ಕರ್ನಾಟಕದವಳಾದ್ರೂ ಪೋಷಕರು ಒತ್ತಡ ಹಾಕಿದ್ರೂ ಪೂಜಾ ಹೆಗ್ಡೆ ಕನ್ನಡ ಚಿತ್ರದಲ್ಲಿ ಯಾಕೆ ನಟಿಸ್ತಿಲ್ಲ?
ಬಹುಭಾಷಾ ನಟಿ ಪೂಜಾ ಹೆಗ್ಡೆ ನಟನೆಯ 'ರೆಟ್ರೋ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಚಿತ್ರದಲ್ಲಿ ಸೂರ್ಯ ಜೋಡಿಯಾಗಿ ಕರಾವಳಿ ಚೆಲುವೆ ನಟಿಸಿದ್ದಾರೆ. ಚಿತ್ರದ 'ಕಣಿಮಾ' ಸಾಂಗ್‌ನಲ್ಲಿ ಆಕೆಯ ಡ್ಯಾನ್ಸ್ ವೈರಲ್ ಆಗ್ತಿದೆ.
ಮೇ ಮೊದಲ ವಾರದಲ್ಲಿ 'ರೆಟ್ರೋ' ಸಿನಿಮಾ ತೆರೆಗೆ ಬರಲಿದೆ. ತುಳು ಮಾತನಾಡುವ ಭಂಟರ ಕುಟುಂಬದಲ್ಲಿ ಪೂಜಾ ಹೆಗ್ಡೆ ಹುಟ್ಟಿದವರು. ಆದರೆ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದ ಚೆಲುವೆಗೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. ತಮಿಳಿನ 'ಮುಗಮುಡಿ' ಚಿತ್ರದ ಮೂಲಕ ಆಕೆ ಬಣ್ಣ ಹಚ್ಚಲು ಆರಂಭಿಸಿದರು. ಬಳಿಕ ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದರು.

ಕರ್ನಾಟಕ ಮೂಲದವರಾಗಿದ್ದರೂ ಪೂಜಾ ಈವರೆಗೆ ಒಂದೇ ಒಂದು ಕನ್ನಡದಲ್ಲಿ ಚಿತ್ರದಲ್ಲಿ ನಟಿಸಿಲ್ಲ. ಪೋಷಕರು, ಸಂಬಂಧಿಕರು ಕೂಡ ಕನ್ನಡ ಚಿತ್ರದಲ್ಲಿ ನಟಿಸುವಂತೆ ಆಕೆಗೆ ಒತ್ತಡ ಹೇರುತ್ತಾರಂತೆ. ಆದರೂ ಆಕೆ ಈವರೆಗೆ ಯಾವುದೇ ಕನ್ನಡ ಚಿತ್ರಕ್ಕೆ ಬಣ್ಣ ಹಚ್ಚಲಿಲ್ಲ. ಸಂದರ್ಶನವೊಂದರಲ್ಲಿ ಈ ಬಗ್ಗೆ ಪೂಜಾ ಮಾತನಾಡಿದ್ದಾರೆ.
ಹೃತಿಕ್ ರೋಷನ್, ಸಲ್ಮಾನ್ ಖಾನ್, ರಾಮ್‌ಚರಣ್, ದಳಪತಿ ವಿಜಯ್, ಪ್ರಭಾಸ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಜೊತೆ ಪೂಜಾ ಹೆಗ್ಡೆ ನಟಿಸಿದ್ದಾರೆ. ಆದರೆ ಆಕೆಗೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ. ಅಂದ, ಅಭಿನಯ ಇದ್ದರೂ ಸ್ಟಾರ್ ನಟಿಯಾಗಿ ಮಿಂಚಲು ಸಾಧ್ಯವಾಗುತ್ತಿಲ್ಲ. ಗ್ಲಾಮರಸ್ ಪಾತ್ರದಲ್ಲಿ ನಟಿಸಿದರೂ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸಲ್ಮಾನ್ ಖಾನ್ ಜೊತೆ ನಟಿಸಿದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್', ಹೃತಿಕ್ ಜೋಡಿಯಾಗಿದ್ದ 'ಮೆಹೆಂಜೊದಾರೊ', ಪ್ರಭಾಸ್ ಜೊತೆ ಮಿಂಚಿದ 'ರಾಧೆಶ್ಯಾಮ್' ಚಿತ್ರಗಳು ಕೈ ಹಿಡಿಯಲಿಲ್ಲ. 