»   » ಕೊನೆಯುಸಿರೆಳೆದ ಗಾಯಗೊಂಡ ಹುಲಿ

ಕೊನೆಯುಸಿರೆಳೆದ ಗಾಯಗೊಂಡ ಹುಲಿ

By: ಸತ್ಯವ್ರತ ಹೊಸಬೆಟ್ಟು
Subscribe to Filmibeat Kannada

ಆ ದೊಡ್ಡ ಮನೆಯಲ್ಲಿ ಆತ ಒಬ್ಬನೇ ಕುಳಿತು ಕುಡಿಯುತ್ತಿದ್ದ. ಇಡೀ ಜಗತ್ತು ತನಗೆ ಮೋಸ ಮಾಡುತ್ತಿದೆ. ಎಲ್ಲರೂ ತನ್ನನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದಾರೆ ಎಂದು ಅನುಮಾನಿಸುತ್ತಿದ್ದ. ಅಂಥವರೆಲ್ಲರನ್ನು ತಾನೊಬ್ಬನೇ ಮಟ್ಟ ಹಾಕಬಲ್ಲೆ ಎಂದು ಅಭಿಮಾನದಿಂದ ಎದೆತಟ್ಟಿಕೊಳ್ಳುತ್ತಿದ್ದ. ನಡುರಾತ್ರಿ ಒಂಟಿಯಾಗಿ ಹೊರಬಂದು, 36 ಪಿಸ್ತೂಲನ್ನು ಎಡಗೈಯಲ್ಲಿಯೂ, ಡಬಲ್‌ ಬ್ಯಾರಲ್‌ ಗನ್ನನ್ನು ಬಲಗೈಯಲ್ಲಿಯೂ ಹಿಡಕೊಂಡು ಶತ್ರುಗಳಿಗಾಗಿ ಕಾಯುತ್ತಿದ್ದ.

ಹಾಗಂತ ಅನೇಕರು ಮಾತಾಡಿಕೊಂಡರು. ಅದು ಪೂರ್ತಿಸುಳ್ಳಾಗಿರಲಿಲ್ಲ. ಆತ ಬದುಕಿದ್ದೂ ಹಾಗೆ. ಆರಂಭದಲ್ಲಿ ಅನುರಾಗ, ಪ್ರೀತಿಸಿದವರೆಲ್ಲ ಕೈ ಕೊಟ್ಟ ನಂತರ ಅವಮಾನ.

ಆತ ಟೈಗರ್‌. ಟೈಗರ್‌ ಪ್ರಭಾಕರ್‌. ಹುಲಿಯಂತೆ ಗರ್ಜಿಸುತ್ತಿದ್ದ. ಹುಲಿಯಂತೆಯೇ ಬದುಕಲು ಪ್ರಯತ್ನಿಸಿದ್ದ. ರಕ್ತದ ರುಚಿ ಹಿಡಿದ ಹುಲಿಯಂತೆಯೇ ಆಗಿದ್ದ. ತನ್ನ ಭುಜಬಲ ಮತ್ತು Stamina ತನ್ನನ್ನು ಕಾಪಾಡುತ್ತವೆ ಎಂದುಕೊಂಡು ಬದುಕಿದ್ದ ಪ್ರಭಾಕರ್‌, ಕೊನೆಯ ದಿನಗಳಲ್ಲಿ ಗಾಯಗೊಂಡ ಹುಲಿಯಾಗಿದ್ದ. ತನ್ನ ಬಲಗಾಲಿಗೆ ಆದ ಗಾಯ, ತನ್ನನ್ನು ಬಲಿತೆಗೆದುಕೊಳ್ಳುತ್ತದೆ ಎಂದು ಗೊತ್ತಿದ್ದರೂ ಗೊತ್ತಿಲ್ಲದವನಂತೆ ನಟಿಸಿದ.

ಕೊನೆಗೂ ಟೈಗರ್‌ ತೀರಿಕೊಂಡದ್ದು - ಬಲಗಾಲಿಗಾದ ಗಾಯದಿಂದಲೇ, ಕಿಡ್ನಿ ಕೈಕೊಟ್ಟದ್ದರಿಂದಲೇ, ಕರುಳು ಕಿವುಚಿದ್ದರಿಂದಲೇ, ಹೃದಯ ಸೋತದ್ದರಿಂದಲೇ.

