ಹೋರಾಟಕ್ಕೆ ಬೆಂಬಲ ಇದೆ, ಬಂದ್ ಮಾಡುವ ಮುನ್ನ ಯೋಚಿಸಿ: ಸುಮಲತಾ
'ಕನ್ನಡ ವಿರೋಧಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಕರ್ನಾಟದಲ್ಲಿ ನಿಷೇಧ ಮಾಡಬೇಕು ಎನ್ನುವ ಹೊರಾಟಕ್ಕೆ ನನ್ನ ಬೆಂಬಲ ಇದೆ' ಎಂದಿರುವ ಮಂಡ್ಯ ಸಂಸದೆ, ನಟಿ ಸುಮಲತಾ, 'ಬಂದ್ ಮಾಡುವ ಮುನ್ನ ಯೋಚಿಸಬೇ'ಕು ಎಂದು ಬುದ್ಧಿವಾದವನ್ನೂ ಹೇಳಿದ್ದಾರೆ.
ಬಂದ್‌ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ ಸುಮಲತಾ, ''ಬಂದ್ ಮಾಡುವುದರಿಂದ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುವನ್ನು ಯೋಚಿಸಬೇಕಾಗುತ್ತದೆ. ವರ್ಷದ ಕೊನೆಯ ದಿನ ಹಲವು ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೆ ಮಹತ್ವದ ದಿನ ಅಂದು ಬಂದ್ ಮಾಡಿದರೆ ಅವರ ಆದಾಯಕ್ಕೆ ಪೆಟ್ಟು ಬೀಳುತ್ತದೆ'' ಎಂದರು.
''ಚಿತ್ರರಂಗವನ್ನು ಮಾತ್ರವೇ ಗಮನದಲ್ಲಿಟ್ಟುಕೊಂಡು ನಾನು ಮಾತನಾಡುತ್ತಿಲ್ಲ. ಆದರೆ ಬಂದ್‌ನಿಂದ ಯಾರಿಗೆ ನಷ್ಟವಾಗುತ್ತದೆ ಎಂಬುದನ್ನು ಮೊದಲು ಗಮನಿಸಬೇಕು. ಬಂದ್‌ನಿಂದ ನಮ್ಮವರಿಗೇ ಸಮಸ್ಯೆ ಆಗುವುದಾದರೆ ಅದು ಸರಿಯಲ್ಲ'' ಎಂದರು ಸುಮಲತಾ. ಬಂದ್ ರಹಿತವಾಗಿ ಬೇರೆ ಹೋರಾಟದ ಮಾರ್ಗ ಅನುಸರಿಸಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸುವ ಬಗ್ಗೆಯೂ ಯೋಚಿಸಬಹುದು ಎಂದು ಸುಮಲತಾ ಹೇಳಿದರು.

ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಬಂದ್‌ಗೆ ಕರೆ ನೀಡಿವೆ. ಆದರೆ ಆ ದಿನ ಶುಕ್ರವಾರವಾಗಿದ್ದು ಕೆಲವು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಹಾಗಾಗಿ ಚಿತ್ರರಂಗವು ಬಂದ್‌ಗೆ ಪೂರ್ಣ ಬೆಂಬಲದ ಬದಲಿಗೆ ನೈತಿಕ ಬೆಂಬಲ ಮಾತ್ರವನ್ನೇ ನೀಡುವುದಾಗಿ ಹೇಳುತ್ತಿದೆ. ಇದಕ್ಕೆ ವಾಟಾಳ್ ನಾಗರಾಜ್ ಹಾಗೂ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ವಿರೋಧ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 31ರಂದು ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಮಮದಿರಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಿಶ್ವನಾಥ್ ಬಹಿರಂಗ ಬೆದರಿಕೆಯನ್ನೂ ಹಾಕಿದ್ದಾರೆ.
ಈ ನಡುವೆ ಚಿತ್ರರಂಗದಲ್ಲಿ ಹಲವರು ಡಿಸೆಂಬರ್ 31ರ ಚಿತ್ರೋದ್ಯಮ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ''ನಮ್ಮವರಿಗೆ ಸಮಸ್ಯೆ ಆಗುವ ರೀತಿಯಲ್ಲಿ ಹೋರಾಟಗಳು ಮಾಡಬಾರದು'' ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ನಟ ಯಶ್ ಸಹ ಇದೇ ಮಾದರಿಯ ಮಾತನ್ನಾಡಿದ್ದಾರೆ. ಇನ್ನು ಡಿಸೆಂಬರ್ 31ರಂದು ತಮ್ಮ ನಟನೆಯ 'ಲವ್ ಯು ರಚ್ಚು' ಸಿನಿಮಾದ ಬಿಡುಗಡೆ ಇರುವ ಅಜಯ್ ರಾವ್ ಸಹ ಬಂದ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.


Click it and Unblock the Notifications











