ಆಂಧ್ರಪ್ರದೇಶದಲ್ಲಿ ಪೂಜಾಗಾಂಧಿ ವಯಸ್ಕರ ಚಿತ್ರ ಹಿಟ್
ಇದೇನು ಆಶ್ವರ್ಯ ಸ್ವಾಮಿ ದಂಡುಪಾಳ್ಯದ ದುಂಡು ಬೆಡಗಿ ಕಮ್ ಬಿಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತೆ ಪೂಜಾಗಾಂಧಿ ಚಿತ್ರ ಆಂಧ್ರದಲ್ಲಿ ಅರ್ಧ ಸೆಂಚುರಿ ಬಾರಿಸಿದೆ ಅಂತೀರಾ. ಹೌದು, ಪೂಜಾಗಾಂಧಿ ಅಭಿನಯದ 'ದಂಡುಪಾಳ್ಯಂ' ಚಿತ್ರ ಆಂಧ್ರದ 18 ಕೇಂದ್ರಗಳಲ್ಲಿ 50 ದಿನ ಪೂರೈಸಿದೆ.
ಕನ್ನಡದಲ್ಲಿ ಸಾಕಷ್ಟು ವಿವಾದ, ಗದ್ದಲಕ್ಕೆ ಕಾರಣವಾಗಿದ್ದ ದಂಡುಪಾಳ್ಯ ಚಿತ್ರವನ್ನು ತೆಲುಗಿಗೆ ಡಬ್ ಮಾಡಲಾಗಿತ್ತು. ಶ್ರೀನಿವಾಸರಾಜು ನಿರ್ದೇಶನದ ಈ ಚಿತ್ರವನ್ನು ತೆಲುಗಿನಲ್ಲಿ ವೆಂಕಟ್ ಮೂವೀಸ್ ಬ್ಯಾನರ್ ಲಾಂಛನದಲ್ಲಿ ಬಿಡುಗಡೆ ಮಾಡಲಾಗಿದೆ.
ವಿಶಾಖಪಟ್ಟಣಂನ ಗೋಕುಲ ಚಿತ್ರಮಂದಿರದಲ್ಲಿ ದಂಡುಪಾಳ್ಯಂ ಚಿತ್ರದ 50ನೇ ದಿನದ ಸಂಭ್ರಮ ಇತ್ತೀಚೆಗೆ ನಡೆಯಿತು. ಅದೇನು ಆಶ್ಚರ್ಯವೋ ಏನೋ ಈ ಚಿತ್ರವನ್ನು ಕೆಲವು ಆಂಧ್ರ ಕಲಾರಸಿಕರು ನಾಲ್ಕು ಐದು ಬಾರಿ ನೋಡಿದ್ದಾರಂತೆ. ಇದನ್ನು ಸ್ವತಃ ಚಿತ್ರದ ನಿರ್ದೇಶಕರೇ ಕಾರ್ಯಕ್ರಮದಲ್ಲಿ ಸಾಬೀತುಪಡಿಸಿದರು.
ತೆಲುಗು ಚಿತ್ರರಸಿಕರಿಗೆ ದಂಡುಪಾಳ್ಯಂ ಚಿತ್ರ ಹೊಸ ಅನುಭವ ನೀಡಿದೆ. ಈ ಚಿತ್ರ ಖಂಡಿತ 100 ದಿನ ಪೂರೈಸಲಿದೆ ಎಂದು ನಿರ್ದೇಶಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ 'ದಂಡುಪಾಳ್ಯ 2' ಚಿತ್ರವನ್ನು ಕೈಗೆತ್ತಿಕೊಳ್ಳುವುದಾಗಿಯೂ ಘೋಷಿಸಿದ್ದಾರೆ.
ಗುಂಟೂರಿನ ಗೌರಿಶಂಕರ್ ಥಿಯೇಟರ್ ನಲ್ಲೂ 'ದಂಡುಪಾಳ್ಯಂ' ಚಿತ್ರ ಅರ್ಧ ಶತಕ ಪೂರೈಸಿದೆ. ಪೂಜಾಗಾಂಧಿ, ರಘುಮುಖರ್ಜಿ, ಪ್ರಿಯಾಂಕಾ ಕೊಠಾರಿ, ರವಿಕಾಳೆ, ಪೆಟ್ರೋಲ್ ಪ್ರಸನ್ನ, ಮುನಿ, ಯತಿರಾಜ್, ಮಕರಂದ್ ದೇಶಪಾಂಡೆ, ಕರಿಸುಬ್ಬು ಮುಂತಾದವರು ಅಭಿನಯದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು.


Click it and Unblock the Notifications