'ಡಿಜೆ', 'ಅಲಾ ವೈಕುಂಠಪುರಂಲೊ', 'ಮಹರ್ಷಿ', 'ಬೀಸ್ಟ್' ಸೇರಿ ಕೆಲ ಸಿನಿಮಾಗಳು ಹಿಟ್ ಆಗಿದ್ದರೂ ಅದರಿಂದ ಆಕೆಗೆ ಯಾವುದೇ ಪ್ರಯೋಜನವಾಗಲಿಲ್ಲ.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಪೂಜಾ ಹೆಗ್ಡೆ ಯಾಕೆ ಕನ್ನಡ ಚಿತ್ರದಲ್ಲಿ ನಟಿಸಿಲ್ಲ ಎನ್ನುವುದನ್ನು ಹೇಳಿದ್ದಾರೆ. "ನಾನು ಕರ್ನಾಟಕದವಳು. ನಮ್ಮದು ತುಳು ಭಾಷಿಕರ ಕುಟುಂಬ. ನನ್ನ ಪೋಷಕರು, ಸಂಬಂಧಿಕರು ಕನ್ನಡ ಸಿನಿಮಾದಲ್ಲಿ ನಟಿಸುವಂತೆ ಹೇಳುತ್ತಲೇ ಇರ್ತಾರೆ. ಈಗಾಗಲೇ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಾನು ನಟಿಸಿದ್ದೀನಿ. ಕನ್ನಡ ಸಿನಿಮಾ ಕಥೆಗಳನ್ನು ಕೇಳಿದ್ದೇನೆ. ಆದರೆ ಯಾವುದು ಇಷ್ಟವಾಗಲಿಲ್ಲ" ಎಂದು ಪೂಜಾ ತಿಳಿಸಿದ್ದಾರೆ.
"ಒಳ್ಳೆ ಕಥೆ ಸಿಕ್ಕರೆ ಕಂಡಿತ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೇನೆ. ನಮ್ಮ ಪೋಷಕರು ಪದೇ ಪದೆ ಈ ಬಗ್ಗೆ ಕೇಳುತ್ತಾರೆ" ಎಂದು ಪೂಜಾ ಹೆಗ್ಡೆ ವಿವರಿಸಿದ್ದಾರೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಕಂಬಳ ಓಟದ ಸ್ಪರ್ಧೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪೂಜಾ ಹೆಗ್ಡೆ ಬಂದಿದ್ದರು. ಪ್ರತಿಬಾರಿ ಬೆಂಗಳೂರಿಗೆ ಬರುವುದು ವಿಶೇಷ ಅನುಭವ ನೀಡುತ್ತದೆ. ಇದು ನನ್ನ ಮನೆ, ನಾನು ಕರ್ನಾಟಕದವಳು. ಅದಕ್ಕೆ ಹೆಮ್ಮೆ ಎನಿಸುತ್ತದೆ. ಹಾಗಾಗಿ ಬೆಂಗಳೂರಿಗೆ ಬರುವುದು ನಮ್ಮ ಮನೆಗೆ ಬಂದಂತಾಗುತ್ತದೆ ಎಂದು ಪೂಜಾ ಹೆಗ್ಡೆ ಹೇಳಿದ್ದರು.
'ರೆಟ್ರೋ' ಜೊತೆಗೆ ತಮಿಳಿನ 'ಜನ ನಾಯಕನ್', 'ಕಾಂಚನಾ- 4', ಹಿಂದಿಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಎಂಬ ಸಿನಿಮಾಗಳಲ್ಲಿ ಪೂಜಾ ಈಗ ನಟಿಸುತ್ತಿದ್ದಾರೆ. ರಜನಿಕಾಂತ್ ನಟನೆಯ 'ಕೂಲಿ' ಚಿತ್ರದ ಸ್ಪೆಷಲ್ ಸಾಂಗ್‌ಗೆ ಡ್ಯಾನ್ಸ್ ಮಾಡಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಕೂಡ ತೆರೆಗೆ ಬರಲಿದೆ. ಸದ್ಯ 'ರೆಟ್ರೋ' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಹಿಂದಿ ಹಾಗೂ ತಮಿಳಿನಲ್ಲಿ ತಮ್ಮ ಪಾತ್ರಕ್ಕೆ ತಾವೇ ಡಬ್ ಸಹ ಮಾಡಿದ್ದಾರೆ.


Click it and Unblock the Notifications