'ವಿಕ್ರಾಂತ್ ರೋಣ'ನ ಬಿಡದ ಪೈರಸಿ ಕಾಟ: ಕಲೆಕ್ಷನ್ ಮೇಲೆ ಪರಿಣಾಮ!
ಪೈರಸಿ ಹೊಡೆತಕ್ಕೆ ಚಿತ್ರರಂಗ ಕಂಗಾಲಾಗಿ ಹೋಗಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ, ಮೊದಲ ಶೋ ಮುಗಿಯುತ್ತಿದ್ದಂತೆ ಕಿಡಿಗೇಡಿಗಳು ಆನ್‌ಲೈನ್‌ನಲ್ಲಿ ಸಿನಿಮಾ ಲೀಕ್ ಮಾಡುತ್ತಿದ್ದಾರೆ. ಈ ಕಾಟ 'ವಿಕ್ರಾಂತ್ ರೋಣ' ಚಿತ್ರವನ್ನೂ ಬಿಟ್ಟಿಲ್ಲ.
'ವಿಕ್ರಾಂತ್ ರೋಣ' ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ಪೈರಸಿ ವಿರುದ್ಧ ಎಷ್ಟೇ ಹೋರಾಟ ನಡೆದರೂ, ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಪೈರಸಿ ಪ್ರಯೋಜನವಾಗುತ್ತಿಲ್ಲ. 'ವಿಕ್ರಾಂತ್ ರೋಣ' ರಿಲೀಸ್ ದಿನವೇ ಸಿನಿಮಾ ಆನ್ ಲೈನ್‌ನಲ್ಲಿ ಲೀಕ್ ಆಗಿದೆ.
ಇನ್ನು ಸಿನಿಮಾ ರಿಲೀಸ್ ಆಗಿ 3ನೇ ದಿನಕ್ಕೆ ಕಾಲಿಟ್ಟಿದೆ. ದಿನ ಕಳೆದಂತೆ ಪೈರಸಿ ಕಾಟ ಕೂಡ ಹೆಚ್ಚಾಗುತ್ತಿದೆ. ದಿನೇ ದಿನೇ ಹೊಸ, ಹೊಸ ಪೈರಸಿ ಲಿಂಕ್‌ಗಳು ಸೃಷ್ಟಿಯಾಗುತ್ತಲೇ ಇವೆ. ಈ ಬಗ್ಗೆ ಚಿತ್ರ ರಿಲೀಸ್ ಆದ ಮೂರನೇ ದಿನವೂ ಚಿತ್ರತಂಡಕ್ಕೆ ತಲೆ ಬಿಸಿ ತಂದಿದೆ.

ವಿಕ್ರಾಂತ್ ರೋಣನ ಬೆಂಬಿಡದ ಪೈರಸಿ ಭೂತ!
ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆದ ದಿನವೇ ಪೈರಸಿಗೆ ತುತ್ತಾಗಿದೆ. ಮೊದಲೇ ದಿನವೇ ಸಿನಿಮಾವನ್ನು ಕಿಡಿಗೇಡಿಗಳು ಆನ್‌ಲೈನ್‌ನಲ್ಲಿ ಲೀಕ್ ಮಾಡಿದ್ದಾರೆ. ಇದು ಮೂರನೇ ದಿನಕ್ಕೆ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಕೆಲ ಪೈರಸಿ ವೆಬ್‌ಸೈಟ್‌ಗಳಲ್ಲಿ ಚಿತ್ರದ ಥಿಯೇಟರ್ ಪ್ರಿಂಟ್ ಲಿಂಕ್‌ಗಳು ರಾರಾಜಿಸುತ್ತಿದೆ. ಚಿತ್ರದ ರಿಲೀಸ್‌ಗೂ ಮುನ್ನ ನಿರ್ದೇಶಕ ಅನೂಪ್ ಭಂಡಾರಿ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಿ ಪೈರಸಿ ಮಾಡಬೇಡಿ ಅಂತ ಮಾನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.

