twitter
    For Quick Alerts
    ALLOW NOTIFICATIONS  
    For Daily Alerts

    ಬಸಂತವನದಲ್ಲಿ ಪಿಂಕಿಯ ಕಲರವ

    By Super
    |

    ಹೊಸತರಲ್ಲಿ ಅಗಸ ಎತ್ತಿ ಎತ್ತಿ ಹೊಡೆದ ಎನ್ನುವಂತೆ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಮೊದಲ ದಿನಗಳಲ್ಲಿ ಚ್ಯವನ್‌ಪ್ರಾಶ್‌ ತಿಂದವರಂತೆ ಚುರುಕಾಗಿದ್ದ ಬಸಂತ ಕುಮಾರ್‌ ಪಾಟೀಲ್‌, ತಾವು ನಿರ್ಮಾಪಕರಾದ ತಕ್ಷಣ ಪಕ್ಕಾ ಥೈಲಿವಾಲನ ಲೆಕ್ಕಾಚಾರಗಳನ್ನು ಶುರುವಿಟ್ಟುಕೊಂಡಿದ್ದಾರೆ.

    ಸಿನಿಮಾದ ಹುಡುಗಿಯರಿಗೆ ಮೈತುಂಬಾ ಬಟ್ಟೆ ತೊಡಿಸಲು ಫತ್ವಾ ಹೊರಡಿಸಿದ್ದ ಬಸಂತ್‌, ತಮ್ಮ ಚಿತ್ರದಲ್ಲಿ ಪಿಂಕಿ ಎನ್ನುವ ಅರೆಬೆಂದ ಕಡುಬಿನಿಂಥ ಹುಡುಗಿಯನ್ನು ಅನಾವರಣಗೊಳಿಸಿರುವ ಪರಿಯನ್ನು ಕಂಡು , ಇಂಥ ಕಸುಬುಗಳಲ್ಲಿ ಪಳಗಿರುವ ಸರಿಗಮ ವಿಜಿ ಎನ್ನುವ ಟೈಗರ್‌ ಬಳಗದ ಕಿಂಕರ ಕೂಡ ನಾಚಿಕೊಂಡಿದ್ದಾರಂತೆ. ಪಿಂಕಿ ಸೌಂದರ್ಯ ಅನಾವರಣದ ನಾನಾ ನಮೂನೆಯ ಫೋಟೋಗಳನ್ನು ಮಾತ್ರ ಬಸಂತ್‌ ಎಗ್ಗಿಲ್ಲದೆ ಮಾಧ್ಯಮಗಳಿಗೆ ರವಾನಿಸುತ್ತಿದ್ದಾರೆ.

    ಪಿಂಕಿ ಪ್ರವೇಶವಾಗುತ್ತಿದ್ದಂತೆಯೇ ಪಾಟೀಲರ ಧರ್ಮಪುರುಷ ವಿಶ್ವಾಮಿತ್ರನೆಂದು ಹೆಸರು ಬದಲಿಸಿಕೊಂಡಿದ್ದಾನೆ. ಸಿನಿಮಾದಲ್ಲಿ ಭರ್ಜರಿ ನೃತ್ಯಗಳಿರುವುದರಿಂದ ವಿಶ್ವಾಮಿತ್ರ ಟೈಟಲ್ಲು ಹೆಚ್ಚು ಹೊಂದಿಕೊಂಡೀತೆನ್ನುವುದು ಬಸಂತ ತರ್ಕವಿರಬೇಕು. ಬಸಂತ್‌ರ ಈಚಿನ ವರಸೆಗಳನ್ನು ಕಂಡವರಿಗೆಲ್ಲ ಅಚ್ಚರಿಯೋ ಅಚ್ಚರಿ. ಜೊತೆಯಾಗಿ ನಟಿಸಲು ಪ್ರೇಮಾ ನಿರಾಕರಿಸಿದ ದುಃಖವೇ ಅವರನ್ನು ಈ ರೀತಿಯೆಲ್ಲ ಆಡಿಸುತ್ತಿದೆ ಅನ್ನುವವರೂ ಉಂಟು.

    ಅಂದಹಾಗೆ, ಈ ಪಿಂಕಿ ಯಾರು ಬಲ್ಲಿರಾ?

    ಸೀರೆ ಕಂಡರೆ ಮಾರು ದೂರ ಹಾರುವ ಈ ನೀರೆ ಮುಂಬಯಿಯವಳು. ಜೀನ್ಸ್‌ ಇಷ್ಟವೆನ್ನುವ ಪಿಂಕಿ ಸಿನಿಮಾದಲ್ಲಿ ತೊಡುವುದು ಮಾತ್ರ ಕನಿಷ್ಠ ಉಡುಗೆಯನ್ನು. ಜೀನ್ಸ್‌ ತೊಟ್ಟರೆ ಕ್ಯಾಬರೆ ಆಗುವುದಿಲ್ಲ ಎನ್ನುವುದು ಪಿಂಕಿಗೂ ಗೊತ್ತು , ನಿರ್ಮಾಪಕರಿಗೂ ಗೊತ್ತು .

