ರಾಜಕಾರಣಿಗಳ ಬ್ಯಾನರ್ ತೆಗೆಯುವ ತಾಕತ್ತಿಲ್ಲದೇ ಅಪ್ಪು ಬ್ಯಾನರ್ ತೆಗೆಯಲು ಬಂದಿದ್ದೀರಾ? ಸಾರ್ವಜನಿಕರ ಪ್ರಶ್ನೆ
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮನ್ನು ಅಗಲಿದರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಅಲಂಕರಿಸಿದ್ದಾರೆ. ರಾಜ್ಯದ ಮೂಲೆ ಮೂಲೆಯ ರಸ್ತೆಗಳಲ್ಲಿ ಅಪ್ಪು ಪುತ್ಥಳಿ ಇಟ್ಟು, ಬ್ಯಾನರ್, ಫ್ಲೆಕ್ಸ್ ಕಟ್ಟಿ ಅಭಿಮಾನಿಗಳು ನೆಚ್ಚಿನ ನಟನನ್ನು ಸ್ಮರಿಸುತ್ತಿದ್ದಾರೆ. ನಗರದಲ್ಲಿ ಬಿಬಿಎಂಪಿ ಅಧಿಕಾರಿಗಳು ಪವರ್ ಸ್ಟಾರ್ ಬ್ಯಾನರ್ ತೆರವುಗೊಳಿಸಲು ಮುಂದಾದಾಗ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ ಹಾಕಿ ನಗರದ ಸೌಂದರ್ಯ ಹಾಳು ಮಾಡುತ್ತಿರುವವರ ವಿರುದ್ಧ ಯಾಕೆ ಪಾಲಿಕೆ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್ ಇತ್ತೀಚೆಗೆ ಚಾಟಿ ಬೀಸಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿತ್ತು. ಇನ್ನು ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ತೆರವು ಮತ್ತು ತಪ್ಪಿತಸ್ಥರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ 4 ವಾರಗಳಲ್ಲಿ ವರದಿ ನೀಡುವಂತೆ ಬಿಬಿಎಂಪಿಗೆ ಕೋರ್ಟ್ ತಾಕೀತು ಮಾಡಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಅನಧಿಕೃತ ಪ್ಲೆಕ್ಸ್ ಬ್ಯಾನರ್ ವಿರುದ್ಧ ಫೀಲ್ಡ್‌ಗೆ ಇಳಿದಿದ್ದಾರೆ.

ವಿಧಾನಸಭೆ ಚುನಾವಣೆ ಸನಿಹವಾಗುತ್ತಿರುವ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಅದಕ್ಕೂ ಮುನ್ನ ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗುವ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಜಯನಗರದಲ್ಲಿ ಇದೇ ರೀತಿ ಬಿಬಿಎಂಪಿ ಅಧಿಕಾರಿಗಳು ಪುನೀತ್ ರಾಜ್‌ಕುಮಾರ್ ಬ್ಯಾನರ್ ತೆರವುಗೊಳಿಸಲು ಮುಂದಾದಾಗ ಅಲ್ಲಿನ ಸಾರ್ವಜನಿಕರು ಇದಕ್ಕೆ ವಿರೋಧಿಸಿದ್ದಾರೆ. ಯಾವುದೇ ಕಾರಣಕ್ಕೂ ಅಪ್ಪು ಬ್ಯಾನರ್ ತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟಿಸಿದ್ದಾರೆ.
ರಾಜಕಾರಣಿಗಳ ಬ್ಯಾನರ್ ತೆರವುಗೊಳಿಸಲು ಸಾಧ್ಯವಾಗದೇ ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್ ತೆಗೆಯಲು ಬಂದಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ನಗರದ ಎಲ್ಲಾ ಫ್ಲೆಕ್ಸ್, ಬ್ಯಾನರ್ ತರೆವುಗೊಳಿಸುತ್ತಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದರೂ ಕೇಳದೇ, ಮೊದಲು ತೋರಿಸಿ ನೋಡೋಣ ಎಲ್ಲೆಲ್ಲಿ ಎಷ್ಟು ಬ್ಯಾನರ್ ತೆಗೆದಿದ್ದೀರಾ? ಎಂದು ಕೇಳಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಜಯನಗರ 4ನೇ ಬ್ಲಾಕ್‌ನಲ್ಲಿ ಅಖಿಲ ಕರ್ನಾಟಕ ಡಾ. ಪುನೀತ್ ರಾಜ್‌ಕುಮಾರ್ ಸಮರ ಸೇನೆ ಸಂಘದ ಸದಸ್ಯರು 30 ಅಡಿ ಎತ್ತರದ ಬ್ಯಾನರ್ ಹಾಕಿದ್ದಾರೆ. ಸದ್ಯ ಈ ಬ್ಯಾನರ್ ತೆರವುಗೊಳಿಸಲು ಬಂದ ಬಿಬಿಎಂಪಿ ಅಧಿಕಾರಿಗಳಿಗೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಅದೇ ಬ್ಯಾನರ್ ಮುಂದೆ ನಟ ವಿನಯ್ ರಾಜ್‌ಕುಮಾರ್ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚುನಾವಣೆ ಆಯೋಗಕ್ಕೆ ಮನವಿ ಕೂಡ ಮಾಡಿದ್ದಾರೆ.
"ಚುನಾವಣಾ ಅಂಗವಾಗಿ ಅಪ್ಪು ಬಾಸ್ ಅವರ ಬ್ಯಾನರ್‌ಗಳನ್ನು ತೆರವುಗೊಳಿಸುತ್ತಿರುವ ವಿಷಯ ಈಗಾಗಲೇ ವಿಷಯ ತಿಳಿದಿದೆ. ದಯವಿಟ್ಟು ತಿಳಿಯಿರಿ ಪುನೀತ್ ರಾಜ್ ಕುಮಾರ್ ಅವರು ಯಾವುದೇ ಪಕ್ಷದ ನಾಯಕರಲ್ಲ, ಯಾವುದೇ ರಾಜಕೀಯ ನಾಯಕರ ಪರ ಇಲ್ಲಿಯ ತನಕ ಪ್ರಚಾರ ಮಾಡಿಲ್ಲ ಎಂಬುದು ತಿಳಿದಿದೆ. ದೇಶವೇ ಅವರನ್ನು ದೇವರೆಂದು ಪೂಜಿಸುತ್ತಿರುವ ಅವರ ಅಭಿಮಾನಿಗಳಿಗೆ ಮತ್ತು ರಾಜ್ಯದ ಜನತೆ ಪ್ರೀತಿ ಅಭಿಮಾನಕ್ಕೆ ಅವಮಾನ ಮಾಡಬಾರದು."
"ಚುನಾವಣಾ ಆಯೋಗ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಫೋಟೋ ಮತ್ತು ಬ್ಯಾನರ್ ತೆರವುಗೊಳಿಸುತ್ತಿರುವ ಕಾರ್ಯವನ್ನು ಈಗಲೇ ಕೈ ಬಿಡಬೇಕೆಂದು ಹೇಳಲು ಇಚ್ಚಿಸುತ್ತೇವೆ" ಇದನ್ನು ಮನವಿ ಎಂದರೆ ಮನವಿ, ಎಚ್ಚರಿಕೆ ಎಂದರೆ ಎಚ್ಚರಿಕೆ ಎಂದು ತಿಳಿಯಿರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











