ಕೆಆರ್‌ಜಿ ತೆಕ್ಕೆಗೆ 'ಆದಿಪುರುಷ್' ಕರ್ನಾಟಕ ವಿತರಣೆ ಹಕ್ಕು: ಎಲ್ಲರದ್ದೂ ಅದೊಂದೇ ಬೇಡಿಕೆ
ಬಹುನಿರೀಕ್ಷಿತ 'ಆದಿಪುರುಷ್' ಸಿನಿಮಾ ಮುಂದಿನ ವಾರವೇ ತೆರೆಗಪ್ಪಳಿಸುತ್ತಿದೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಪೌರಾಣಿಕ ಸಿನಿಮಾ ತೆರೆಗೆ ಬರ್ತಿದೆ. ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಂಡಿರೋದು ಭಾರೀ ಕುತೂಹಲ ಮೂಡಿಸಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಕೆಆರ್‌ಜಿ ಸ್ಟುಡಿಯೋ ವಿತರಣೆಯಲ್ಲಿ ಕರ್ನಾಟಕದಲ್ಲೂ ಸಿನಿಮಾ ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳುವ ಸುಳಿವು ಸಿಕ್ತಿದೆ.
ಓಂ ರಾವುತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 500 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಕಳೆದ ವರ್ಷ ಬಂದ ಟೀಸರ್ ಭಾರೀ ಟೀಕೆಗೆ ಗುರಿಯಾಗಿತ್ತು. ನಂತರ ಕಾಲಾವಕಾಶ ಪಡೆದು ರೀವರ್ಕ್ ಮಾಡಿ ಚಿತ್ರವನ್ನು ಚೆಂದಗಾಣಿಸುವ ಕಸರತ್ತು ನಡೆಸಿತ್ತು ಚಿತ್ರತಂಡ. ಇತ್ತೀಚೆಗೆ ಬಂದ 2 ಟ್ರೈಲರ್‌ಗಳು, ವಿಡಿಯೋ ಸಾಂಗ್ಸ್ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಸುಳಿವು ಸಿಕ್ತಿದೆ. ರಿಲೀಸ್ ಡೇಟ್ ಹತ್ತಿರವಾದಂತೆ ಸಿನಿಮಾ ಪ್ರಮೋಷನ್ ಹೆಚ್ಚಾಗ್ತಿದೆ.

'ಆದಿಪುರುಷ್' ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸಿದರೆ ಸನ್ನಿ ಸಿಂಗ್ ಲಕ್ಷಣನಾಗಿ, ಕೃತಿ ಸನೂನ್ ಸೀತೆಯಾಗಿ, ಸೈಫ್ ಅಲಿಖಾನ್ ರಾವಣನಾಗಿ, ದೇವದತ್ತ ಹನುಮಂತನ ಪಾತ್ರದಲ್ಲಿ ಮಿಂಚಿದ್ದಾರೆ. ತ್ರಿಡೀ ತಂತ್ರಜ್ಞಾನದಲ್ಲಿ ಈ ದೃಶ್ಯಕಾವ್ಯವನ್ನು ತೆರೆಗೆ ತರಲಾಗುತ್ತಿದೆ. ಪ್ರಭಾಸ್ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.
KRGಗೆ ಕರ್ನಾಟಕ ರೈಟ್ಸ್
ಸಿನಿಮಾ ನಿರ್ಮಾಣದ ಜೊತೆಗೆ ದೊಡ್ಡ ದೊಡ್ಡ ಸಿನಿಮಾಗಳನ್ನು ರಿಲೀಸ್ ಮಾಡುವ ಮೂಲಕ ಕೆಆರ್‌ಜಿ ಸ್ಟುಡಿಯೋ ಸಂಸ್ಥೆ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದೆ. ಇದೀಗ ಇದೇ ಸಂಸ್ಥೆ 'ಆದಿಪುರುಷ್' ಚಿತ್ರದ ಕರ್ನಾಟಕ ಹಕ್ಕುಗಳನ್ನು ಕೊಂಡುಕೊಂಡಿದೆ. ಸ್ವತಃ ನಿರ್ಮಾಪಕ ಕಾರ್ತಿಕ್ ಗೌಡ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಪ್ರಭಾಸ್ ಚಿತ್ರಕ್ಕೆ ಹೊಂಬಾಳೆ ಬಲ
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸದ್ಯ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ನಿರ್ಮಾಣ ಮಾಡುತ್ತಿದೆ. ಸೆಪ್ಟೆಂಬರ್ 28ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಇದೀಗ ಆ ಸಂಸ್ಥೆ ಸೋದರ ಸಂಸ್ಥೆ ಆಗಿರುವ ಕೆಆರ್‌ಜಿ ಸ್ಟುಡಿಯೋ ಸಂಸ್ಥೆ ಈಗ ಪ್ರಭಾಸ್ ನಟನೆಯ 'ಆದಿಪುರುಷ್' ಕರ್ನಾಟಕ ರೈಟ್ಸ್ ಕೊಂಡುಕೊಂಡಿದೆ. ಸದ್ಯ ಕನ್ನಡದ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗ್ತಿಲ್ಲ. ಹಾಗಾಗಿ 'ಆದಿಪುರುಷ್' ಚಿತ್ರವನ್ನು ಕೆಆರ್‌ಜಿ ಸಂಸ್ಥೆ ದೊಡ್ಡಮಟ್ಟದಲ್ಲಿ ತೆರೆಗೆ ತರುವ ಸಾಧ್ಯತೆಯಿದೆ.

