ಅಂಬಿ ಮೃತ ದೇಹ ನೋಡಿ ಬಿಕ್ಕಿ ಬಿಕ್ಕಿ ಅತ್ತ ಕಲಾವಿದ ಬಳಗ
ಅಂಬರೀಶ್ ಅಗಲಿಕೆಯ ನೋವನ್ನು ಹೇಗೆ ತಡೆದುಕೊಳ್ಳಲು ಸಾಧ್ಯ. ನಿನ್ನೆ ಸಂಜೆವರೆಗೆ ಇದ್ದ ವ್ಯಕ್ತಿ ರಾತ್ರಿ 11 ಗಂಟೆಗೆ ಇಲ್ಲ ಅಂದರೆ ಏನು ಹೇಳುವುದು. ಒಂದು ಕ್ಷಣಕ್ಕೆ ಇಡೀ ಜೀವನ ನಶ್ವರ ಎನಿಸುತ್ತದೆ.
ಇಷ್ಟು ದಿನ ಎಲ್ಲಿ ಹೋದರೂ, ತಮಾಷೆ ಮಾಡಿಕೊಂಡು, ಎಲ್ಲರ ಕಾಲು ಎಳೆಯುತ್ತದ್ದ ಅಂಬರೀಶ್ ಇಂದು ಮೌನವಾಗಿದ್ದಾರೆ. ಅವರ ಆ ಮೌನ ಎಲ್ಲರಲ್ಲಿ ಕಣ್ಣೀರು ಹಾಕುವಂತೆ ಮಾಡಿದೆ.
ಅಂಬರೀಶ್ ಅಂತಿಮ ದರ್ಶನ ಪಡೆಯಲು ಇಡೀ ಕನ್ನಡ ಚಿತ್ರರಂಗ ಬಂದಿದೆ. ಜೊತೆಗೆ ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು, ತಮಿಳು ನಟ ಶರತ್ ಕುಮಾರ್, ಸುಹಾಸಿನಿ ಬೆಂಗಳೂರಿಗೆ ಬಂದು ತಮ್ಮ ಗೆಳೆಯನಿಗೆ ಅಂತಿಮ ನಮನ ಸಲ್ಲಿಸಿದರು. ಅದರಲ್ಲಿಯೂ ನಟ ಚಿರಂಜೀವಿ, ಸುದೀಪ್, ಮೋಹನ್ ಬಾಬು ಬಿಕ್ಕಿ ಬಿಕ್ಕಿ ಅತ್ತರು. ಮುಂದೆ ಓದಿ...

ಕಣ್ಣೀರಿಟ್ಟ ಚಿರಂಜೀವಿ
ಅಂಬರೀಶ್ ಅವರ ಪಾರ್ಥೀವ ಶರೀರದ ದರ್ಶನ ಪಡೆಯಲು ಹೈದರಾಬಾದ್ ನಿಂದ ಬೆಂಗಳೂರಿಗೆ ಚಿರಂಜೀವಿ ಬಂದಿದ್ದರು. ಅಂಬರೀಶ್ ನಿಧನದ ಸುದ್ದಿ ಕೇಳಿ ಮನನೊಂದಿದ್ದ ಚಿರಂಜೀವಿ, ಮೃತದೇಹ ನೋಡಿ ಕಣ್ಣೀರಿಟ್ಟರು. ಅಂಬರೀಶ್ ಪತ್ನಿ ಸುಮಲತಾಗೆ ಚಿರಂಜೀವಿ ಸಾಂತ್ವನ ಹೇಳಿದರು.
ಅವರ ಜೊತೆ ಸಿನಿಮಾ ಮಾಡಿದ್ದು ನನ್ನ ಭಾಗ್ಯ - ಪುನೀತ್
''ಅವರ ಮೇಲೆ ಮಂಡ್ಯದ ಜನರಿಗೆ ಇದ್ದ ಒಲವು ಹಾಗೆ ಇರುತ್ತದೆ. ನಾನು 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಅವರ ಜೊತೆಗೆ ನಟಿಸಿದ್ದು, ನನ್ನ ಭಾಗ್ಯ. 'ಅಂಬಿ ನಿಂಗೆ ವಯಸ್ಸಾಯ್ತೋ' ಅವರ ಕಡೆ ಸಿನಿಮಾ ಅಂತ ಹೇಳಿದ್ದಾಗ ಮತ್ತೆ ನಮ್ಮ ಜೊತೆಗೆ ಸಿನಿಮಾ ಮಾಡಿ ಅಂತ ನಾನೂ ಹೇಳಿದ್ದೆ. ಅವರು ನಮ್ಮ ಜೊತೆಗೆ ಇದ್ದಾರೆ.'' - ಪುನೀತ್ ರಾಜ್ ಕುಮಾರ್, ನಟ
ಅವರ ಆತ್ಮೀಯತೆ ಮರೆಯಲು ಆಗಲ್ಲ - ರಮೇಶ್ ಅರವಿಂದ್
''ಒಬ್ಬ ನಟನಾಗಿ ಅವರ ಸಿನಿಮಾವನ್ನು ಬಹಳ ಖುಷಿಪಟ್ಟು ನೋಡಿದ್ದೇನೆ. 'ಗರುಡ ಧ್ವಜ', 'ಏಳು ಸುತ್ತಿನ ಕೋಟೆ' ಸಿನಿಮಾಗಳಲ್ಲಿ ಅವರ ಜೊತೆಗೆ ನಟಿಸಿದ್ದೇನೆ. ಅವರ ಮನೆಗೆ ಆಗಾಗ ಹೋಗುತ್ತಿದೆ. ಅವರು ತೋರಿಸುತ್ತಿದ್ದ ಆತ್ಮೀಯತೆ, ಆ ನಗು ಮುಖ ಮರೆಯಲು ಆಗಲ್ಲ.'' - ರಮೇಶ್ ಅರವಿಂದ್, ನಟ

