ಮಂಡ್ಯದಲ್ಲಿ ಅಭಿ-ಅವಿವಾ ಬೀಗರೂಟದ ವೇಳೆ ನೂಕು ನುಗ್ಗಲು: ಪೊಲೀಸರಿಂದ ಲಘು ಲಾಠಿ ಪ್ರಹಾರ
ಮದ್ದೂರು : ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆ ಸಂಭ್ರಮ ಮುಂದುವರೆದಿದೆ. ಮಂಡ್ಯದಲ್ಲಿ ಇಂದು(ಜೂನ್ 16) ಅಭಿಮಾನಿಗಳಿಗಾಗಿ ಅಂಬಿ ಕುಟುಂಬದಿಂದ ಬೀಗರ ಔತಣಕೂಟ ಏರ್ಪಡಿಸಲಾಗಿತ್ತು. ಬಹಳ ದೊಡ್ಡಮಟ್ಟದಲ್ಲಿ ನಾನ್‌ವೆಜ್ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಜನ ಬೀಗರೂಟಕ್ಕೆ ಬಂದ ಹಿನ್ನಲೆಯಲ್ಲಿ ಜನರನ್ನು ನಿಯಂತ್ರಿಸುವುದು ಭಾರೀ ಕಷ್ಟವಾಗಿದೆ.
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಅವರ ವಿವಾಹ ಭೀಗರ ಔತಣ ಕೂಟದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡು ನವ ವಧೂವರರನ್ನು ಆಶೀರ್ವದಿಸಿದರು. ಈ ವೇಳೆ ಊಟಕ್ಕೆ ನೂಕು ನುಗ್ಗಲು ಉಂಟಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ತಡೆದ ಪ್ರಸಂಗವೂ ನಡೆಯಿತು. ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿಯ ಸುಮಾರು 15 ಎಕರೆ ವಿಶಾಲ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮಂಡ್ಯ ಮಾತ್ರವಲ್ಲದೇ, ನೆರೆ ಜಿಲ್ಲೆಗಳಿಂದ ಸಹಸ್ರಾರು ಮಂದಿ ಅಭಿಮಾನಿಗಳು ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಸಸ್ಯಾಹಾರಿ ಮತ್ತು ಮಾಂಸಹಾರಿ ಭೋಜನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಬೆಳಗ್ಗೆ ಸುಮಾರು 11.15ಕ್ಕೆ ನವ ದಂಪತಿಗಳಾದ ಅಭಿಷೇಕ್ ಹಾಗೂ ಅವಿವಾ ಆಗಮಿಸಿದರು. ಬಳಿಕ ವೇದಿಕೆ ಏರಿ ಅಭಿಮಾನಿಗಳಿಗೆ ಹಸ್ತಲಾಘವ ಮಾಡಿದರು. ನಂತರ ಊಟದ ವ್ಯವಸ್ಥೆಗೆ ಚಾಲನೆ ನೀಡಲಾಯಿತು.
ಕಳ್ಳರ ಕಾಟ
ಊಟದ ವ್ಯವಸ್ಥೆ ಮಾಡುವ ಸಂದರ್ಭದಲ್ಲಿ ಮಾಂಸದೂಟಕ್ಕೆ ನೂಕು ನುಗ್ಗಲು ಉಂಟಾಯಿತು. ಇದನ್ನು ಉಪಯೋಗಿಸಿಕೊಂಡ ಜೇಬುಗಳ್ಳರು ಮಹಿಳೆಯರು ಚಿನ್ನಾಭರಣ ಲೂಟಿ ಮಾಡಿದರು. ನಂತರ ನೂಕು ನುಗ್ಗಲು ಉಂಟಾಗಿ ಅಸ್ತವ್ಯಸ್ತವಾಗಿತ್ತು. ಪೊಲೀಸರು ನೂಕುನುಗ್ಗಲು ತಡೆಯಲು ಹರಸಾಹಸಪಡಬೇಕಾಯಿತು. ಒಟ್ಟು ನಾಲ್ಕು ಗೇಟ್ ಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚು ಜನರು ಬಂದ ಕಾರಣ ಕೇವಲ ಎರಡು ಗೇಟ್‌ಗಳಲ್ಲಿ ಊಟದ ವ್ಯವಸ್ಥೆ ಮಾಡಿದರು. ಉಳಿದ ಎರಡು ಡೈನಿಗ್ ಹಾಲ್‌ನಲ್ಲಿ ಊಟ ಇಲ್ಲದೇ ಕೂರುವಂತಾಯಿತು.
