''ಇನ್ನಾದರೂ ನಿರಾಳವಾಗಿ ನಿದ್ರಿಸಿ'' - ಅಪರ್ಣಾ ನೆನೆದು ಬಿಕ್ಕಿದ ಪೂಜಾ ಲೋಕೇಶ್, ನೆನಪಿರಲಿ ವರ್ಷಾ ...!
ಅಪರ್ಣಾ ನಮ್ಮ ನಡುವೆ ಇಲ್ಲವೆನ್ನುವ ಕಹಿ ಸತ್ಯವನ್ನು ಇವತ್ತು ಕೂಡ ಅರಗಿಸಿಕೊಳ್ಳಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಜೀವನವೇ ಒಂದು ನಿತ್ಯೋತ್ಸವ ಎನ್ನುತ್ತಿದ್ದ ನಿರೂಪಕಿ ಅಪರ್ಣಾ ವಿದಾಯದಿಂದ ಅನೇಕ ತಾರೆಯರ ಮನ ಮರಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಜೀವದ ಗೆಳತಿಯನ್ನೂ ಕಳೆದುಕೊಂಡು ಪೂಜಾ ಲೋಕೇಶ್ ಕಣ್ಣೀರಾಗಿದ್ದಾರೆ. ಗುರುವನ್ನೂ ಕಳೆದುಕೊಂಡ ವರ್ಷಾ ಭಾವುಕರಾಗಿದ್ದಾರೆ.
ಹೌದು, ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಅಪರ್ಣಾ ಜೊತೆಗೆ ಕೆಲಸ ಮಾಡಿದ್ದ ಪೂಜಾ ಲೋಕೇಶ್ ಮತ್ತು ಅಪರ್ಣಾ ಅವರನ್ನ ಆದರ್ಶವನ್ನಾಗಿಸಿಕೊಂಡು, ನಿರೂಪಣೆಯಲ್ಲಿ ಅವರ ಹೆಜ್ಜೆ ಗುರುತನ್ನೇ ಹಿಂಬಾಲಿಸಿ ನಿರೂಪಕಿಯಾಗಿ ಅಷ್ಟೇ ಅಲ್ಲದೇ ನೆನಪಿರಲಿ ಚಿತ್ರದ ಮೂಲಕ ನಾಯಕಿಯಾಗಿ ಎಲ್ಲರ ಮನ ಗೆದ್ದ ವರ್ಷಾ, ಅಗಲಿದ ಅಪರ್ಣಾ ಅವರಿಗೆ ಅಕ್ಷರದ ಮೂಲಕ ನಮನ ಸಲ್ಲಿಸಿದ್ಧಾರೆ. ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನೋವನ್ನೂ ಹೊರಹಾಕಿದ್ದಾರೆ.

ಮರೆಯಲಾಗದ ನೆನಪುಗಳು, ಕ್ಷಣಗಳು, ನಗು, ಮಾತುಗಳು, ಎಲ್ಲವೂ ಮನಸ್ಸಿನಲ್ಲಿ ಸದಾ ಇರುತ್ತದೆ ಎಂದಿರುವ ಪೂಜಾ ಲೋಕೇಶ್, ರಿಹರ್ಸಲ್‌ಗೆ ಬಂದಾಗ Shill ಏನ್ ಗೊತ್ತಾ.. ಅಂತ ಹೇಳ್ಕೊಂಡು ನನ್ನ ಹತ್ತಿರ ಬರುವುದು ಇನ್ನು ಕಿವಿಯಲ್ಲಿ ಕೇಳುತ್ತಿದೆ ಎಂದಿದ್ದಾರೆ. ಪ್ರತಿ ಸಲ ಮಜಾ ಟಾಕೀಸ್ ಸ್ಟೇಜ್ ಹತ್ತುವಾಗಲೂ ಬಂದು ನನ್ನನು ಅಲ್ಲೇ ಇರಲು ಹೇಳಿ, ಮುಗಿದ ನಂತರ ಬಂದು ಹೇಗಿತ್ತು ಎಂದು ಒಬ್ಬ ಚಿಕ್ಕ ಹುಡುಗಿಯಂತೆ ಕಲಿಯುವ ಆ ನಿಮ್ಮ ಆಸಕ್ತಿ.... ಎಂದು ಮರೆಯಲು ಅಸಾಧ್ಯ... ಕೊನೆಯ ಬಾರಿ ನಿಮ್ಮ ಹತ್ತಿರ ಮಾತನಾಡಿದಾಗ ಆ ಅಪ್ಪು ಎಲ್ಲೋ ಕಳೆದುಹೋಗಿದ್ದರು ಎಂದು ಪೂಜಾ ಲೋಕೇಶ್ ಭಾವುಕರಾಗಿದ್ಧಾರೆ. ಎಷ್ಟು ನೋವನ್ನೂ ಅನುಭವಿಸಿದೀರಿ.... ಇನ್ನಾದರೂ ನಿರಾಳವಾಗಿ ನಿದ್ದ್ರಿಸಿ... ಹೋಗಿ ಬನ್ನಿ ಅಪ್ಪು... ಎಂದು ಅಪರ್ಣಾ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ ಪೂಜಾ ಲೋಕೇಶ್.
