»   » ಅಮ್ಮನಿಗೆ ಜಾಲಿ ಬಾರ್‌ ಪೋಲಿಹುಡುಗರ ಗೀತೆ

ಅಮ್ಮನಿಗೆ ಜಾಲಿ ಬಾರ್‌ ಪೋಲಿಹುಡುಗರ ಗೀತೆ

Posted By: Staff
Subscribe to Filmibeat Kannada

ಯುವ ಹೃದಯಗಳಿಗೆ ಲಗ್ಗೆ ಹಾಕಿದ ಕವಿ ಬಿ.ಆರ್‌.ಲಕ್ಷ್ಮಣರಾಯರ ಜನಪ್ರಿಯಗೀತೆಗಳಲ್ಲಿ ಒಂದಾದ ಜಾಲಿ ಬಾರಿನಲ್ಲಿ ಕುಳಿತ ಪೋಲಿ ಹುಡುಗರು.. ಮಬ್ಬುಗತ್ತಲಲ್ಲಿ ಬೀರು ಹೀರುತ್ತಿದ್ದರು... ಹತ್ತಾರು ವರ್ಷಗಳ ನಂತರ ಚಿತ್ರಗೀತೆಯಾಗಿ ಮಾರ್ಪಡುತ್ತಿದೆ.

ಮೊನ್ನೆಯಷ್ಟೇ ಯಲಹಂಕ ಬಳಿ ಇರುವ ಡೊಮೆನಿಯನ್‌ ಕ್ಲಬ್‌ನಲ್ಲಿ ಡಿ. ರಾಜೇಂದ್ರ ಬಾಬು ಅವರು ತಮ್ಮ ನಿರ್ದೇಶದ ಅಮ್ಮ ಚಿತ್ರಕ್ಕಾಗಿ ಈ ಹಾಡಿಗೆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡರು. ತಮ್ಮ ಕಾಲೇಜು ದಿನಗಳಿಂದಲೇ ಈ ಹಾಡಿನ್ನು ಮೆಚ್ಚಿ ತಮ್ಮ ಗೆಳೆಯರೊಂದಿಗೆ ತಾವೂ ಹಾಡಿ ಕುಣಿಯುತ್ತಿದ್ದ ಬಾಬು, ಈ ಗೀತೆಯನ್ನು ಚಿತ್ರಕ್ಕೆ ಅಳವಡಿಸುವ ಕನಸನ್ನು ಕೊನೆಗೂ ನನಸು ಮಾಡಿಕೊಂಡಿದ್ದಾರೆ.

ಖ್ಯಾತ ಸಂಭಾಷಣೆಕಾರ, ಗಾಯಕ ಹಾಗೂ ನಟ ರಿಚರ್ಡ್‌ ಲೂಯಿಸ್‌, ಪಿಂಕಿ, ಪ್ರಮೋದ್‌, ರೀತು ಸಿಂಗ್‌, ಭಾನು ಪ್ರಕಾಶ್‌ ಮತ್ತಿತತರು ಈ ಗೀತೆಯ ದೃಶ್ಯದಲ್ಲಿ ಅಭಿನಯಿಸಿದರು. ಜಾಲಿ ಬಾರಿನಲ್ಲಿ ಕುಳಿತ ಪೋಲಿ ಹುಡುಗರ ಹಾಡಿಗೆ ಸುಮಾರು 50 ಮೋಟರ್‌ ಬೈಕ್‌ ಬಳಸಿಕೊಂಡಿದ್ದಲ್ಲದೆ, ಹಾಡಿನಲ್ಲಿ ಸುಮಾರು 50- 60 ನರ್ತಕ - ನರ್ತಕಿಯರ ತಂಡ ಹೆಜ್ಜೆಹಾಕಿತು.

ಶ್ರೀ ಸಂಗಮೇಶ್ವರ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕೀರ್‌ವಾಣಿ ಸಂಗೀತ ಸಂಯೋಜನೆ, ಪ್ರಸಾದ್‌ ಬಾಬು ಛಾಯಾಗ್ರಹಣ ಇದೆ. ನಿರ್ದೇಶಕ ರಾಜೇಂದ್ರ ಬಾಬು ಅವರು ಚಿತ್ರ ಸಾಹಿತ್ಯ - ಸಂಭಾಷಣೆ ಬರೆದು ಅಮ್ಮನ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಅಂತಿಮ ಹಂತದ ಚಿತ್ರೀಕರಣ ಭರದಿಂದ ಸಾಗಿದೆ.

ಬಹಳ ವರ್ಷಗಳ ನಂತರ ಅನಂತ್‌ನಾಗ್‌, ಲಕ್ಷ್ಮೀ ಮತ್ತೊಮ್ಮೆ ತಾರಾಜೋಡಿಗಳಾಗಿ ನಟಿಸಿದ್ದಾರೆ. ಉಳಿದ ತಾರಾಗಣದಲ್ಲಿ ಜೈಜಗದೀಶ್‌, ಪವಿತ್ರಾ ಲೋಕೇಶ್‌, ಮೋಹನ್‌, ತಾರಾ, ಸಂಜಯ್‌, ನೀತೂ ಸಿಂಗ್‌, ರಮೇಶ್‌ ಭಟ್‌, ಕರಿಬಸವಯ್ಯ, ರೇಖಾದಾಸ್‌ ಮೊದಲಾದವರಿದ್ದಾರೆ. ಅಂದಹಾಗೆ ಪೋಲಿ ಹುಡುಗರ ಹಾಡನ್ನು ರಿಚರ್ಡ್‌ ಲೂಯಿಸ್‌ ಮತ್ತು ತಂಡದವರು ಸೊಗಸಾಗಿ ಹಾಡಿದ್ದಾರೆ.

English summary
B.L. Lakshmanaraos jali bar poli hudugaru in Amma

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada