'ಕಾಂತಾರ'ದ ಮೇಲೆ ಪೊಲೀಸರ ದಾಳಿ! ಆದರೆ ಕುಟುಂಬದ ಜೊತೆ
ಕರುನಾಡ ತುಂಬೆಲ್ಲ 'ಕಾಂತಾರ'ದ್ದೇ ಕ್ರೇಜ್. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾದ್ದೇ ಎಲ್ಲೆಡೆ ಸುದ್ದಿ. ವಿವಾದ, ಚಿತ್ರದ ಮೇಕಿಂಗ್, ರಿಷಬ್ ಶೆಟ್ಟಿ ನಟನೆ ಎಲ್ಲವನ್ನೂ ಪ್ರೇಕ್ಷಕರು ಮೆಚ್ಚಿದ್ದು, ಈ ಸಿನಿಮಾ ಅಚ್ಚರಿಗಳನ್ನು ಸೃಷ್ಟಿಸಿದೆ. ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ, ಕಾಲಿವುಡ್, ಬಾಲಿವುಡ್, ಮಾಲಿವುಡ್, ಟಾಲಿವುಡ್‌ನಲ್ಲಿಯೂ ಹವಾ ಸೃಷ್ಟಿಸಿದೆ. ಬೆಣ್ಣೆನಗರಿ ದಾವಣಗೆರೆಯಲ್ಲಂತೂ 'ಕಾಂತಾರ' ಹವಾ ಜೋರಿದೆ.
ತಂಡೋಪತಂಡವಾಗಿ ಜನ 'ಕಾಂತಾರ' ಸಿನಿಮಾವನ್ನು ನೋಡುತ್ತಿದ್ದಾರೆ. ಹಳ್ಳಿಗಳಿಂದ, ಟೆಂಪೊ, ಬಸ್ಸುಗಳನ್ನು ಮಾಡಿಕೊಂಡು ಬಂದು ಸಿನಿಮಾ ನೋಡುತ್ತಿದ್ದಾರೆ. ದಾವಣಗೆರೆಯಲ್ಲಿ ತುಸು ಭಿನ್ನವಾಗಿ ಪೊಲೀಸ್ ಇಲಾಖೆ ಸಿಬ್ಬಂದಿ ತಮ್ಮ ಕುಟುಂಬವನ್ನು ಕರೆದುಕೊಂಡು ಚಿತ್ರಮಂದಿರಕ್ಕೆ ಬಂದು ಒಟ್ಟಾಗಿ ಸಿನಿಮಾ ನೋಡಿ ಆನಂದಿಸಿದ್ದಾರೆ. ಪೊಲೀಸ್ ಇಲಾಖೆಯ 200ಕ್ಕೂ ಹೆಚ್ಚು ಸಿಬ್ಬಂದಿ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ.
ಯಾವಾಗಲೂ ಕೆಲಸದ ಒತ್ತಡದಲ್ಲಿ ಇರುತ್ತಿದ್ದ ಪೊಲೀಸ್ ಸಿಬ್ಬಂದಿ ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾ ನೋಡಿ ಖುಷಿಪಟ್ಟಿರುವುದು ವಿಶೇಷ. ದಾವಣಗೆರೆಯಲ್ಲಿ ಪೊಲೀಸರು ಸ್ವಲ್ಪ ಬಿಡುವು ಮಾಡಿಕೊಂಡು ಚಿತ್ರ ವೀಕ್ಷಣೆ ಮಾಡಿದ್ದಾರೆ. ಚಿತ್ರಮಂದಿರದ ಒಂದಿಡೀ ಪ್ರದರ್ಶನ ಬುಕ್ ಮಾಡಿ ಫ್ಯಾಮಿಲಿ ಜೊತೆ ಬಂದು ಕಾಂತಾರ ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

200 ಕ್ಕೂ ಹೆಚ್ಚು ಪೊಲೀಸರು ಕುಟುಂಬದೊಟ್ಟಿಗೆ ಬಂದಿದ್ದರು
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸಿನಿಮಾದ ವೈಭವ ಕಣ್ತುಂಬಿಕೊಂಡರು. ನಗರದ ಗೀತಾಂಜಲಿ ಚಿತ್ರಮಂದಿರದ ಮಾಲೀಕರ ಜೊತೆ ಮಾತನಾಡಿ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರಿಗೆ ಪ್ರತ್ಯೇಕ ಶೋ ವ್ಯವಸ್ಥೆ ಮಾಡಲಾಗಿತ್ತು. ಈ ಚಿತ್ರಮಂದಿರದಲ್ಲಿ 'ಕಾಂತಾರ' ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಜನರು ಸಹ ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಟಿಕೆಟ್ ಕೂಡ ಮುಂಗಡವಾಗಿ ಬುಕ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.

