. ಅವರು ಹೀಗೆ ಒಪ್ಪಿಕೊಳ್ಳಲು ಎರಡು ಕಾರಣಗಳು ಕೂಡ ಇದ್ದವು.
ಆ ಕಾರಣಗಳನ್ನು ಮತ್ತು ಅವರ ನೆನಪುಗಳನ್ನು ಚಿತ್ರದ ನಿರ್ದೇಶಕ ಪವನ್ ಒಡೆಯರ್ ನಿಮ್ಮ ''ಫಿಲ್ಮಿ ಬೀಟ್ ಕನ್ನಡ'' ವೆಬ್ ಸೈಟ್ ಜೊತೆ ಹಂಚಿಕೊಂಡಿದ್ದಾರೆ. ಸರೋಜಾ ದೇವಿ ಅವರನ್ನು ನೆನೆದು ಭಾವುಕರಾಗಿದ್ಧಾರೆ.
ಈ ಕುರಿತು ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ಪವನ್ ಒಡೆಯರ್, ಸರೋಜಾ ದೇವಿ ಅವರಂತಹದ ಮಹಾನ್ ಕಲಾವಿದೆಗೆ ಚಿತ್ರ ನಿರ್ದೇಶಿಸುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಹೇಳಿದ್ದಾರೆ. ಮೂರು ದಿನಗಳ ಕಾಲ ಅವರ ಜೊತೆ ನಾವು ಚಿತ್ರೀಕರಣ ಮಾಡಿದ್ವಿ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ಧಾರೆ.

''ಅವರಿಗೆ ನಮಗಿಂತ ಮೊದಲು ತುಂಬಾ ಜನ ತಮ್ಮ ಚಿತ್ರಗಳಿಗೆ ಸಂಪರ್ಕಿಸಿದ್ದರು ಆದರೆ ಅವರು ನಮ್ಮ ಚಿತ್ರ ಒಪ್ಪಿಕೊಂಡರು. ಅದಕ್ಕೆ ಒಂದು ನಮ್ಮ ಚಿತ್ರದಲ್ಲಿ ಅವರು ಅವರದ್ದೇ ಪಾತ್ರವನ್ನು ಅಂದರೆ ಬಿ.ಸರೋಜಾದೇವಿಯಾಗಿಯೇ ಅಭಿನಯಿಸಬೇಕಿತ್ತು. ಈ ಅಂಶ ಅವರಿಗೆ ತುಂಬಾ ಇಷ್ಟವಾಗಿತ್ತು ಅವರ ಆಪ್ತರ ಬಳಿ ಈ ವಿಚಾರ ಅವರು ಹೇಳಿಕೊಂಡಿದ್ದರಂತೆ, ಇನ್ನು ಇದಲ್ಲದೇ ಅಪ್ಪು ಸರ್ ಜೊತೆ ಅಭಿನಯಿಸುವ ಆಸೆ ಅವರಿಗೆ ಇತ್ತು, ಅಪ್ಪು ಸರ್ ಚಿಕ್ಕವರಿದ್ದಾಗ ಅವರ ಜೊತೆ 'ಯಾರಿವನು' ಮಾಡಿದ್ದರು ಅದಾದ ನಂತರ ಅವರಿಗೆ ಮತ್ತೊಂದು ಚಿತ್ರ ಮಾಡಬೇಕೆನ್ನುವ ಆಸೆ ಇತ್ತಂತೆ, ಇನ್ನು ಅಪ್ಪು ಸರ್ ಅವರ ರಾಜಕುಮಾರ ಚಿತ್ರ ಅವರಿಗೆ ತುಂಬಾ ಇಷ್ಟ ಆಗಿತ್ತು ಹೀಗಾಗಿ ಅಪ್ಪು ಜೊತೆ ಒಂದು ಚಿತ್ರ ಮಾಡಬೇಕು ಅಂತ ಅವರು ಹೇಳಿದ್ದರು'' ಎಂದು ಪವನ್ ಒಡೆಯರ್ ಹೇಳಿದ್ದಾರೆ.
