ಕನ್ನಡದ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ಸಂದೇಶ
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜನತೆಗೆ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದರು. ಇದೀಗ ಕನ್ನಡದ ಜನಪ್ರಿಯ ಗೀತೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಚೈತ್ರ ನವರಾತ್ರಿ ಸಂದೇಶ ಸಾರಿದ್ದಾರೆ. ಇದು ಕನ್ನಡಿಗರ ಗಮನ ಸೆಳೆದಿದೆ.
'ಶ್ರೀಕೃಷ್ಣ ದೇವರಾಯ' ಚಿತ್ರದ 'ಶ್ರೀ ಚಾಮುಂಡೇಶ್ವರಿ' ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ. "ಜಗತ್ಜನನಿ ಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬಲಿದೆ" ಕ್ಯಾಪ್ಷನ್ ಕೊಟ್ಟಿದ್ದಾರೆ. 1970ರಲ್ಲಿ ತೆರೆಗೆ ಬಂದಿದ್ದ 'ಶ್ರೀಕೃಷ್ಣ ದೇವರಾಯ' ಚಿತ್ರವನ್ನು ಬಿ. ಆರ್ ಪಂತುಲು ನಿರ್ದೇಶನ ಮಾಡಿದ್ದರು.

ಟಿ. ಜಿ ಲಿಂಗಪ್ಪ ಸಂಗೀತದ ಈ ಹಾಡಿಗೆ ಕೆ. ಪ್ರಭಾಕರ್ ಶಾಸ್ತ್ರಿ ಸಾಹಿತ್ಯ ರಚಿಸಿದ್ದರು. ಶ್ರೀಕೃಷ್ಣ ದೇವರಾಯರಾಗಿ ಡಾ. ರಾಜ್‌ಕುಮಾರ್ ನಟಿಸಿದ್ದರು. ಆತನ ಪತ್ನಿ ತಿರುಮಲಾಂಬ ದೇವಿಯಾಗಿ ಜಯಂತಿ ಮಿಂಚಿದ್ದರು. ಮತ್ತೊಬ್ಬ ಮಡದಿ ಚಿನ್ನಾದೇವಿ ಪಾತ್ರದಲ್ಲಿ ಭಾರತಿ ವಿಷ್ಣುವರ್ಧನ್ ಬಣ್ಣ ಹಚ್ಚಿದ್ದರು.
ಮಾರ್ಚ್ 19ರಿಂದ ಚೈತ್ರ ನವರಾತ್ರಿ ಆರಂಭವಾಗಿದೆ. 3ನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸುತ್ತಾರೆ. ಒಂಬತ್ತು ದಿನಗಳ ಕಾಲ ದೇವಿ ದುರ್ಗೆಯ ವಿವಿಧ ರೂಪಗಳನ್ನು ಪೂಜಸಿಲಾಗುತ್ತದೆ. ಧೈರ್ಯ, ಪರಾಕ್ರಮ ಹಾಗೂ ಸೌಂದರ್ಯದ ಪ್ರತೀಕ ಚಂದ್ರಘಂಟಾ ದೇವಿ. ಕೆಂಪು ಬಣ್ಣದ ವಸ್ತ್ರಗಳಿಂದ ಆಕೆಗೆ ಅಲಂಕಾರ ಮಾಡಿ ಕೆಂಪು ಬಣ್ಣದ ಹೂವುಗಳಿಂದ ಪೂಜಿಸಲಾಗುತ್ತದೆ.
ಇನ್ನು ಕನ್ನಡದಲ್ಲಿ ಪ್ರಧಾನಿ ಮೋದಿ ಯುಗಾದಿ ಶುಭಾಶಯದ ಪೋಸ್ಟ್ ಕೂಡ ವೈರಲ್ ಆಗುತ್ತಿದೆ. "ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು.. ಈ ಹಬ್ಬವು ನಮ್ಮ ಸಂಪ್ರದಾಯದಲ್ಲಿ ಆಳವಾಗಿ ಬೇರೂರಿದೆ ಮತ್ತು ಅದೇ ಸಮಯದಲ್ಲಿ ಹೊಸ ಉತ್ಸಾಹ ಹಾಗೂ ಹೊಸ ಆರಂಭದ ಸಂಕೇತವಾಗಿದೆ" ಎಂದು ಪ್ರಧಾನಿ ಮೋದಿ ಶುಭ ಕೋರಿದ್ದರು.
"ಯುಗಾದಿಯು ಹೊಸ ವರ್ಷದ ಮುನ್ನುಡಿಯಾಗಿದ್ದು, ಮುಂಬರುವ ವರ್ಷವು ಸರ್ವರಿಗೂ ಸುಖ, ಯಶಸ್ಸು ಮತ್ತು ಉತ್ತಮ ಆರೋಗ್ಯವನ್ನು ತರಲೆಂದು ಪ್ರಾರ್ಥಿಸುತ್ತೇನೆ. ಈ ಹೊಸ ವರ್ಷವು ಪ್ರತಿಯೊಬ್ಬರೂ ತಮ್ಮ ಗುರಿಗಳನ್ನು ಪ್ರಾಮಾಣಿಕತೆಯಿಂದ ತಲುಪಲು ಮತ್ತು ಸಮಾಜದ ಏಳಿಗೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡಲು ಪ್ರೇರಣೆಯಾಗಲಿ" ಎಂದು ಬರೆದುಕೊಂಡಿದ್ದರು.
ಅಷ್ಟೇ ಅಲ್ಲ ಗುಡಿ ಪಾಡ್ವಾ, ಚೇತಿ ಚಾಂದ್, ನವ್ ರೇಹ್ ಮತ್ತು ಸಾಜಿಬು ಚೈರೋಬಾ ಪ್ರಯುಕ್ತ ಕೂಡ ಪ್ರಧಾನಿ ಮೋದಿ ಶುಭ ಕೋರಿ ಪೋಸ್ಟ್ ಮಾಡಿದ್ದರು. ಇಂದು(ಮಾರ್ಚ್ 21) ರಂಜಾನ್ ಹಬ್ಬದ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಚೈತ್ರ ನವರಾತ್ರಿ ಹಿನ್ನೆಲೆ ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಮತ್ತು ದೆಹಲಿ ಜನತೆಗೆ ಪ್ರಧಾನಿ ಮೋದಿ ವೈಯಕ್ತಿಕವಾಗಿ ಪತ್ರ ಬರೆದು ಶುಭ ಕೋರಿದ್ದರು.
ಯುಗಾದಿ, ಗುಡಿ ಪಾಡ್ವಾ ಮತ್ತು ಚೈತ್ರ ನವರಾತ್ರಿಯ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಮುರ್ಮು ಕೂಡ ಶುಭಾಶಯ ತಿಳಿಸಿದ್ದರು.


Click it and Unblock the Notifications