ಲಘು ಲಾಠಿ ಪ್ರಹಾರ
ಪೊಲೀಸರು ಅಭಿಮಾನಿಗಳನ್ನು ತಡೆಯುತ್ತಿದ್ದಂತೆ ಮಹಿಳೆಯರು ಮತ್ತು ಅಂಬರೀಶ್ ಅಭಿಮಾನಿಗಳು ರೊಚ್ಚಿಗೆದ್ದು ಟೆಂಟನ್ನು ಹರಿದುಹಾಕಿ, ಕಿತ್ತೆಸೆದು ಒಳ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದಾಗಿ ಸುಮಾರು 30ಕ್ಕೂ ಹೆಚ್ಚು ಮಂದಿ ಅಂಬರೀಶ್ ಅಭಿಮಾನಿಗಳು, ಮಹಿಳೆಯರು ಹಾಗೂ ಪೊಲೀಸರಿಗೆ ಗಾಯಗಳಾದವು. ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಸರತಿ ಸಾಲಿನಲ್ಲಿ ತೆರಳಲು ಅಳವಡಿಸಲಾಗಿದ್ದ ಕಬ್ಬಿಣದ ಪೈಪ್‌ಗಳನ್ನೂ ಸಹ ಕಿತ್ತೆಸೆದು ಚೆಲ್ಲಾಪಿಲ್ಲಿ ಮಾಡಿದರು. ಇದರಿಂದಾಗಿ ಕೆಲವರು ಗಾಯಗೊಂಡರು. ನಂತರ ಊಟದ ವ್ಯವಸ್ಥೆಯನ್ನು ತಹಬದಿಗೆ ತಂದು ಮತ್ತೆ ಊಟೋಪಚಾರವನ್ನು ಮುಂದುವರಿಸಲಾಯಿತು.

7 ಟನ್ ಮಟನ್, 7 ಟನ್ ಚಿಕನ್
50 ಸಾವಿರಕ್ಕೂ ಅಧಿಕ ಜನರಿಗೆ ಬೀಗರೂಟದ ವ್ಯವಸ್ಥೆ ಮಾಡುತ್ತಿರುವುದಾಗಿ ಈ ಹಿಂದೆ ಹೇಳಲಾಗಿತ್ತು. ಬರೋಬ್ಬರಿ 7 ಟನ್ ಮಟನ್, 7 ಟನ್ ಚಿಕನ್ ಬಳಸಿ ಅಡುಗೆ ಸಿದ್ಧಪಡಿಸಲಾಗಿದೆ. 1000ಕ್ಕೂ ಅಧಿಕ ಬಾಣಸಿಗರು ಅಡುಗೆ ಮಾಡಿದ್ದಾರೆ. ಮುದ್ದೆ, ಬೋಟಿ, ಕೈಮಾ, ಗೀ ರೈಸ್, ಕಬಾಬ್, ಮಟನ್ ಕರಿ ಸೇರಿದಂತೆ ವಿವಿಧ ಬಗೆಯ ನಾನ್‌ವೆಜ್ ಭಕ್ಷ್ಯ ಭೋಜನ ಸಿದ್ಧವಾಗಿದೆ. ವೆಜ್ ಊಟದ ವ್ಯವಸ್ಥೆ ಕೂಡ ಆಗಿದೆ.
ಅದ್ಧೂರಿಯಾಗಿ ಅಭಿ -ಅವಿವಾ ಕಲ್ಯಾಣ
ಕಳೆದ ಸೋಮವಾರ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅಭಿ- ಅವಿವಾ ಮದುವೆ ನೆರವೇರಿತ್ತು. ರಜನಿಕಾಂತ್, ಮೋಹನ್ ಬಾಬು, ಯಶ್, ಸುದೀಪ್ ಸೇರಿದಂತೆ ಸಾಕಷ್ಟು ತಾರೆಯರು ಧಾರೆಗೆ ಆಗಮಿಸಿ ಶುಭ ಕೋರಿದ್ದರು. ಕಳೆದ ಬುಧವಾರ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಚಿರಂಜೀವಿ, ದರ್ಶನ್ ಸೇರಿದಂತೆ ಹಲವರು ಬಂದು ನವ ಜೋಡಿಗೆ ಶುಭ ಕೋರಿದ್ದರು. ಇನ್ನು ಶನಿವಾರ ಖಾಸಗಿ ಹೋಟೆಲ್‌ನಲ್ಲಿ ಸಂಗೀತ್ ಪಾರ್ಟಿ ಏರ್ಪಡಿಸಲಾಗಿತ್ತು. ದರ್ಶನ್, ಯಶ್, ರಮ್ಯಾಕೃಷ್ಣ ಸೇರಿದಂತೆ ಹಲವು ಭಾಗಿ ಆಗಿ ಅಂಬಿ ಮನೆ ಸಂಭ್ರಮದಲ್ಲಿ ಭಾಗಿ ಆಗಿದ್ದರು.


Click it and Unblock the Notifications