    ಎಂಥ ಪಾತ್ರಗಳಾದರೂ ಸೈ, ಮಾಡುತ್ತಲೇ ಇರಬೇಕು, ಕನಿಷ್ಠ 25 ವರ್ಷಗಳಾದರೂ ಉದ್ಯಮದಲ್ಲಿರಬೇಕು ಎನ್ನುವ ಸಿದ್ಧಾಂತದ ಪಿಂಕಿ- ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಿಂಕಿಗೆ ಪಾಟೀಲರ ಸಿನಿಮಾ ಮೊದಲ ಕನ್ನಡ ಸಿನಿಮಾ ಏನಲ್ಲ . ದಾವಣಗೆರೆ ಜನರಿಗೆ ಸಿನಿಮಾ ನಟರನ್ನು ತೋರಿಸಿದ ಖ್ಯಾತಿಯ ಜಿಲ್ಲಾಧಿಕಾರಿ ಕೆ.ಶಿವರಾಂ ಅವರ 'ಯಾರಿಗೆ ಬೇಕು ದುಡ್ಡು " ಸಿನಿಮಾದಲ್ಲೂ ಪಿಂಕಿ ಕಾಲು ನೋಯಿಸಿಕೊಂಡಿದ್ದರು. ಚಿತ್ರ ದುಡ್ಡು ಮಾಡಲಿಲ್ಲ , ಪಿಂಕಿಗೆ ಹೆಸರು ಬರಲಿಲ್ಲ .

    ತನ್ನ ಆರನೇ ಪ್ರಾಣ ಹೆಲೆನ್‌ ಎನ್ನುವ ಪಿಂಕಿ ಈಗಾಗಲೇ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕುಣಿದಿದ್ದಾರೆ. ಮೊನ್ನೆಯಷ್ಟೇ ಬಿಡುಗಡೆಯಾದ 'ಡಯಲ್‌-100" ಸಿನಿಮಾದ ಮೂರು ಹಾಡುಗಳಲ್ಲಿ ಪಿಂಕಿ ಕುಣಿದದ್ದು ವಿಶೇಷ. ಚೇಂಜ್‌ ಇರಲಿ ಎಂದು ಇದೇ ಹುಡುಗಿ ಪೌರಾಣಿಕ ಸೀರಿಯಲ್‌ಗಳಲ್ಲೂ ಕಾಣಿಸಿಕೊಂಡಿದ್ದಾಳೆ.

    ಬಸಂತರಿಗೆ ಬೇಸರದ ಕಾಲ
    ಬರದ ಕಾರಣವೊಡ್ಡಿ ಚಿತ್ರೋತ್ಸವ ರದ್ದಾಗಿರುವುದು ಬಸಂತರನ್ನು ನಿರಾಶರನ್ನಾಗಿಸಿದೆ. ಚಿತ್ರೋತ್ಸವ ಎಂದರೆ ಹಬ್ಬವಲ್ಲ , ಅದೊಂದು ಅಧ್ಯಯನದ ಅವಕಾಶ ಹಾಗೂ ಸಾಂಸ್ಕೃತಿಕ ವಿನಿಮಯದ ವೇದಿಕೆ ಎನ್ನುವುದು ಅವರ ವಾದ. ಸಂಸ್ಕೃತಿಯ ಬಗ್ಗೆ ಇನ್ನೂ ಚೆನ್ನಾಗಿ ಮಾತನಾಡಬಲ್ಲ ಸುಷ್ಮಾ ಸ್ವರಾಜ್‌ ಮಾತ್ರ ಹಬ್ಬವನ್ನು ಹಿಂದೂಮುಂದು ನೋಡದೆ ರದ್ದು ಮಾಡಿಬಿಟ್ಟರು.

    ವಿಶ್ವಾಮಿತ್ರರನ್ನು ನೆನಪಿಸಿಕೊಳ್ಳಲು ಕಾರಣವೆಂದರೆ-
    ಈ ಹೊತ್ತು ಬಸಂತ್‌ಕುಮಾರ್‌ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಬೆಳಗಿನ ಬೆಳಕು ಅವರ ಮನದೊಳಗೂ ಹರಿಯಲಿ, ಕಿಲುಬು ಕಶ್ಮಲ ತೊಳೆಯಲಿ ಎನ್ನುವುದು ನಮ್ಮ ಹಾರೈಕೆ. ಚಿತ್ರ ನಿರ್ಮಾಪಕರ ಸಂಘಕ್ಕೆ ಒಳ್ಳೆಯದಾಗಲಿ.

    English summary
    Basanth Kumar urges not to give subsidy for sex and vulgur movies. But now what he is doing?
    Monday, July 8, 2013, 12:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X