'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ರೀ-ರಿಲೀಸ್; ಥಿಯೇಟರ್‌ಗಳು ಖಾಲಿ ಖಾಲಿ
ದರ್ಶನ್ ನಟನೆಯ ಹಿಟ್ ಸಿನಿಮಾಗಳು ಒಂದೊಂದಾಗಿ ರೀ-ರಿಲೀಸ್ ಆಗುತ್ತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟಕ್ಕೆ ಸಿಲುಕಿದ ಮೇಲೆ ನಾಲ್ಕೈದು ಸಿನಿಮಾಗಳು ಮತ್ತೆ ತೆರೆಗೆ ಬಂದವು. ಆದರೆ ಎಲ್ಲದಕ್ಕೂ ಒಳ್ಳೆ ರೆಸ್ಪಾನ್ಸ್ ಸಿಗಲಿಲ್ಲ.
'ಶಾಸ್ತ್ರಿ', 'ಕರಿಯ' ಹಾಗೂ 'ನವಗ್ರಹ' ಚಿತ್ರಕ್ಕೆ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದ್ದರು. ಆದರೆ 'ಪೊರ್ಕಿ', 'ರಾಬರ್ಟ್' ಚಿತ್ರಗಳು ರೀ-ರಿಲೀಸ್ ಆಗಿ ನಿರಾಸೆ ಮೂಡಿಸಿದ್ದವು. ಇದೀಗ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಮರುಬಿಡುಗಡೆ ಆಗಿದೆ. ಆದರೆ ಸರಿಯಾದ ಪ್ರಚಾರ ಇಲ್ಲದೇ ಥಿಯೇಟರ್‌ಗಳು ಖಾಲಿ ಹೊಡೆಯುತ್ತಿವೆ. ಈ ಬಗ್ಗೆ ಸ್ವತಃ ದರ್ಶನ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನಾಗಣ್ಣ ನಿರ್ದೇಶನದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾ 12 ವರ್ಷಗಳ ಹಿಂದೆ ತೆರೆಗೆ ಬಂದು ಗೆದ್ದಿತ್ತು. ನವೆಂಬರ್ 8ಕ್ಕೆ ಚಿತ್ರವನ್ನು ರಿ-ರಿಲೀಸ್ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಆ ದಿನ 'ನವಗ್ರಹ' ಚಿತ್ರ ಪ್ರೇಕ್ಷಕರ ಮುಂದೆ ಬಂದಿತ್ತು. ಒಂದೇ ದಿನ ಎರಡು ಸಿನಿಮಾ ರಿಲೀಸ್ ಬೇಡ ಮುಂದೂಡಲಾಗಿತ್ತು. ಆದರೆ ಸರಿಯಾದ ಪ್ರಚಾರ ಇಲ್ಲದೇ ದಿಢೀರನೆ ಸಿನಿಮಾ ತೆರೆಗೆ ತರಲಾಗಿದೆ.
ರಾಜ್ಯದ ಕೆಲ ಚಿತ್ರಮಂದಿರಗಳಲ್ಲಿ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಪ್ರದರ್ಶನವಾಗುತ್ತಿದೆ. ಬೆಂಗಳೂರಿನ ಜೆಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಬೆಳ್ಳಂಬೆಳಗ್ಗೆ ಪ್ರದರ್ಶನ ಶುರುವಾಗಿದೆ. ಬೆಳಗ್ಗೆ 7 ಗಂಟೆ ಹಾಗೂ 10 ಗಂಟೆಗೆ ಶೋ ಹಾಕಲಾಗಿತ್ತು. ಬುಕ್‌ಮೈ ಶೋನಲ್ಲಿ ಶೋ ಸೋಲ್ಡೌಟ್ ಎಂದು ತೋರಿಸಿತ್ತು. ಆದರೆ ಬೆಳಗ್ಗೆ ಸಿನಿಮಾ ಪ್ರದರ್ಶನ ವೇಳೆ ಕೇವಲ ಹತ್ತಿಪ್ಪತ್ತು ಜನ ಮಾತ್ರ ಸಿನಿಮಾ ವೀಕ್ಷಿಸಿದ್ದಾರೆ.

