ಡರ್ಟಿ ಪಾತ್ರಕ್ಕಾಗಿ ಪೂಜಾ ಗಾಂಧಿ, ನಿಖಿತಾ ರಹಸ್ಯ ಭೇಟಿ
ಕನ್ನಡದ ಡರ್ಟಿ ಚಿತ್ರದಲ್ಲಿ ನಟಿಸಲು ತಾರೆಯರಾದ ಪೂಜಾಗಾಂಧಿ ಹಾಗೂ ನಿಖಿತಾ ತುಕ್ರಲ್ ಇಬ್ಬರೂ ಪ್ರಯತ್ನಿಸಿದ್ದರು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಈ ವಿಷಯವನ್ನು ಬೆಳಕಿಗೆ ತಂದಿರುವವರು ಚಿತ್ರದ ನಿರ್ದೇಶಕ ತ್ರಿಶೂಲ್. ವಿವರಗಳಿಗೆ ಹೊರಳಿದರೆ ಅಚ್ಚರಿ ಸಂಗತಿಗಳು ಹೊರಬೀಳುತ್ತವೆ.
ಡರ್ಟಿ ಪಿಕ್ಚರ್, ಸಿಲ್ಕ್ ಸಖತ್ ಹಾಟ್ ಮಗಾ ಎಂಬ ಚಿತ್ರಕ್ಕೆ ಪಾಕಿಸ್ತಾನದ ಐಟಂ ಬಾಂಬ್ ವೀಣಾ ಮಲಿಕ್ ಆಗಮಿಸಿದ್ದಾರೆ. ಈಗಾಗಲೆ ಚಿತ್ರದ ಮುಹೂರ್ತವೂ ನೆರವೇರಿದೆ. ವೀಣಾ ಮಲಿಕ್ ಫೋಟೋ ಶೂಟ್ ಕೂಡ ನಡೆದಿದೆ. ಇಷ್ಟೆಲ್ಲಾ ಆದ ಮೇಲೆ ಚಿತ್ರದ ನಿರ್ದೇಶಕ ಸಣ್ಣದೊಂದು ಬಾಂಬನ್ನು ಸಿಡಿಸಿದ್ದಾರೆ.
ಈ ಚಿತ್ರಕ್ಕೆ ವೀಣಾ ಮಲಿಕ್ ಅವರನ್ನೇ ಯಾಕೆ ಆಯ್ಕೆ ಮಾಡಿದಿರಿ ಎಂಬ ಪ್ರಶ್ನೆಗೆ ಅವರು ಹೇಳಿದ್ದು ಹೀಗೆ. ಈ ಚಿತ್ರದಲ್ಲಿ ಅಭಿನಯಿಸಲು ಮೊದಲು ನಿಖಿತಾ ತುಕ್ರಲ್ ಬಂದಿದ್ದರು. ಆದರೆ ಅವರು ಚಿತ್ರದ ಟೈಟಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಶೀರ್ಷಿಕೆಯಲ್ಲಿನ ಸಿಲ್ಕ್ ಎಂಬ ತೆಗೆಯಬೇಕು ಎಂದರಂತೆ. ಅದಕ್ಕೆ ನಿರ್ದೇಶಕರು ಒಪ್ಪದ ಕಾರಣ ಆಕೆ ಕೈಕೊಟ್ಟರಂತೆ.
ಬಳಿಕ ಈ ಚಿತ್ರದಲ್ಲಿ ಅಭಿನಯಿಸಲು ಜೆಡಿಎಸ್‌ನ ತೆನೆಹೊತ್ತ ಮಹಿಳೆ ಪೂಜಾ ಗಾಂಧಿ ಸಂಪರ್ಕಿಸಿದ್ದಾರೆ. ಡರ್ಟಿ ಕತೆ ಕೇಳಿದ ಪೂಜಾ ಗಾಂಧಿ ಸಂಭಾವನೆ ಜಾಸ್ತಿ ಕೇಳಿದರಂತೆ. ಆದರೆ ಪೂಜಾ ಗಾಂಧಿಗೆ ಅಷ್ಟೆಲ್ಲಾ ಕೊಟ್ಟು ಪ್ರಯೋಜನವಿಲ್ಲ ಎಂದು ನಿರ್ದೇಶಕರೇ ಆಕೆಯನ್ನು ರಿಜಕ್ಟ್ ಮಾಡಿದರಂತೆ.
ಚಿತ್ರದಲ್ಲಿ ಸಾಕಷ್ಟು ಗ್ಲಾಮರ್ ಅಂಶಗಳಿದ್ದು, ಸಿಲ್ಕ್ ಸ್ಮಿತಾ ಜೀವನದ ಮೂರು ಹಂತಗಳನ್ನು ತೋರಿಸಲಾಗಿದೆಯಂತೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುಂದಿನ ಜೀವನ. ಬಣ್ಣದ ಬದುಕು ಹಾಗೂ ಆಕೆಯ ಜೀವನದ ಕೊನೆಯ ಭಾಗವನ್ನು ತೆಗೆದುಕೊಳ್ಳಲಾಗಿದೆಯಂತೆ.
ತಮ್ಮ ಚಿತ್ರದಲ್ಲಿ ಯಾವುದೇ ಅಶ್ಲೀಲ ದೃಶ್ಯಗಳು, ಸನ್ನಿವೇಶಗಳು ಇಲ್ಲವೇ ಇಲ್ಲ. ಮನೆಮಂದಿಯಲ್ಲಾ ಕುಳಿತು ನೋಡಬಹುದು ಎಂದಿದ್ದಾರೆ ತ್ರಿಶೂಲ್. ವೆಂಕಟಪ್ಪ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು, ನಿರ್ಮಾಪಕರ ಪುತ್ರ ಅಕ್ಷಯ್ ನಾಯಕ ನಟ.
ಅಂದಹಾಗೆ ಚಿತ್ರದ ಫೋಟೋಶೂಟ್‌ನಲ್ಲಿ ವೀಣಾ ಮಲಿಕ್ ಸೇಬೊಂದನ್ನು ಕಚ್ಚಿದ್ದರು. ಈ ಸೇಬನ್ನು ಚಿತ್ರತಂಡ ಹರಾಜು ಹಾಕಿದೆ. ಆ ಸೇಬಿಗೆ ಭರ್ಜರಿ ಬೆಲೆಯೂ ಸಿಕ್ಕಿದೆಯಂತೆ. ಎಷ್ಟು ಎಂಬ ಅಂಶವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಎಂದರೆ, ವೀಣಾ ಮಲಿಕ್ ಈ ಚಿತ್ರಕ್ಕಾಗಿ ರು.70ರಿಂದ 80 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲಾ ಬಂಡವಾಳ ಹಾಕಿದ್ದರೂ ಅದು ವಾಪಸ್ ಬಂದೇ ಬರುತ್ತದೆ ಎಂಬ ವಿಶ್ವಾಸಲ್ಲಿದ್ದಾರೆ ಚಿತ್ರದ ನಿರ್ಮಾಪಕರು. (ಏಜೆನ್ಸೀಸ್)


Click it and Unblock the Notifications











