'ಆಕಾಶ ಗಡಿಯ ದಾಟಿ' ಬಂದ ಪ್ರಭಾಸ್-ಪೃಥ್ವಿರಾಜ್ ನಟನೆಯ 'ಸಲಾರ್' ಸಿನಿಮಾದ ಮೊದಲ ಹಾಡು
ಕೆಜಿಎಫ್ ಅಧ್ಯಾಯ 2ರ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಸಲಾರ್. ನಟ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿರುವ 'ಸಲಾರ್' ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈಗ ಚಿತ್ರತಂಡ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ.
'ಸಲಾರ್: ಭಾಗ 1 - ಕದನ ವಿರಾಮ' ಸಿನಿಮಾದ ಮೊದಲ ಹಾಡು ಎಲ್ಲಾ ಐದು ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇದೇ ಡಿಸೆಂಬರ್ 22 ರಂದು ಸಲಾರ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಹಾಡಿನಲ್ಲಿ ಇಬ್ಬರು ಸ್ನೇಹಿತರ ನಡುವಿನ ಬಾಂಧವ್ಯವನ್ನು ಮನಮುಟ್ಟುವಂತೆ ತಲುಪಿಸಿದೆ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಅವರ ಸಂಗೀತ.

ಸ್ನೇಹವನ್ನು ಸಂಭ್ರಮಿಸುವ 'ಆಕಾಶ ಗಡಿಯ ದಾಟಿ ತಂದಾನು ಬೆಳಕು ಕೋಟಿ' ಹಾಡು
ಸಲಾರ್ ಸಿನಿಮಾದ ಮೊದಲ ಹಾಡು ತೆಲುಗಿನಲ್ಲಿ ಸೂರೀಡೆ, ಹಿಂದಿಯಲ್ಲಿ ಸೂರಜ್ ಹಿ ಛಾವ್ ಬಂಕೆ, ಕನ್ನಡದಲ್ಲಿ ಆಕಾಶ ಗಡಿಯಾ ದಾಟಿ, ಮಲಯಾಳಂನಲ್ಲಿ ಸೂರ್ಯಂಗಂ ಮತ್ತು ತಮಿಳಿನಲ್ಲಿ ಸೂರ್ಯನ್ ಕುಡೈಯಾ ನೆಟ್ಟಿ ಎಂದು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ನಟ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಸ್ನೇಹ ಮತ್ತು ಸಹೋದರ ಬಾಂಧವ್ಯವನ್ನು ಎತ್ತಿ ತೋರಿಸಲಾಗಿದೆ.
ಎಲ್ಲಾ ಭಾಷೆಗಳಲ್ಲಿ ರವಿ ಬಸ್ರೂರ್ ಸಂಗೀತ ಮನಕ್ಕೆ ನಾಟುತ್ತದೆ. ಬೇರೆ ಬೇರೆ ಭಾಷೆಗಳಿಗೆ ಬೇರೆ ಬೇರೆ ಗಾಯಕರು ಮತ್ತು ಸಾಹಿತಿಗಳು ಹಾಡನ್ನು ರಚಿಸಿದ್ದಾರೆ. ಎಲ್ಲಾ ಭಾಷೆಯಲ್ಲಿಯೂ ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ ಫ್ಯಾನ್ಸ್. ಕನ್ನಡ ಮತ್ತು ತೆಲುಗು ಭಾಷೆಯ ಪ್ರೇಕ್ಷಕರು ಹೆಚ್ಚು ಇಷ್ಟಪಡುತ್ತಿದ್ದು, ಹಾಡು ಬಿಡುಗಡೆಯಾಗಿ ಮೂರು ಗಂಟೆ ಒಳಗೆ ಎರಡು ಭಾಷೆಯಲ್ಲಿ ಎರಡು ಮಿಲಿಯನ್ ವೀಕ್ಷಣೆ ಕಂಡಿದೆ.
ಗೆಳೆಯನ ನೋವಿಗೆ ಹೆಗಲಾದ ಪ್ರಭಾಸ್
ಟ್ರೈಲರ್‌ನಲ್ಲಿ ನೋಡಿದಂತೆ ಇದು ಸ್ನೇಹ ಮತ್ತು ಸೇಡಿನ ಕಥೆ. ಇಲ್ಲಿ ಪೃಥ್ವಿರಾಜ್ ಸುಕುಮಾರನ್‌ಗಾಗಿ ಒನ್ ಮ್ಯಾನ್ ಆರ್ಮಿಯಂತೆ ಪ್ರಭಾಸ್ ನಿಂತುಕೊಳ್ಳುವುದನ್ನು ನೋಡಿದ್ದೇವೆ. ಹಾಡಿನಲ್ಲಿಯೂ ಅದೇ ಛಾಯೆಯಿದೆ. ಕೆಜಿಎಫ್‌ನಲ್ಲಿ ತಾಯಿ ಮಗನ ನಡುವಿನ ಬಾಂಧವ್ಯವನ್ನು ಕಣ್ಣೀಗೆ ಕಟ್ಟುವಂತೆ ನೀಡಿದ್ದ ರವಿ ಬಸ್ರೂರ್, ಸಲಾರ್‌ನಲ್ಲಿ ಸ್ನೇಹವನ್ನು ಆರಾಧಿಸುವಂತೆ ಮಾಡಿದ್ದಾರೆ.

