ಜೈಲಿನಲ್ಲಿರುವ ಕೈದಿಗಳ ಜೊತೆ ಸಂಪರ್ಕದಲ್ಲಿದ್ದಾರಾ ನಟ ಧನ್ವೀರ್ ಗೌಡ?; ಸಿಸಿಬಿ ವಿಚಾರಣೆ
ರೇಣುಕಾಸ್ವಾಮಿ ಪ್ರಕರಣದ ಆರೋಪಿಯಾಗಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೇ ವೇಳೆ ಒಂದಷ್ಟು ವೀಡಿಯೋಗಳು ವೈರಲ್ ಆಗ್ತಿದೆ. ಇದಕ್ಕೂ ದರ್ಶನ್ ಆಪ್ತ ನಟ ಧನ್ವೀರ್ ಗೌಡಗೂ ಸಂಬಂಧ ಇದ್ಯಾ ಎಂದು ಪೊಲೀಸರು ಅನುಮಾನಗೊಂಡು ಕರೆಸಿ ವಿಚಾರಣೆ ನಡೆಸಿದ್ದಾರೆ.
ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಕನಿಷ್ಠ ಸೌಲಭ್ಯ ಸಿಗುವುದಿಲ್ಲ. ಜೈಲಿನ ನಿಯಮದ ಪ್ರಕಾರ ಕೆಲವೇ ಕೆಲವು ಸೌಲಭ್ಯ ಮಾತ್ರ ಸಿಗುತ್ತದೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ ದುಡ್ಡಿದ್ದವರದ್ದೇ ದುನಿಯಾ ಎನ್ನುವಂತಾಗಿದೆ. ದುಡ್ಡು ಕೊಟ್ಟರೆ ಜೈಲಿನಲ್ಲಿ ಬೇಕಾದ್ದು ಸಿಗುತ್ತದೆ ಎನ್ನುವ ಮಾತುಗಳು ಪದೇ ಪದೆ ಕೇಳಿಬರುತ್ತದೆ. ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಆತಿಥ್ಯ ನೀಡಿರುವ ವೀಡಿಯೋಗಳು ವೈರಲ್ ಆಗುತ್ತಿದೆ.

ಇತ್ತೀಚೆಗೆ ಜೈಲಿನಲ್ಲೇ ಕೈದಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿರುವ ವೀಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣದ ಆರೋಪಿ ಉಮೇಶ್ ರೆಡ್ಡಿ ಟಿವಿ ನೋಡ್ತಾ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಬಿಂದಾಸ್ ಆಗಿ ಇರುವುದು ಕಂಡುಬಂದಿದೆ. ಐಸಿಸ್ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾಗೂ ರಾಜಾತಿಥ್ಯ ಸಿಕ್ಕಿರುವುದಾಗಿ ವರದಿಯಾಗಿದೆ. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ಹೊರಬಂದು ಸುದ್ದಿ ಆಗಿದೆ. ಸಿಎಂ ಸಿದ್ದರಾಮಯ್ಯ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.
ಸದ್ಯ ಹೀಗೆ ಜೈಲಿನಲ್ಲಿ ಕೈದಿಗಳು ಬಿಂದಾಸ್ ಆಗಿರುವ ವೀಡಿಯೋಗಳು ಹೇಗೆ ಹೊರಬಂತು ಎನ್ನುವ ಚರ್ಚೆ ಕೂಡ ಶುರುವಾಗಿದ್ದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ನಟ ಧನ್ವೀರ್ ಈ ವೀಡಿಯೋಗಳನ್ನು ಲೀಕ್ ಮಾಡಬಹುದು ಎನ್ನುವ ಅನುಮಾನ ಕೂಡ ಇದೆಯಂತೆ. ಇದೇ ಕಾರಣಕ್ಕೆ ಆತನನ್ನು ಸಿಸಿಬಿ ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಧನ್ವೀರ್ ಫೋನ್‌ನಲ್ಲಿ ಯಾವುದೇ ವೀಡಿಯೋ ಕಂಡುಬಂದಿಲ್ಲ ಎಂದು ವರದಿಯಾಗಿದೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ಕಳೆದ ವರ್ಷ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದ್ದ ವಿಷಯ ಬಹಿರಂಗವಾಗಿತ್ತು. ಹಾಗಾಗಿ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಜಾಮೀನು ರದ್ದಾಗಿತ್ತು.
ಇನ್ನು ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಗಮನಕ್ಕೆ ಬಂದಿತ್ತು. ಹಾಗಾಗಿ ಮುಂದೆ ಇದು ಪುನರಾವರ್ತನೆ ಆಗದಂತೆ ಜೈಲು ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸುಪ್ರೀಂ ಸೂಚನೆ ನೀಡಿತ್ತು. ಆಗಸ್ಟ್ 14ರಂದು ದರ್ಶನ್ ಸೇರಿ ಎಲ್ಲಾ ಆರೋಪಿಗಳು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಬಾರಿ ಜೈಲು ಅಧಿಕಾರಿಗಳು ಬಹಳ ನಿಯಂತ್ರಣ ಹೇರಿದ್ದಾರೆ. ಜೈಲ್ ಮ್ಯಾನ್ಯುವಲ್ ಬಿಟ್ಟು ಬೇರೆ ಯಾವುದೇ ಸೌಲಭ್ಯ ಕೊಡುತ್ತಿಲ್ಲ.
ನಟ ದರ್ಶನ್ ಹಾಸಿಗೆ ದಿಂಬು ಕೇಳಿ ಕೋರ್ಟ್‌ನಲ್ಲಿ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ನನಗೆ ಬಿಸಿಲಿನಲ್ಲಿ ಓಡಾಡಲು ಬಿಡುತ್ತಿಲ್ಲ. ಇದರಿಂದ ಕೈಯಲ್ಲಿ ಫಂಗಸ್ ಬಂದಿದೆ. ಕನಿಷ್ಠ ಸೌಲಭ್ಯ ಕೊಡುತ್ತಿಲ್ಲ ಎಂದು ದೂರಿದ್ದರು. ಇದೇ ಸಮಯದಲ್ಲಿ ಈಗ ಬೇರೆ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ವೀಡಿಯೋಗಳು ಹೊರಬಂದು ವಿವಾದ ಸೃಷ್ಟಿಯಾಗಿದೆ. ಹಾಗಾಗಿ ವೀಡಿಯೋ ಹೇಗೆ ಹೊರಬಂತು ಎಂದು ಚರ್ಚೆ ಶುರುವಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಪ್ರತಿಕ್ರಿಯಿಸಿದ್ದಾರೆ. ನಮಗೂ ಈ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಮಾಧ್ಯಮಗಳಲ್ಲಿ ಕೂಡ ಸುದ್ದಿ ನೋಡಿದ್ದೇನೆ. ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.


Click it and Unblock the Notifications











