ವಿಜಯಲಕ್ಷ್ಮಿ ದರ್ಶನ್‌ಗೆ ಕೆಟ್ಟದಾಗಿ ಕಾಮೆಂಟ್, ಇಬ್ಬರ ಬಂಧನ; ಅವರ ಹಿನ್ನೆಲೆ ಏನು?
ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳ ಉಪಟಳ ಹೆಚ್ಚುತ್ತಿದೆ. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಕೆಟ್ಟದಾಗಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದವರ ವಿರುದ್ಧ ದೂರು ನೀಡಿದ್ದರು. ಪ್ರಕರಣ ಸಂಬಂಧ ಒಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಿಸೆಂಬರ್ 24ರಂದು ವಿಜಯಲಕ್ಷ್ಮಿ ದರ್ಶನ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ತಮ್ಮ ಬಗ್ಗೆ ಟ್ವಿಟ್ಟರ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ಹಾಕಿದ್ದ ಅಶ್ಲೀಲ ಕಾಮೆಂಟ್ಸ್ ಸ್ಕ್ರೀನ್ ಶಾಟ್ ಸಮೇತ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಾರ ಕಳೆದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಮತ್ತೊಮ್ಮೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದೀಗ ಐಪಿ ಅಡ್ರೆಸ್ ಆಧರಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ದೂರು ನೀಡುತ್ತಿದ್ದಂತೆ ಕಾಮೆಂಟ್‌ಗಳನ್ನು ಆರೋಪಿಗಳು ಡಿಲೀಟ್ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ ಐಪಿ ಅಡ್ರೆಸ್ ಮೂಲಕ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಚಿಕ್ಕಬಾಣಾವರದ ಆಟೋ ಡ್ರೈವರ್ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಬಂಧಿತರು ಎಂದು ವರದಿಯಾಗಿದೆ. ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ. ಇದೇ ರೀತಿ ವಿಜಯಲಕ್ಷ್ಮಿ ಅವರಿಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಮತ್ತಷ್ಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಹುಬ್ಬಳ್ಳಿಯಲ್ಲಿ ನಟ ಸುದೀಪ್ ತಮ್ಮ 'ಮಾರ್ಕ್' ಚಿತ್ರದ ವಿರುದ್ಧ ಒಂದು ಪಡೆ ಷಡ್ಯಂತ್ರ ರೂಪಿಸುತ್ತಿದೆ ಎಂದಿದ್ದರು. ಅವರ ವಿರುದ್ಧ ಯುದ್ಧ ಮಾಡುತ್ತವೆ ಸವಾಲು ಹಾಕಿದ್ದರು.

ಸುದೀಪ್ ಹೇಳಿಕೆ ಬೆನ್ನಲ್ಲೇ ದಾವಣಗೆರೆಯಲ್ಲಿ ವಿಜಯಲಕ್ಷ್ಮಿ ದರ್ಶನ್ ನೀಡಿದ್ದ ಹೇಳಿಕೆ ವೈರಲ್ ಆಗಿತ್ತು. ಸುದೀಪ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಎನ್ನುವ ಅರ್ಥದಲ್ಲಿ ಊಹಾಪೋಹ ಶುರುವಾಗಿತ್ತು. ಹಾಗಾಗಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೆದಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು ಅಶ್ಲೀಲ ಪದಗಳನ್ನು ಬಳಸಿ ವಿಜಯಲಕ್ಷ್ಮಿ ಅವರಿಗೆ ಬೈದಿದ್ದರು. ಕೆಟ್ಟ ಕೆಟ್ಟ ಪದಗಳಿಂದ ಟ್ರೋಲ್ ಮಾಡಿದ್ದರು.
ವಿಜಯಲಕ್ಷ್ಮಿ ಮಾತ್ರವಲ್ಲ ಸುದೀಪ್ ಅವರ ಪತ್ನಿ ಹಾಗೂ ಮಗಳ ಬಗ್ಗೆ ಕೂಡ ಕೆಲವರು ಇದೇ ರೀತಿ ಅಶ್ಲೀಲ ಪದಗಳಿಂದ ನಿಂದಿಸಿದ್ದರು. ಹೀಗೆ ಕೆಟ್ಟದಾಗಿ ಪೋಸ್ಟ್, ಕಾಮೆಂಟ್ ಮಾಡಿದ್ದ 15 ಸೋಶಿಯಲ್ ಮೀಡಿಯಾ ಖಾತೆ, 150 ಪೋಸ್ಟ್ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದರು.
ಈ ಹಿಂದೆ ನಟ ದರ್ಶನ್ ಅಭಿಮಾನಿಗಳು ತಮಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದಾರೆ ಎಂದು ನಟಿ ರಮ್ಯಾ ದೂರು ನೀಡಿದ್ದರು. ಪ್ರಕರಣ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿ ಬುದ್ಧಿ ಕಲಿಸಿದ್ದರು. ಇದೇ ವಿಚಾರವನ್ನು ಪ್ರಸ್ತಾಪಿಸಿ ವಿಜಯಲಕ್ಷ್ಮಿ ದರ್ಶನ್ ತಮ್ಮ ದೂರಿನ ಬಗ್ಗೆ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದ್ದರು. ಒಬ್ಬೊಬ್ಬರಿಗೆ ಒಂದೊಂದು ನ್ಯಾಯಾನಾ? ಎಂದು ಪ್ರಶ್ನಿಸಿದ್ದರು. ತನಿಖೆ ನಡೆಸದಂತೆ ಯಾರಾದರೂ ಒತ್ತಡ ಹೇರುತ್ತಿದ್ದಾರಾ? ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ದರ್ಶನ್ ಅಭಿಮಾನಿಗಳು ದನಿಗೂಡಿಸಿದ್ದರು.
ವಿಜಯಲಕ್ಷ್ಮಿ ದರ್ಶನ್ ಆರೋಪಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಸ್ಪಷ್ಟನೆ ನೀಡಿದ್ದರು. "ಈ ಕೇಸ್ ಮಾತ್ರವಲ್ಲ, ಪ್ರತಿಯೊಂದು ಕೇಸ್ ಅನ್ನು ನಾವು ಸಮಾನವಾಗಿ ನೋಡುತ್ತೇವೆ. ಕೆಲ ಸೈಬರ್ ಅಥವಾ ತಾಂತ್ರಿಕ ಪ್ರಕರಣಗಳಲ್ಲಿ ತಕ್ಷಣಕ್ಕೆ ಸುಳಿವು ಸಿಗುವುದಿಲ್ಲ. ಅದಕ್ಕೆ ಸಮಯ ಬೇಕಾಗುತ್ತದೆ, ಬೇರೆ ಉದ್ದೇಶ ಇಲ್ಲ" ಎಂದು ಹೇಳಿದ್ದರು.


Click it and Unblock the Notifications