ವಿಕ್ರಾಂತ್ ರೋಣ ಕಲೆಕ್ಷನ್‌ಗೆ ಪೈರಸಿ ಕಾಟ!
ಸಿನಿಮಾ ಪೈರಸಿ ಆದರೆ ಆ ಸಿನಿಮಾದ ಮೇಲೆ ಅದರ ಪರಿಣಾಮ ಖಂಡಿತಾ ಇರುತ್ತದೆ. ಅದರಲ್ಲೂ ಸಿನಿಮಾದ ಕಲೆಕ್ಷನ್ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಸಿನಿಮಾ ಪೈರಸಿ ಆದರೆ ನಿರೀಕ್ಷೆಯ ಮಟ್ಟದಲ್ಲಿ ಸಿನಿಮಾ ಗಳಿಕೆ ಕಣಲು ಸಾಧ್ಯವಾಗುದಿಲ್ಲ. ಒಂದಿಷ್ಟು ಕಿಡಿಗೇಡಿಗಳು ಮಾಡುವ ಪೈರಸಿಯಿಂದಾಗಿ, ಸಿನಿಮಾ ಒದ್ದಾಡುವಂತೆ ಆಗುತ್ತದೆ. ಸಿನಿಮಾ ತಂಡ ಕ್ರಮ ಕೈಗೊಂಡರೂ ಪೈರಸಿ ಲಿಂಕ್‌ಗಳು ಸೃಷ್ಟಿಯಾಗುತ್ತಲೇ ಇವೆ. ಇದು ಒಂದು ಚಿತ್ರಕ್ಕೆ ಮಾತ್ರವಲ್ಲ, ಸಿನಿಮಾರಂಗಕ್ಕೆ ಮಾರಕ.

ಪೈರಸಿ ತಡೆಯಲು ಯೋಜನೆ!
ಯಾವುದೇ ಸಿನಿಮಾ ಆದರೂ ಚಿತ್ರಮಂದಿರದಲ್ಲೇ ನೋಡಿ. ದಯವಿಟ್ಟು ಯಾರು ಕೂಡ ಚಿತ್ರದ ಕ್ಲಿಪ್‌ಗಳು ಅಥವಾ ದೃಶ್ಯಗಳನ್ನು ಎಲ್ಲೂ ಪೋಸ್ಟ್ ಮಾಡಬೇಡಿ ಅಥವಾ ಹಂಚಿಕೊಳ್ಳಬೇಡಿ ಎಂದು ವಿಕ್ರಾಂತ್ ರೋಣ ಟೀಮ್ ಮೊದಲೆ ಮನವಿ ಮಾಡಿತ್ತು. 'ವಿಕ್ರಾಂತ್ ರೋಣ' ಚಿತ್ರದ ವಿಚಾರದಲ್ಲಿ ಇಂತಹ ಚಟುವಟಿಕೆ ಕಂಡು ಬಂದರೆ, 8147824034 ವಾಟ್ಸಾಪ್ ಸಂಖ್ಯೆ ಅಥವಾ ಚಿತ್ರತಂಡ ನೀಡಿದ್ದ ಅಧಿಕೃತ ಇಮೇಲ್ ವಿಳಾಸಕ್ಕೆ ವರದಿ ಮಾಡಿ. ಸಿನಿಮಾ ಪೈರಸಿ ಆಗುವುದನ್ನು ತಡೆಯಲು ಚಿತ್ರತಂಡದ ಜೊತೆ ಕೈಜೋಡಿಸಿ ಎಂದು ಚಿತ್ರತಂಡ ಮನವಿ ಮಾಡಿತ್ತು.

'ಪೈಲ್ವಾನ್' ಕಲೆಕ್ಷನ್‌ಗೆ ಪೆಟ್ಟು!
2019ರಲ್ಲಿ ಬಿಡುಗಡೆಯಾಗಿದ್ದ ಸುದೀಪ್ ನಟನೆಯ 'ಪೈಲ್ವಾನ್' ಚಿತ್ರಕ್ಕೂ ಪೈರಸಿ ದೊಡ್ಡ ಪೆಟ್ಟು ಕೊಟ್ಟಿತ್ತು. ಕೃಷ್ಣ ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರವನ್ನು ಸ್ವಪ್ನ ಕೃಷ್ಣ ನಿರ್ಮಾಣ ಮಾಡಿದ್ದರು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ ಪೈರಸಿ ವೆಬ್‌ಸೈಟ್‌ಗಳಲ್ಲಿ ದರ್ಶನ ಕೊಟ್ಟಿತ್ತು. ನಿರ್ಮಾಪಕರು ಸೈಬರ್ ಕ್ರೈಮ್‌ಗೆ ದೂರು ನೀಡಿದ್ದರು. ಆದರೂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಭಾರೀ ನಷ್ಟ ಎದುರಿಸಬೇಕಾಯಿತು.


Click it and Unblock the Notifications