ಯಾರಿಗೂ ಗೊತ್ತಿಲ್ಲ. ಕ್ಲಿನಿಕಲ್‌ ಕಾರಣಗಳು ಫೇಲಾಯಿತು ಅನ್ನುತ್ತವೆ. ಆದರೆ ಸ್ವತಃ ಪ್ರಭಾಕರ್‌ ಯಾವತ್ತೂ ವೈದ್ಯರನ್ನು ನಂಬಿರಲಿಲ್ಲ. ವೈದ್ಯರೂ ಆತನನ್ನು ನಂಬಿರಲಿಲ್ಲ . ಯಾಕೆಂದರೆ ಆತ, ಅವರು ಕೊಟ್ಟ ಮಾತ್ರೆಗಳನ್ನು ಯಾವತ್ತೂ ತೆಗೆದುಕೊಂಡವನೇ ಅಲ್ಲ.

ಬೇರೆಯಾದ ಜಯಮಾಲ, ದೂರವಾದ ಡಾಲಿ, ನಂತರ ಜೊತೆಯಾದ ಹಲವರು ಹೀಗೆ ಪ್ರಭಾಕರ್‌ ವರ್ಣರಂಜಿತ ವ್ಯಕ್ತಿ. ಎಕ್ಸ್‌ಕ್ಯೂಸ್‌ಮಿ ಅನ್ನಲ್ಲ, ಎಸ್‌ಕಿಸ್‌ ಮಿ ಅನ್ನುತ್ತೇನೆ. ಹುಡುಗಿಯರು ಬುಟ್ಟಿಗೆ ಬೀಳುತ್ತಾರೆ. ಅಲ್ಲಿಗೆ ಕತೆ ಮುಗೀತು ... ಬಸಿರಾಗುತ್ತಾರೆ. ಮಕ್ಕಳಾಗ್ತಾರೆ ಅಂತ ಸಾರ್ವಜನಿಕವಾಗಿ ಹೇಳುತ್ತಿದ್ದ ಪ್ರಭಾಕರ್‌ ನಾಲ್ಕೈದು ತಿಂಗಳ ಹಿಂದಷ್ಟೇ ಉತ್ತರ ಭಾರತದ ಮಾಡೆಲ್‌ ಒಬ್ಬಳು ತನಗೆ ದಕ್ಕಿದ್ದಾಳೆ. ಗರ್ಭಿಣಿಯೂ ಆಗಿದ್ದಾಳೆ. ಮಗುವಾದ ಮೇಲೆ ಮದುವೆಯಾಗ್ತೇನೆ ಎಂದಿದ್ದ.

ಪ್ರಭಾಕರ್‌ಗೆ ಅಭಿಮಾನಿಗಳಿದ್ದರು. ಅವರ ಮೇಲೆ ಟೈಗರ್‌ಗೆ ಅತ್ಯಂತ ಪ್ರೀತಿಯೂ ಇತ್ತು. ಅಭಿಮಾನಿಗಳ ಜೊತೆಗೆ ಕುಂಟು ಕಾಲು ಎಳೆದುಕೊಂಡು ಕಾರ್ಗಿಲ್‌ ನಿಧಿ ಸಂಗ್ರಹಣೆಗೆ ಹೊರಟಿದ್ದ. ಹಳ್ಳಿಗಳಲ್ಲಿ ಪ್ರಭಾಕರ್‌ ಅಭಿಮಾನಿ ಸಂಘಗಳೂ ಇದ್ದವು. ವರ್ಷಕ್ಕೆ ಇಂತಿಷ್ಟು ಅಂತ ಪ್ರಭಾಕರ್‌ ಹತ್ತಿರ ಕಿತ್ತು ಕೊಂಡು ಹೋಗುತ್ತಿದ್ದರು.