ಎಲ್ಲರ ಬೇಡಿಕೆ ಒಂದೇ
ಇತ್ತೀಚೆಗೆ ಪರಭಾಷೆಯ ಸಿನಿಮಾಗಳು ಹೆಚ್ಚು ಹೆಚ್ಚು ಕನ್ನಡಕ್ಕೆ ಡಬ್ ಆಗಿ ಬರ್ತಿವೆ. ಆದರೆ ಕನ್ನಡ ಶೋಗಳ ಸಂಖ್ಯೆ ಕಮ್ಮಿ ಮಾಡಿ ಆಯಾ ಭಾಷೆಯಲ್ಲೇ ಹೆಚ್ಚು ಶೋಗಳನ್ನು ನೀಡುವ ಪರಿಪಾಠ ಇದೆ. ಕಾರ್ತಿಕ್ ಗೌಡ ತಮ್ಮ ಕೆಆರ್‌ಜಿ ಸ್ಟುಡಿಯೋ ಸಂಸ್ಥೆ ಮೂಲಕ 'ಆದಿಪುರುಷ್' ಸಿನಿಮಾವನ್ನು ರಾಜ್ಯದಲ್ಲಿ ರಿಲೀಸ್ ಮಾಡುವುದಾಗಿ ಹೇಳುತ್ತಿದ್ದಂತೆ ನೆಟ್ಟಿಗರು ಒಂದು ಬೇಡಿಕೆ ಇಟ್ಟಿದ್ದಾರೆ. ಕನ್ನಡ ಶೋಗಳನ್ನು ಹೆಚ್ಚು ಕೊಡಿ ಎಂದು ಕೇಳುತ್ತಿದ್ದಾರೆ.
ದಾಖಲೆ ಪ್ರೀ ರಿಲೀಸ್ ಬ್ಯುಸಿನೆಸ್
'ಆದಿಪುರುಷ್' ಸಿನಿಮಾ ಕ್ರೇಜ್ ತಕ್ಕಂತೆ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ ಎನ್ನಲಾಗ್ತಿದೆ. ಆಂಧ್ರ, ತೆಲಂಗಾಣ ವಿತರಣೆ ಹಕ್ಕನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ 170 ಕೋಟಿ ರೂ.ಗೆ ಕೊಂಡುಕೊಂಡಿರುವುದಾಗಿ ಹೇಳಲಾಗ್ತಿದೆ. ಹಿಂದಿ ರೈಟ್ಸ್ ಎಎ ಫಿಲ್ಮ್ಸ್ ಪಾಲಾಗಿದೆ. ಇದೀಗ ಕರ್ನಾಟಕ ರೈಟ್ಸ್ ಕೆಆರ್‌ಜಿ ಸ್ಟುಡಿಯೋ ಕೊಂಡುಕೊಂಡಿದೆ. ಇನ್ನು 5 ಭಾಷೆಗಳ ಡಿಜಿಟಲ್ 200 ಕೋಟಿ ರೂ.ಗೂ ಅಧಿಕ ಬೆಲೆಗೆ ಬಿಕರಿಯಾಗಿ ಎನ್ನಲಾಗ್ತಿದೆ.


Click it and Unblock the Notifications