ಇಬ್ಬರು ಸ್ನೇಹಿತರ ನಡುವಿನ ಭಾವನಾತ್ಮಕತೆ, ಪೃಥ್ವಿರಾಜ್ ಸಂಕಷ್ಟದಲ್ಲಿ ಇರುವ ಚಿತ್ರಗಳು ಅವರ ಕಷ್ಟಕ್ಕೆ ಹೆಗಲಾಗುವ ಪ್ರಭಾಸ್ ದೃಶ್ಯಗಳನ್ನು ಈ ಹಾಡಿನಲ್ಲಿವೆ. ಗಾಬರಿಯಲ್ಲಿರುವ ಪೃಥ್ವಿರಾಜ್‌ಗೆ ಸಮಾಧಾನ ಮಾಡುವ, ಇಲ್ಲಿ ನಾನಿದ್ದೇನೆ, ನಿನಗೆ ಏನು ಆಗಲ್ಲ ಮಲಗು ಎಂದು ಹೇಳುವ ಪ್ರಭಾಸ್, ಕೊನೆಗೆ ಪ್ರಭಾಸ್ ಮಡಿಲಲ್ಲೇ ಮಲಗುವ ಗೆಳೆಯ..ಹೀಗೆ ಪ್ರತಿ ದೃಶ್ಯವಯ ಅವರ ಸ್ನೇಹದ ಗಾಢತೆಯನ್ನು ಚಿತ್ರಿಸಿದೆ.
ಯಾವ ಭಾಷೆಯಲ್ಲಿ ಯಾವ ಗಾಯಕರು..?
ಇನ್ನು ಸಲಾರ್‌ನ ಮೊದಲ ಹಾಡನ್ನು ಬೇರೆ ಬೇರೆ ಭಾಷೆಯಲ್ಲಿ ವಿವಿಧ ಗಾಯಕರು ದನಿಯಾಗಿದ್ದಾರೆ. ಕನ್ನಡದಲ್ಲಿ ವಿಜಯಲಕ್ಷ್ಮಿ ಮೆಟ್ಟಿನಹೊಳೆ ಹಾಡು ಹಾಡಿದ್ದರೇ, ಕಿನ್ನಲ್ ರಾಜ್ ಸಾಹಿತ್ಯ ನೀಡಿದ್ದಾರೆ. ಚಿತ್ರದ ತೆಲುಗು ಆವೃತ್ತಿಯಲ್ಲಿ ಹರಿಣಿ ಇವತ್ತೂರಿ ದನಿ ನೀಡಿದ್ದು, ಸಾಹಿತ್ಯವನ್ನು ಕೃಷ್ಣಕಾಂತ್ (ಕೆಕೆ) ಬರೆದಿದ್ದಾರೆ. ಮಲಯಾಳಂನಲ್ಲಿ ಇಂದುಲೇಖಾ ವಾರಿಯರ್ ಮತ್ತು ರಾಜೀವ್ ಗೋವಿಂದನ್, ತಮಿಳಿನಲ್ಲಿ ಐರಾ ಉಡುಪಿ ಮತ್ತು ಮಧುರಕವಿ, ಹಿಂದಿಯಲ್ಲಿ ಇಂಡಿಯನ್ ಐಡಲ್ ಖ್ಯಾತಿಯ ಗಾಯಕಿ ಮೇನುಕಾ ಪೌಡೆಲ್ ದನಿ ನೀಡಿದ್ದಾರೆ.
ಸಲಾರ್ ಭಾಗ 1 - ಕದನ ವಿರಾಮ
ಸಲಾರ್: ಭಾಗ 1 - ಕದನ ವಿರಾಮಕ್ಕೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ ಕಟ್ ಹೇಳಿದ್ದಾರೆ. ಪ್ರಭಾಸ್ , ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು, ಬಾಬಿ ಸಿಂಹ, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ಟಿನ್ನು ಆನಂದ್ ಮತ್ತು ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