ಹಿರಿಯ ಅಧಿಕಾರಿಗಳೂ ಬಂದಿದ್ದರು
ಎಸ್‌ಪಿ, ಎಸ್‌ಪಿ, ಡಿವೈಎಸ್ಪಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಸೇರಿ ಸಿನಿಮಾ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು. ಇನ್ನು ಮಕ್ಕಳ ಜೊತೆ ಆಗಮಿಸಿದ್ದ ಪೊಲೀಸರು ಸಿನಿಮಾ ನೋಡಿ ರಿಲ್ಯಾಕ್ಸ್ ಆದರು. ಸಿನಿಮಾದ ಸಂದರ್ಭದಲ್ಲಿ, ಸಿಬ್ಬಂದಿಗಳ ಕುಟುಂಬದವರು, ಒಬ್ಬರನ್ನೊಬ್ಬರನ್ನು ಪರಿಚಯಿಸಿಕೊಂಡರು, ತಮ್ಮ ಮೇಲಾಧಿಕಾರಿಗಳಿಗೆ ತಮ್ಮ ಕುಟುಂಬವನ್ನು ಪರಿಚಯಿಸಿ ಖುಷಿ ಪಟ್ಟರು. ಹಿರಿಯ ಅಧಿಕಾರಿಗಳೂ ಸಹ ಸಿಬ್ಬಂದಿಗಳೊಡನೆ, ಅವರ ಕುಟುಂಬದೊಡನೆ ಆತ್ಮೀಯವಾಗಿ ಬೆರೆತರು.

ಖುಷಿ ಹಂಚಿಕೊಂಡ ಪೊಲೀಸ್ ಅಧಿಕಾರಿಗಳು
''ಯಾವಾಗಲೂ ಕೆಲಸದ ಒತ್ತಡದಲ್ಲಿ ಇರುತ್ತಿದ್ದೆವು. ರಕ್ಷಣೆ, ಭದ್ರತೆ, ಅಪರಾಧ ಪ್ರಕರಣಗಳು ಹೀಗೆ ಬ್ಯುಸಿ ಇರುತ್ತಿದ್ದೆವು. ಸಿನಿಮಾ ಬಗ್ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ವೀಕ್ಷಣೆ ಮಾಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಭೂತಕೋಲದ ಸಹ ಅತ್ಯುತ್ತಮವಾಗಿ ಮೂಡಿಬಂದಿದೆ. ಕರಾವಳಿ ಜನರ ನಂಬಿಕೆಯಾಗಿರುವ ಭೂತಕೋಲದ ಬಗ್ಗೆ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ರಿಷಬ್ ಶೆಟ್ಟಿ, ಕಿಶೋರ್ ಸೇರಿದಂತೆ ಎಲ್ಲರ ನಟನೆ ಸೂಪರ್. ಸಿನಿಮಾ ಮುಗಿಯುವವರೆಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಅತ್ಯುತ್ತಮ ಚಿತ್ರ ಎಂದರೆ ಉತ್ಪ್ರೇಕ್ಷೆ ಆಗದು. ಅದರಲ್ಲಿಯೂ ಕುಟುಂಬದ ಸಮೇತ ಪೊಲೀಸ್ ಸಿಬ್ಬಂದಿ ವೀಕ್ಷಣೆ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ ಎಂದು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಂತಸ ಹಂಚಿಕೊಂಡರು.

ಒಟ್ಟಿಗೆ ಬಂದು ಸಿನಿಮಾ ನೋಡಿದ ಗ್ರಾಮಸ್ಥರು
'ಕಾಂತಾರ' ಸಿನಿಮಾ ಬಿಡುಗಡೆಯಾದ ದಿನದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಿಗ್ಗಜ ನಟರೆಲ್ಲರೂ ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದಾರೆ. ದಾವಣಗೆರೆಯಲ್ಲಿಯೂ ಸಹ 'ಕಾಂತಾರ' ಸಿನಿಮಾ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಕೆಲವು ದಿನಗಳ ಹಿಂದೆ ಒಂದು ಗ್ರಾಮದ ಜನ ಸಹ ಇಡೀಯ ಚಿತ್ರಮಂದಿರವನ್ನು ಬುಕ್ ಮಾಡಿಕೊಂಡು ಬಸ್‌ನಲ್ಲಿ ಬಂದು 'ಕಾಂತಾರ' ಸಿನಿಮಾ ನೋಡಿದ್ದು ಸುದ್ದಿಯಾಗಿತ್ತು. ಈಗ ಪೊಲೀಸರು ಒಟ್ಟಾಗಿ ಸಿನಿಮಾ ನೋಡಿದ್ದಾರೆ.


Click it and Unblock the Notifications











