ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ & ಗ್ಯಾಂಗ್ ವಿರುದ್ದ ಕೊನೆಗೂ ಚಾರ್ಜ್‌ಶೀಟ್ ಸಲ್ಲಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 3991 ಪುಟಗಳ ದೋಷಾರೋಪ ಪಟ್ಟಿ ಇದಾಗಿದೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿ 17 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸದ್ಯ ಆರೋಪಿಗಳು ವಿಚಾರಣಾಧೀನ ಕೈದಿಗಳಾಗಿ ರಾಜ್ಯದ ವಿವಿಧ ಜೈಲುಗಳಲ್ಲಿದ್ದಾರೆ.
ಪ್ರೇಯಸಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಅಪಹರಿಸಿ ಥಳಿಸಲಾಗಿತ್ತು. ಈ ವೇಳೆ ಆತ ಪ್ರಾಣ ಬಿಟ್ಟಿದ್ದ. ನಟ ದರ್ಶನ್ ಸೂಚನೆಯಂತೆ ಕೆಲವರು ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಪರಹರಿಸಿ ಬೆಂಗಳೂರಿಗೆ ಕರೆತಂದಿದ್ದರು. ಪಟ್ಟಣಗೆರೆ ಬಳಿಯ ಶೆಡ್‌ವೊಂದರಲ್ಲಿ ಆತನನ್ನು ಕೂಡಿ ಹಾಕಿ ಥಳಿಸಿದ್ದರು. ರೇಣುಕಾಸ್ವಾಮಿ ಸತ್ತಮೇಲೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದರು.

ಜೂನ್ 9ರಂದು ರೇಣುಕಾಸ್ವಾಮಿ ಶವ ಸುಮನಹಳ್ಳಿ ರಿಂಗ್‌ರೋಡ್ ಬಳಿ ಸಿಕ್ಕಿತ್ತು. ಜೂನ್ 11 ರಂದು ದರ್ಶನ್ ಸೇರಿದಂತೆ ಉಳಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿತ್ತು. ಜೂನ್ 22ರಿಂದ ನ್ಯಾಯಾಂಗ ಬಂಧನ ಆರಂಭವಾಗಿತ್ತು. ಪ್ರಕರಣದ ನಡೆದು 90 ದಿನಕ್ಕೂ ಮುನ್ನ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ತನಿಖಾಧಿಕಾರಿ ಚಂದನ್ ನೇತೃತ್ವದ ತಂಡ ಎಸಿಎಂಎಂ ಕೋರ್ಟ್‌ಗೆ ಚಾರ್ಜ್‌ಶೀಟ್ ಪ್ರತಿ ತಲುಪಿಸಿದ್ದಾರೆ. 7 ಸಂಪುಟಗಳ 10 ಕಡತಗಳನ್ನು ಸಲ್ಲಿಸಿದ್ದು 231 ಸಾಕ್ಷಿದಾರರ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
8 ಎಫ್‌ಎಸ್‌ಎಲ್ ಹಾಗೂ ಸಿಎಫ್‌ಎಸ್‌ಎಲ್ ವರದಿಗಳು ಚಾರ್ಜ್‌ಶೀಟ್‌ನಲ್ಲಿದೆ. ರೇಣುಕಾಸ್ವಾಮಿ ಹತ್ಯೆಯ ಬಗ್ಗೆ ಇಂಚಿಂಚು ಮಾಹಿತಿಯನ್ನು ನಮೂದಿಸಲಾಗಿದೆ. ಪ್ರಕರಣ ಬಯಲಾಗುತ್ತಿದ್ದಂತೆ ಪೊಲೀಸರು ತನಿಖೆ ಆರಂಭಿಸಿದ್ದರು. ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದರು. ಪಟ್ಟಣಗೆರೆ ಶೆಡ್‌ಗೆ ಬಳಿ ಆರೋಪಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡಿದ್ದರು. ರೇಣುಕಾಸ್ವಾಮಿ ಅಪಹರಣ, ಹತ್ಯೆ ಸಮಯದಲ್ಲಿ ಆರೋಪಿಗಳು ಯಾರ್ಯಾರ ಸಂಪರ್ಕದಲ್ಲಿದ್ದರು ಅವರೆಲ್ಲರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು.
ಸದ್ಯ FSL ಹಾಗೂ CFSL ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನು ತನಿಖೆ ಬಾಕಿ ಇರುವುದಕ್ಕೆ ಕಾರಣ ಏನು ಎನ್ನುವುದನ್ನು ಪೊಲೀಸರು ತಿಳಿಸಿದ್ದಾರೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಅಪಹರಣ ಹಾಗೂ ಹತ್ಯೆಗೆ ಪ್ರಮುಖ ಕಾರಣ ದರ್ಶನ್ ಎಂದು ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂದು ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ಇದ್ದರು ಎನ್ನುವ ಬಗ್ಗೆ ಬಲವಾದ ಸಾಕ್ಷ್ಯಾಧಾರ ಒದಗಿಸಿದ್ದಾರೆ ಎನ್ನಲಾಗ್ತಿದೆ.
ಇನ್ನು ರೇಣುಕಾಸ್ವಾಮಿ ಹತ್ಯೆ ನಡೆದ ಸಮಯದಲ್ಲಿ ಪಟ್ಟಣಗೆರೆ ಶೆಡ್‌ನಲ್ಲಿ ಪವಿತ್ರಾ ಗೌಡ ಇದ್ದರು ಎನ್ನಲಾಗಿದೆ. ಆಕೆಯ ಕುಮ್ಮಕ್ಕಿನಿಂದಲೇ ಆರೋಪಿಗಳು ರೇಣುಕಾಸ್ವಾಮಿಯನ್ನು ಥಳಿಸಿದ್ದಾರೆ. ಆರೋಪಿಗಳು ಜೈಲು ಸೇರಿದ 75 ದಿನಗಳ ಬಳಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಹಾಗೂ ದರ್ಶನ್ ಎ2 ಎಂದು ಈ ಹಿಂದೆಯೇ ಹೇಳಲಾಗಿತ್ತು. ಅದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿಯನ್ನು ಕೂಡ ಚಾರ್ಜ್‌ಶೀಟ್‌ನಲ್ಲಿ ನೀಡಲಾಗಿದೆ. ಆತನ ಮೈಮೇಲೆ 39 ಗಾಯದ ಗುರುತು ಇರುವುದು ವರದಿಯಲ್ಲಿ ಗೊತ್ತಾಗಿದೆ. ಆತನ ಮೈಗೆ ಸಿಗರೇಟ್‌ನಿಂದ ಸುಟ್ಟು ವಿಕೃತಿ ಮೆರೆದಿರುವುದು ಬಯಲಾಗಿದೆ. ಇನ್ನು ಪ್ರಕರಣದಲ್ಲಿ ದರ್ಶನ್ & ಗ್ಯಾಂಗ್ ವಿರುದ್ಧ 27 ಜನ ಸಾಕ್ಷ್ಯ ನುಡಿದಿದ್ದಾರೆ. ಅದೆಲ್ಲದರ ಮಾಹಿತಿ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
ಚಾರ್ಜ್‌ಶೀಟ್ ಸಲ್ಲಿಕೆ ಬಳಿಕ ಕೋರ್ಟ್ ಪ್ರಕ್ರಿಯೆ ಶುರುವಾಗುತ್ತದೆ. ಪೊಲೀಸರು ನೀಡಿರುವ ಆರೋಪ ಪಟ್ಟಿಯನ್ನು ಸೆಷನ್ಸ್ ಕೋರ್ಟ್ ಪರಿಶೀಲಿಸಲಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಸಾಕ್ಷ್ಯ ವಿಚಾರಣೆ ನಡೆಸಲು ಅವಕಾಶ ಇಲ್ಲ. ಹಾಗಾಗಿ ಶೀಘ್ರದಲ್ಲೇ ಪ್ರಕರಣ ಸೆಷನ್ಸ್ ಕೋರ್ಟ್‌ಗೆ ವರ್ಗಾವಣೆ ಆಗಲಿದೆ.


Click it and Unblock the Notifications











