ಅಭಿಮಾನಕ್ಕೆ ಬೆಲೆ ಇಲ್ಲ..ಬದುಕಿಗೆ ಕಳೆ ಇಲ್ಲ.. ಅಪ್ಪು ನೆನೆದು ಅನುಶ್ರೀ ಭಾವುಕ...!
ಪುನೀತ್ ರಾಜ್ ಕುಮಾರ್ ಅಗಲಿ ಮೂರು ವರ್ಷಗಳಾಗಿವೆ. ಆದರೆ ಇವತ್ತು ಕೂಡ ಅಪ್ಪು ನಮ್ಮ ನಡುವೆ ಇಲ್ಲ ಎನ್ನುವ ಸತ್ಯವನ್ನು ಅನೇಕರು ಒಪ್ಪಲು ತಯಾರಿಲ್ಲ. ಆ ಪೈಕಿ ಅನುಶ್ರೀ ಕೂಡ ಒಬ್ಬರು.
ಹೌದು. ಕುಂತರೂ..ನಿಂತರೂ.. ಅಪ್ಪು ಅವರನ್ನೇ ಆರಾಧಿಸುತ್ತಾ ಬಂದ ಅನುಶ್ರೀ, ಪುನೀತ್ ರಾಜ್ ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ. ನೀವು ಇಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ ಎಂದು ಬಿಕ್ಕಿದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅನುಶ್ರೀ, ನಮ್ಮ ಕಂಗಳ ಬಿಸಿಯ ಹನಿಗಳು ನೂರು ಬಾರಿ ಕೂಗಿದೆ. ನಿಮ್ಮ ನಗುವ ಮೊಗವ ನೋಡಲು ಕೋಟಿ ಕಂಗಳು ಕಾಯುತ್ತಿದೆ ಎಂದಿದ್ದಾರೆ. ಮಿಸ್ ಯು ಸರ್, ನೀವಿಲ್ಲದೇ ಅಭಿಮಾನ ಇಲ್ಲ...ನೀವಿಲ್ಲದೇ ಅಭಿಮಾನಕ್ಕೆ ಬೆಲೆ ಇಲ್ಲ...ನೀವಿಲ್ಲದೇ ಬದುಕಿಗೆ ಕಳೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಅಕ್ಷರ ನಮನವನ್ನು ಅನುಶ್ರೀ ಸಲ್ಲಿಸಿದ್ದಾರೆ.

ಹೀಗೆ ತಮ್ಮ ಮನದ ನೋವನ್ನು ಹೊರ ಹಾಕಿರುವ ಅನುಶ್ರೀ, ಮೊನ್ನೆಯಷ್ಟೇ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಜನಪ್ರಿಯ ನಿರೂಪಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಂತರ ಅನುಶ್ರೀ ವೇದಿಕೆಯ ಮೇಲೆ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದಿದ್ದರು. ಇನ್ನೂ ಅನುಶ್ರೀ ಅವರ ಯೂಟ್ಯೂಬ್ ಚಾನೆಲ್ ಅಪ್ಪು ಇಲ್ಲದೇ ಅಪೂರ್ಣ. ಈ ಚಾನೆಲ್‌ನ ಕಣ ಕಣವನ್ನೂ ಅಪ್ಪು ಆವರಿಸಿಕೊಂಡಿದ್ದಾರೆ.
ಅಪ್ಪು ಅಗಲಿದ ದಿನದಿಂದ ಇಲ್ಲಿಯವರೆಗೆ ಅನುಶ್ರೀ ಅಪ್ಪು ಅವರ ಪುಣ್ಯಭೂಮಿಗೆ ಹಲವು ಬಾರಿ ಭೇಟಿ ನೀಡಿದ್ದಾರೆ.ತಮ್ಮ ನೆಚ್ಚಿನ ನಾಯಕನನ್ನು ನೆನಪು ಮಾಡಿಕೊಂಡು ಕಣ್ಣೀರಾಗಿದ್ದಾರೆ. ಸಮಾಧಿಗೆ ನಮನ ಸಲ್ಲಿಸಿ ಅಪ್ಪು ಆಶೀರ್ವಾದ ಪಡೆದಿದ್ದಾರೆ. ಇದಲ್ಲದೇ ಅನುಶ್ರೀ ನಿರೂಪಣೆ ಮಾಡುವ ಬಹುತೇಕ ಕಾರ್ಯಕ್ರಮದಲ್ಲಿ ಅಪ್ಪು ನೆನಪು ಇದ್ದೇ ಇರುತ್ತೆ. ಪುನೀತ್ ಹೆಸರು ಆ ಕಾರ್ಯಕ್ರಮದಲ್ಲಿ ಅನುಶ್ರೀ ಬಾಯಿಂದ ಬಂದೇ ಬರುತ್ತೆ.