ಮುಂದುವರೆದು '' ಅವರು ಅಷ್ಟು ದೊಡ್ಡ ಕಲಾವಿದರಾದರು, ಅಷ್ಟೆಲ್ಲ ಹೆಸರು ಮಾಡಿ ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿದ್ದರು ಕೂಡ ಅವರ ಶಿಸ್ತು ಮತ್ತು ಶ್ರದ್ದೆ ತುಂಬಾ ಇತ್ತು. ಆ ವಯಸ್ಸಿನಲ್ಲಿ ಕೂಡ ಮೊದಲೇ ಅವರ ಸೀನ್ಸ್‌ಗಳ ಪೇಪರ್ ತಗೊಂಡು ಮೊದಲೇ ಅದಕ್ಕೆ ತಯಾರಿಯನ್ನು ಮಾಡಿಕೊಳ್ತಿದ್ದರು, ನಾವು ಮೂರು ದಿನ ಚಿತ್ರೀಕರಣ ಮಾಡಿದ್ವಿ ಅದರಲ್ಲಿ ಒಂದು ದಿನ ಇಡೀ ಚಿತ್ರತಂಡಕ್ಕೆ ಅವರು ಮನೆಯಿಂದನೇ ಊಟ ಮಾಡಿಕೊಂಡು ಬಂದಿದ್ದರು. ಇನ್ನು ಅದೇ ಸಮಯದಲ್ಲಿ ನನ್ನ ಮದುವೆ ಕೂಡ ಆಗಿತ್ತು. ಹೀಗಾಗಿ ನನ್ನ ಪತ್ನಿಗೆ ಒಂದು ಸೀರೆಯನ್ನು ಕೂಡ ಅವರು ಕೊಟ್ಟಿದ್ದರು'' ಎಂದು ಬಿ ಸರೋಜಾದೇವಿಯವರನ್ನು ಪವನ್ ಒಡೆಯರ್ ನೆನಪು ಮಾಡಿಕೊಂಡಿದ್ದಾರೆ.
ಹೀಗೆ ಬಿ ಸರೋಜಾದೇವಿ ಅವರು ತುಂಬಾನೇ ಇಷ್ಟ ಪಟ್ಟು ನಟಸಾರ್ವಭೌಮ ಚಿತ್ರವನ್ನು ಒಪ್ಪಿಕೊಂಡಿದ್ದರು. ಆದರೆ ಇಂದು ಸರೋಜಾದೇವಿಯವರು ಕೂಡ ನಮ್ಮ ಜೊತೆ ಇಲ್ಲ. ಕನ್ನಡಿಗರ ನಟಸಾರ್ವಭೌಮ ಪುನೀತ್ ರಾಜ್ ಕುಮಾರ್ ಕೂಡ ಇಲ್ಲ. ಈ ವಿಚಾರ ದುಖವನ್ನು ಇನ್ನು ಹೆಚ್ಚಿಸುತ್ತೆ ಎಂದು ಹೇಳಿರುವ ಪವನ್ ಒಡೆಯರ್ ರೀಲ್ ತಾಯಿ ಮತ್ತು ಮಗ ಆ ಸ್ವರ್ಗದಲ್ಲಿ ಜೊತೆ ಸೇರಲಿ ಅಲ್ಲಿಯೂ ಬಹುಶ 'ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ' ಹಾಡು ಮರುಕಳಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ಧಾರೆ. ಸರೋಜಮ್ಮ ಕೇವಲ ಕನ್ನಡದ ನಾಯಕಿ ಮಾತ್ರ ಆಗಿರಲಿಲ್ಲ ಆ ಕಾಲದಲ್ಲಿಯೇ ಪ್ಯಾನ್ ಇಂಡಿಯಾ ನಟಿಯಾದವರು ಅವರು ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಕೂಡ ಪವನ್ ಒಡೆಯರ್ ಹೇಳಿದ್ದಾರೆ.


Click it and Unblock the Notifications