ಬುಕ್ ಮೈ ಶೋ ಬಗ್ಗೆ ದರ್ಶನ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಟಿಕೆಟ್ ಎಲ್ಲಾ ಬುಕ್ ಆಗಿದೆ ಎಂದು ಅಭಿಮಾನಿಗಳ ದಿಕ್ಕು ತಪ್ಪಿಸಿದ್ದಾರೆ. ಇದು ಫೇಕ್ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ಪ್ರಚಾರ ಮಾಡದೇ ಇದ್ದಕ್ಕಿದ್ದಂತೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಬಿಡುಗಡೆ ಮಾಡಿದ್ದು ಸರಿಯಲ್ಲ ಎಂದು ವಿತರಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದರ್ಶನ್ ಸಿನಿಮಾಗಳು ಬಿಡುಗಡೆ ಆದರೆ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿ ಇರುತ್ತದೆ. ಆದರೆ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಮರು ಬಿಡುಗಡೆ ಆಗಿದ್ದು ಬಹುತೇಕರಿಗೆ ಗೊತ್ತೇಯಿಲ್ಲ. ಇನ್ನು ಬುಕ್‌ಮೈ ಶೋ ಬಗ್ಗೆಯೂ ಕೆಲವರಿಗೆ ಅನುಮಾನ ಮೂಡಿದೆ. ಪ್ರೇಕ್ಷಕರನ್ನು ಸೆಳೆಯಲು ಇಂತಹ ಟ್ರಿಕ್ಸ್ ಬಳಸುತ್ತಿದ್ದಾರಾ? ಎನ್ನುವ ಬೇಸರ ಕೂಡ ಕೆಲವರಲ್ಲಿದೆ.
ಈ ಹಿಂದೆ ಜೂನ್‌ನಲ್ಲಿ 'ರಾಬರ್ಟ್' ಸಿನಿಮಾ ರೀ-ರಿಲೀಸ್ ಆಗಿತ್ತು. ಸಿನಿಮಾ 2 ಸಾವಿರ ಕೂಡ ಕಲೆಕ್ಷನ್ ಮಾಡಲಿಲ್ಲ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಹಿಟ್ ಚಿತ್ರಗಳನ್ನು ಮರುಬಿಡುಗಡೆ ಮಾಡುವ ಟ್ರೆಂಡ್ ಜೋರಾಗಿದೆ. ದೊಡ್ಡ ಸಿನಿಮಾಗಳು ಬರದೇ ಥಿಯೇಟರ್ ಖಾಲಿ ಇಟ್ಟುಕೊಳ್ಳುವ ಬದಲು ಹಳೇ ಚಿತ್ರಗಳನ್ನು ಇತ್ತೀಚೆಗೆ ಹೆಚ್ಚು ಹೆಚ್ಚು ಬಿಡುಗಡೆ ಮಾಡಲಾಗ್ತಿದೆ. ಆದರೆ ಎಲ್ಲಾ ಚಿತ್ರವೂ ಗೆಲ್ಲುತ್ತಿಲ್ಲ.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಜಾಕಿ' ಸಿನಿಮಾ ರೀ-ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಳಿಕ ಉಪೇಂದ್ರ ನಿರ್ದೇಶಿಸಿ ನಟಿಸಿದ 'ಎ' ಹಾಗೂ 'ಉಪೇಂದ್ರ' ಚಿತ್ರಗಳು ಮತ್ತೆ ತೆರೆಗೆ ಬಂದು ಅಭಿಮಾನಿಗಳನ್ನು ರಂಜಿಸಿತ್ತು. ದರ್ಶನ್ ನಟನೆಯ 'ನವಗ್ರಹ' ಚಿತ್ರಕ್ಕೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ದಿನಕರ್ ಅಂಡ್ ಟೀಂ ಭಾರೀ ಪ್ರಚಾರ ಮಾಡಿ ಸಿನಿಮಾ ರೀ- ರಿಲೀಸ್ ಮಾಡಿದ್ದರು.


Click it and Unblock the Notifications