ಇನ್ನೂ 'ಮಜಾ ಟಾಕೀಸ್'ನಲ್ಲಿ ಒನ್ ಅಂಡ್ ಒನ್ಲಿ ವರಲಕ್ಷ್ಮೀ ಪಾತ್ರಕ್ಕೆ ಅಪರ್ಣಾ ಬಣ್ಣ ಹಚ್ಚಿದ್ದರೆ, ಪೂಜಾ ಲೋಕೇಶ್ ತೆರೆ ಹಿಂದೆ ಕೆಲಸ ಮಾಡುತ್ತಿದ್ದರು. ಅಪರ್ಣಾ ಜೊತೆಗಿನ ಹಲವು ಫೋಟೋಗಳನ್ನ ರೀಲ್ಸ್ ಮಾದರಿಯಲ್ಲಿ ಹಂಚಿಕೊಂಡಿರುವ ಪೂಜಾ ಲೋಕೇಶ್ ಕಂಬನಿ ಮಿಡಿದಿದ್ದಾರೆ.
ಪೂಜಾ ಲೋಕೇಶ್ ಅವರ ಜೊತೆ ವರ್ಷಾ ಕೂಡ ಅಪರ್ಣಾ ಅವರ ಜೊತೆ ಇದ್ದ ಒಡನಾಟ ನೆನಪಿಸಿಕೊಂಡಿದ್ದಾರೆ. ಇದು ನಮ್ಮ ಕೊನೆಯ ಫೋಟೋ ಆಗಲಿದೆ ಎಂದು ನನಗೆ ಗೊತ್ತಾಗಲೇ ಇಲ್ಲ ಎಂದಿರುವ ನೆನಪಿರಲಿ ವರ್ಷಾ ಒಂದು ವಾರದ ನಂತರ ನೀವು ಚಿರನಿದ್ರೆಗೆ ಜಾರುತ್ತೀರಿ ಎಂದು ಕನಸಿನಲ್ಲಿಯೂ ನಾನು ಅಂದುಕೊಂಡಿರಲಿಲ್ಲ ಅಂದಿದ್ದಾರೆ. ನೀವು ವಾರಿಯರ್ ಕ್ವೀನ್. ಎಂದು ಬಿಕ್ಕಿದ್ದಾರೆ.
ಮುಂದುವರೆದು ಈ ಸುಂದರ ನಗುವಿನ ಹಿಂದಿರುವ ಅಪಾರ ನೋವನ್ನು ಯಾರು ತಾನೇ ಊಹಿಸಬಲ್ಲರು..?! ನನ್ನ ಪ್ರೀತಿಯ ಅಪರ್ಣಾಗೆ ಅಂತಿಮ ವಿದಾಯ.. ನನ್ನ ಗುರು, ನನ್ನ ರಾಣಿ, ನನ್ನ ಹೋರಾಟಗಾರ್ತಿ, ನನ್ನ ಸ್ಫೂರ್ತಿ...ಹೋಗ್ಬನ್ನಿ....ಎಂದು ತಮ್ಮ ದುಃಖ ವ್ಯಕ್ತಪಡಿಸಿರುವ ವರ್ಷಾ ಈಗ್ಲಾದ್ರೂ ನೆಮ್ಮದಿಯಾಗಿ ನಿದ್ರೆ ಮಾಡ್ತಿದೀರಿ ಅಂದ್ಕೊಂಡಿದೀನಿ. ಯಾಕೆ ಅಂದ್ರೆ ಮಧ್ಯರಾತ್ರಿ ಯಾವ ನೋವಿನ ಕರೆಯೂ ಬರ್ಲಿಲ್ಲ ಮೇಡಂ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ ನೆನಪಿರಲಿ ಖ್ಯಾತಿಯ ವರ್ಷಾ.


Click it and Unblock the Notifications