ಇಂಥಾ ಅನುಶ್ರೀ ಕಳೆದ ಕೆಲ ತಿಂಗಳ ಹಿಂದೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಬಿಕ್ಕಿದ್ದರು. ಟೈಮ್ ಟ್ರಾವೆಲ್ ಮೂಲಕ ಅಗಲಿದ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿ ಮಾಡುವಂತೆ ಇದ್ದರೆ ಹೇಗಿರುತ್ತೆ ಎನ್ನುವುದನ್ನು ತೋರಿಸಲಾಗಿತ್ತು. ಆಗ ಜ್ಯೂನಿಯರ್ ಪುನೀತ್ ಅವರನ್ನು ನೋಡಿ ಅನುಶ್ರೀ ವೇದಿಕೆ ಮೇಲೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ವಾಪಸ್ ಬಂದು ಬಿಡಿ ಸಾರ್ ಪ್ಲೀಸ್...ನೀವಿಲ್ಲದೆ ಇಲ್ಲಿ ಏನೂ ಸರಿಯಾಗಿ ನಡೆಯುತ್ತಿಲ್ಲ ಎಂದು ಕಣ್ಣೀರು ಹಾಕಿದ್ದರು.
ಎಲ್ಲರಿಗೂ ಅಪ್ಪು ಅಂದ್ರೆ ಎಷ್ಟು ಇಷ್ಟನೋ, ಅಷ್ಟೂ ನನಗೆ ಪಂಚ ಪ್ರಾಣ. ಅಪ್ಪು ಸರ್ ಇಲ್ಲಿ ನಿಂತುಕೊಂಡಿದ್ದರು. ಆಗ ನನಗೆ ಅವರು ಹೇಳಿದ್ದರು.ಆಗ ನನ್ನ ಕೈ ಹಿಡಿದುಕೊಂಡು ಹೇಳಿದ್ದರು. ನೀವು ಸುಧಾರಿಸಿಕೊಳ್ಳಿ, ನೀವು ಸಮಾಧಾನವಾಗಿ ಇರಬೇಕು ಎಂದು ಕೊನೆಯದಾಗಿ ನನ್ನ ಜೊತೆಗೆ ಮಾತನಾಡಿದ್ದರು ಎಂದು ಅನುಶ್ರೀ ಕಣ್ಣೀರು ಹಾಕಿದ್ದರು.
ಅಂದ್ಹಾಗೇ ಡಾ.ಪುನೀತ್ ರಾಜ್ ಕುಮಾರ್ ಮೂರು ವರ್ಷದ ಹಿಂದೆ ಇದೇ ದಿನದಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಅಪ್ಪು ಅಗಲಿಕೆಯ ನೋವು ಇನ್ನೂ ಕೂಡ ಕನ್ನಡಿಗರನ್ನು ಕಾಡುತ್ತಿದೆ. ಮುಂದೆ ಕೂಡ ಕಾಡುತ್ತಲೇ ಇರುತ್ತದೆ. ಯಾಕೆಂದರೆ ಸೂರ್ಯನೊಬ್ಬ.. ಚಂದ್ರನೊಬ್ಬ.. ಈ ರಾಜನೂ ಒಬ್ಬ....ಅಪ್ಪು ಅಭಿಮಾನಿಗಳ ಹೃದಯಲ್ಲಿ ಸದಾ ಜೀವಂತವಾಗಿರುತ್ತಾರೆ.


Click it and Unblock the Notifications