ತುಂಬ ಆತ್ಮೀಯ ಸ್ನೇಹಿತ - ಮೋಹನ್ ಬಾಬು
''ಅದು ಸಣ್ಣವರೇ ಆಗಲಿ, ದೊಡ್ಡವರೇ ಆಗಲಿ ಎಲ್ಲರಿಗೆ ಅವರು ಸಹಾಯ ಮಾಡುತ್ತಿದ್ದರು. ನಾನು ಆಂಧ್ರದಲ್ಲಿ ಇದ್ದರೂ ನನಗೆ ತುಂಬ ಆತ್ಮೀಯ ಸ್ನೇಹಿತ ಅವರಂತ ವ್ಯಕ್ತಿ ಮತ್ತೆ ಈ ಜನ್ಮದಲ್ಲಿ ಮತ್ತೆ ಸಿಗುವುದಿಲ್ಲ.'' ಮೋಹನ್ ಬಾಬು, ತೆಲುಗು ನಟ

ಹಿರಿಯಣ್ಣನನ್ನು ಕಳೆದುಕೊಂಡಿದ್ದೇವೆ - ಗಣೇಶ್
''ಒಳ್ಳೆಯ ವಿಷಯ ಏನೇ ಇದ್ದರೂ ಮೊದಲು ಅಣ್ಣನಿಗೆ ಹೇಳುತ್ತಿದ್ದೇವು. ಯಾವುದೇ ಕಾರ್ಯಕ್ರಮ ಇದ್ದರೂ ಅವರು ಬಂದರೆ ಅದಕ್ಕೆ ಒಂದು ಕಳೆ ಇರುತ್ತಿತ್ತು. ನಮ್ಮ ಕುಟುಂಬ ಹಿರಿಯಣ್ಣನನ್ನು ಕಳೆದುಕೊಂಡಿದ್ದೇವೆ. ಮನಸ್ಸಿಗೆ ಬಹಳ ದುಃಖ ಆಗುತ್ತಿದೆ. - ಗಣೇಶ್, ನಟ
ಅದ್ಭುತ ನಟ, ಅದ್ಭುತ ವ್ಯಕ್ತಿ - ಶರತ್ ಕುಮಾರ್
ಒಂದು ತಿಂಗಳ ಹಿಂದೆ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ನೋಡುವುದಕ್ಕೆ ಕರೆದಿದ್ದರು. ಸಿನಿಮಾ ನೋಡಿ ಅವರ ಜೊತೆಗೆ ಊಟ ಮಾಡಿ ಹೋಗಿದ್ದೆ. ಯಾವಾಗ ಬೆಂಗಳೂರಿಗೆ ಬಂದರೂ ಅವರನ್ನು ಭೇಟಿ ಮಾಡುತ್ತಿದೆ. ಎಲ್ಲ ಚಿತ್ರರಂಗಕ್ಕೆ ಇದೊಂದು ಶಾಕಿಂಗ್ ಸುದ್ದಿ. ಅವರು ಒಬ್ಬ ಅದ್ಭುತ ನಟ, ಅದ್ಭುತ ವ್ಯಕ್ತಿ.'' - ಶರತ್ ಕುಮಾರ್, ತಮಿಳು ನಟ
ನಿಜವಾದ ಗೆಳೆಯ
''ರಾಜಕೀಯ ಮತ್ತು ಸಿನಿಮಾರಂಗದಲ್ಲಿ ನೀವು ಮಾಡಿರುವ ಕೆಲಸ ಮೂಲಕ ಯಾವಾಗಲೂ ನೆನಪಿನಲ್ಲಿ ಇರುತ್ತೀರ. ಆದರೆ, ನನಗೆ ಒಬ್ಬ ನಿಜವಾದ ಗೆಳೆಯನಾಗಿ ಇರುತ್ತೀರಿ. ದಿನದಿಂದ ದಿನಕ್ಕೆ ನಮ್ಮ ಸ್ನೇಹ ಬೆಳೆಯುತ್ತಾ ಹೋಯಿತು. ' ನಾನು ನನಗೆ ಆಗುತ್ತಿರುವ ನೋವನ್ನು ವ್ಯಕ್ತಪಡಿಸಲು ಆಗುತ್ತಿಲ್ಲ. ಮಿಸ್ ಯೂ ಬಾಸ್'' ಎಂದು ಮಲೆಯಾಳಂ ನಟ ಮಮ್ಮೂಟಿ ಟ್ವೀಟ್ ಮಾಡಿದ್ದಾರೆ.

ವಿ ರಿಯಲಿ ಮಿಸ್ ಯೂ - ರಚಿತಾ ರಾಮ್
''ನನ್ನ ಕೆರಿಯರ್ ಶುರು ಆಗಿದ್ದೇ ಅವರ ಸಿನಿಮಾ ಜೊತೆಗೆ. ನನಗೆ ಈ ಸಮಯದಲ್ಲಿ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ನನ್ನ ರೀತಿ ಅವರ ನೂರಾರೂ ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಾರೆ. ಅವರ ರೆಬಲ್ ನೆಸ್ ಗೆ ನಾನು ದೊಡ್ಡ ಅಭಿಮಾನಿ. ವಿ ರಿಯಲಿ ಮಿಸ್ ಯೂ'' - ರಚಿತಾ ರಾಮ್, ನಟ


Click it and Unblock the Notifications











