ನಟ ಜಗ್ಗೇಶ್ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್‌ಪ್ರೈಸ್
ಇಂದು(ಮಾರ್ಚ್ 17) ನಟ ಪುನೀತ್ ರಾಜ್‌ಕುಮಾರ್ ಮಾತ್ರವಲ್ಲ ನವರಸ ನಾಯಕ ಜಗ್ಗೇಶ್ ಹುಟ್ಟುಹಬ್ಬ ಕೂಡ. ಸಣ್ಣಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದು ಬಳಿಕ ಹೀರೊ ಆಗಿ ಗೆದ್ದವರು ಜಗ್ಗೇಶ್. ಜಗ್ಗಣ್ಣದ ಕಾಮಿಡಿಗೆ ಅಣ್ಣಾವ್ರು ಹಾಗೂ ಅಪ್ಪು ಕೂಡ ಅಭಿಮಾನಿಗಳಾಗಿಬಿಟ್ಟಿದ್ದರು.
ನವರಸ ನಾಯಕ ಜಗ್ಗೇಶ್ 62ನೇ ವಸಂತಕ್ಕೆ ಕಾಲಿಟ್ಟಿದ್ದರು. ಅಭಿಮಾನಿಗಳು, ಆಪ್ತರು ಅವರಿಗೂ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಹುಟ್ಟುಹಬ್ಬದ ಶುಭ ಹಾರೈಕೆಯ ಪತ್ರ ಬಂದಿದೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜಗ್ಗಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

"ಸ್ನೇಹಿತರೆ ಇಂದು ನನ್ನ ತಂದೆತಾಯಿ ದೇಣಿಗೆ ನೀಡಿದ ಈ ದೇಹಕ್ಕೆ 62ನೆ ಜನ್ಮದಿನ. ನನಗೆ ಮತ್ತೊಂದು ಸಂತೋಷ ವಿಶ್ವ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರು ಪ್ರೀತಿಯಿಂದ ಹರಸಿ ಕಳಿಸಿದ ಅಕ್ಕರೆಯ ಹಾರೈಕೆ ಪತ್ರ.'ಕಾಲ ನಿಲ್ಲದೆ ಓಡುತ್ತದೆ ನಾವು ಅದರೊಟ್ಟಿಗೆ ಸುಮ್ಮನೆ ಓಡದೆ ಹೋದಮೇಲು ನೆನಪಿಡುವ ಸಾಧನೆಯ ಓಟ ಆಗಿರಬೇಕು, ನನ್ನ ಸಲಹುತ್ತಿರುವ ಸರ್ವರಿಗು" ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರ ಅಭಿಮಾನಿಯೂ ಆಗಿರುವ ನಟ ಜಗ್ಗೇಶ್ ಸದ್ಯ ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವಿಭಿನ್ನ ಹಾವಭಾವ, ಡೈಲಾಗ್ ಡೆಲಿವರಿಯಿಂದ ಗಮನ ಸೆಳೆದವರು ಜಗ್ಗೇಶ್. ಯಾವುದೇ ಸಿನಿಮಾ ಹಿನ್ನಲೆ ಇಲ್ಲದಿದ್ದರೂ ಸ್ವಂತ ಪರಿಶ್ರಮದಿಂದ ಗೆದ್ದವರು. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ವಿಜಯೇಂದ್ರ ಯಡಿಯೂರಪ್ಪ, ಡಾ. ಸಿ. ಎನ್ ಅಶ್ವಥ್ ನಾರಾಯಣ್, ಪ್ರಹ್ಲಾದ್ ಜೋಶಿ ಸೇರಿ ಹಲವು ರಾಜಕೀಯ ಮುಖಂಡರು ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಜಗ್ಗಣ್ಣ ನಟಿಸಿದ್ದ 'ರಂಗನಾಯಕ' ಸಿನಿಮಾ ಹೀನಾಯವಾಗಿ ಸೋತಿತ್ತು. ಇತ್ತೀಚೆಗೆ ಯಾವುದೇ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿಲ್ಲ.
ಇತ್ತೀಚಿನ ವರ್ಷಗಳಲ್ಲಿ ನಟ ಜಗ್ಗೇಶ್ ಅಭಿಮಾನಿಗಳ ಜೊತೆ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ರಾಘವೇಂದ್ರ ಸ್ವಾಮಿಯ ಭಕ್ತರಾಗಿರುವ ಅವರು ಹುಟ್ಟುಹಬ್ಬವನ್ನು ಮಂತ್ರಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಆಚರಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ನವರಸ ನಾಯಕ ಜಗ್ಗೇಶ್ ಉತ್ತರ ಪ್ರದೇಶದ ಪ್ರಯಾಗ್ ರಾಜ್‌ದಲ್ಲಿನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಬಂದಿದ್ದಾರೆ. ಈ ವೇಳೆ ಅಲ್ಲಿ ನನಗೆ ರಾಜಕೀಯ ನಾಯಕ ಸಹಾಯ ಸಿಗಲಿಲ್ಲ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ಪರ-ವಿರೋಧ ಚರ್ಚೆ ನಡೆದಿತ್ತು.
ಇನ್ನು ಡಿಸಿಎಂ ಡಿ. ಕೆ ಶಿವಕುಮಾರ್ ಚಿತ್ರರಂಗದ ಬಗ್ಗೆ ಮಾತನಾಡಿ ಎಲ್ಲಿ ನಟ್ಟು ಬೋಲ್ಟ್ ಟೈಟ್ ಮಾಡಬೇಕೋ ಅಲ್ಲಿ ಮಾಡುತ್ತೇವೆ ಎಂದಿದ್ದರು. ಈ ಹೇಳಿಕೆ ಭಾರೀ ಚರ್ಚೆ ಹುಟ್ಟುಹಾಕಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದ ಜಗ್ಗೇಶ್ "ಚಿತ್ರರಂಗಕ್ಕೆ ಬೋಲ್ಟೆ ಇಲ್ಲ, ಟೈಟ್ ಮಾಡಿ ಏನು ಪ್ರಯೋಜನ" ಎಂದು ಬರೆದುಕೊಂಡಿದ್ದರು.
ನಿರ್ದೇಶಕ ಗುರುಪ್ರಸಾದ್ ನಿಧನದ ವೇಳೆ ಜಗ್ಗೇಶ್ ನೀಡಿದ್ದ ಕೆಲ ಹೇಳಿಕೆಗಳು ಭಾರೀ ಟೀಕೆಗೆ ಗುರಿಯಾಗಿತ್ತು. ಇನ್ನು 'ರಂಗನಾಯಕ' ಚಿತ್ರದ ಹೀನಾಯವಾಗಿ ಸೋತಿತ್ತು. ಚಿತ್ರದಲ್ಲಿದ್ದ ಡಬಲ್ ಮೀನಿಂಗ್ ಡೈಲಾಗ್ಸ್ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಬಳಿಕ ರಾಯದ ಆಲಯದಿಂದಲೇ ಫೇಸ್‌ಬುಕ್ ಲೈವ್ ಬಂದು ಜಗ್ಗೇಶ್ ಮಾತನಾಡಿದ್ದರು. ತಪ್ಪಾಯಿತು ಕ್ಷಮಿಸಿ, ಇಂತಹ ತಪ್ಪು ಮತ್ತೆ ಮರುಕಳಿಸುವುದಲ್ಲ, ಮುಂದೆ ಉತ್ತಮ ಸಿನಿಮಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು.


Click it and Unblock the Notifications