ರಾಜ್‌, ವಿಷ್ಣು , ಅಂಬರೀಷ್‌, ಶ್ರೀನಾಥ್‌ ಹೀಗೆ ಎಲ್ಲರ ಚಿತ್ರಗಳಲ್ಲೂ ಖಳನಾಗಿ ಕಾಣಿಸಿಕೊಂಡ ಪ್ರಭಾಕರ್‌ ಹೀರೋ ಆದದ್ದು ಮುತ್ತೆೈದೆ ಭಾಗ್ಯದ ದಿಂದ. ಅಲ್ಲಿದಾಚೆ ಆತ ನಟಿಸಿದ್ದು ಹೀರೋ ಆಗಿಯೇ. ಕೊನೆ ಕೊನೆಯ ದಿನಗಳಲ್ಲಿ ನಿರ್ಮಾಪಕನೂ ಆದ ಪ್ರಭಾಕರ್‌ ಬೇರೆಯವರ ಚಿತ್ರದಲ್ಲಿ ನಟಿಸುವುದನ್ನು ಕಡಿಮೆ ಮಾಡಿದ.

ಕುಡಿತ ಜಾಸ್ತಿಯಾಯಿತು. ಮನಸ್ಸು ಬಯಸಿದ ಸೆಕ್ಸನ್ನು ದೇಹ ಬಯಸಲಿಲ್ಲ. ಜೊತೆಗಿದ್ದ ಹುಡುಗಿಯರಿಗೂ ಪ್ರಭಾಕರ್‌ ಬಹಳ ಬೇಗ ಬೋರಾಗಿ ಬಿಡುತ್ತಿದ್ದ. ಅಂಥ ದಿನಗಳಲ್ಲಿಯೇ ಆತನಿಗೆ ಹತ್ತಿರವಾದ್ದದ್ದು ಮೊದಲ ಹೆಂಡತಿಯ ಮಗ ವಿನೋದ್‌. ವಿನೋದ್‌ ತನ್ನ ಉತ್ತರಾಧಿಕಾರಿ ಎಂದೂ ಪ್ರಭಾಕರ್‌ ನಂಬಿದ್ದ. ಆದರೆ ಆತ ಮನೆಯಲ್ಲಿದ್ದಾಗಲೇ ಬೇರೆ ಹೆಣ್ಣುಗಳನ್ನು ಕರೆತಂದು ಸಂತೋಷಪಡುತ್ತಿದ್ದ.

ಇಪ್ಪತ್ತೆರಡು ದಿನಗಳ ಹಿಂದೆ ಪ್ರಭಾಕರ್‌ ಆಸ್ಪತ್ರೆ ಸೇರಿದಾಗ ಇದೇ ಅವನ ಕೊನೆಯ ಭೇಟಿ ಎಂದು ಅನೇಕರು ಅಂದುಕೊಂಡಿದ್ದರು. ಆದರೆ ಪ್ರಭಾಕರ್‌ ಮಾತ್ರ 'ನಾಳೆ ವಾಪಾಸು ಬರುತ್ತೇನೆ ಇದೇನಿಲ್ಲ ಮಹಾ ..." ಅಂದಿದ್ದ.

ಈ ನಡುವೆ ಆತನ ಕಾಲು ಕತ್ತರಿಸಲಾಗಿತ್ತು. ಆಸ್ಪತ್ರೆಯಿಂದ ಟೈಗರ್‌ ಪರಾರಿ ಎಂಬಿತ್ಯಾದಿ ಸುದ್ದಿಗಳೂ ಹಬ್ಬಿದ್ದವು.

ಪ್ರಭಾಕರ್‌ ಪ್ರಚಾರಕ್ಕಾಗಿ ಏನೂ ಮಾಡಿದವನಲ್ಲ. ಆತ ತೀರಿಕೊಂಡದ್ದು ಕೂಡ ಪತ್ರಿಕೆಗಳಿಗೆ ರಜಾ ಇದ್ದ ದಿನ, ಯುಗಾದಿಯ ರಾತ್ರಿ. ಆದರೆ ಆತ ಸತ್ತ ಸುದ್ದಿ ಬೆಳಗಾಗುವ ಹೊತ್ತಿಗೆ ಕರ್ನಾಟಕದ ತುಂಬ ಹಬ್ಬಿತ್ತು.

English summary
Sandalwood star tiger prabhakars good bad ugly life gets a full stop

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada