ಪ್ರಭುದೇವ ಕನ್ನಡದಲ್ಲಿ ಸಾಲು ಸಾಲು ಸಿನಿಮಾ: ತಮಿಳಿನಲ್ಲಿ ಬೇಡಿಕೆ ಕುಂದಿತಾ?
ನಟ, ನಿರ್ದೇಶಕ ಎನ್ನುವುದಕ್ಕಿಂತಲೂ ನೃತ್ಯ ನಿರ್ದೇಶನದಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದಾರೆ ಪ್ರಭುದೇವ. ಭಾರತೀಯ ಮೈಕಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದಿದ್ದಾರೆ. ಪ್ರಭುದೇವ ಡ್ಯಾನ್ಸ್ ಎಂದರೆ ಸಾಕು ಎಂಥವರಿಗೂ ಮೈನವಿರೇಳುತ್ತದೆ. ನೃತ್ಯದ ಮೂಲಕವೇ ಅಪಾರ ಸಾಧನೆ ಗೈದ ಕೀರ್ತಿ ಅವರದ್ದು.
ಪ್ರಭುದೇವ ಕನ್ನಡಿಗರಿಗೂ ಬಹಳ ಅಚ್ಚು ಮೆಚ್ಚು. ಅದರೆ ಅವರು ಹೆಚ್ಚಾಗಿ ಕಾರ್ಯ ನಿರ್ವಹಿಸಿದ್ದು ಮಾತ್ರ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ. ಕನ್ನಡ ಸಿನಿಮಾಗಳಲ್ಲಿ ಅಷ್ಟಾಗಿ ಪ್ರಭುದೇವ ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಆದರೆ ಈಗ ಹಲವು ವರ್ಷಗಳ ಗ್ಯಾಪ್ ಬಳಿಕ ಕನ್ನಡ ಸಿನಿಮಾ ಮಡುವ ಮನಸ್ಸು ಮಾಡಿದ್ದಾರೆ.
ಪ್ರಭುದೇವ ಕನ್ನಡದಲ್ಲಿ ಮಾಡಿರುವ ಸಿನಿಮಾಗಳನ್ನು ಲೆಕ್ಕ ಹಾಕಿದರೆ. ಬೆರಳೆಣಿಕೆಯಷ್ಟು ಮಾತ್ರ ಇವೆ. ಹಾಗಾಗಿ ಈಗ ಸಾಲು-ಸಾಲಗಿ ಕನ್ನಡ ಸಿನಿಮಾ ಮಡುತ್ತಿದ್ದು, ಇದಕ್ಕೆ ತಮಿಳು ಹಿಂದಿಯಲ್ಲಿ ಅವರಿಗೆ ಬೇಡಿಕೆ ಕಡಿಮೆ ಆಗಿರುವುದೇ ಕಾರಣ ಎನ್ನಲಾಗುತ್ತಿದೆ.

ಇಷ್ಟು ದಿನ ಕನ್ನಡದಿಂದ ದೂರ ಇದ್ದ ಪ್ರಭುದೇವ!
ಪ್ರಭುದೇವ ತಮ್ಮ ಸಿನಿಮಾ ಜರ್ನಿಯನ್ನು ಶುರು ಮಾಡಿದ್ದೆ, ತಮಿಳು ತೆಲುಗು ಸಿನಿಮಾರಂಗದಿಂದ. ಹಾಗಾಗಿ ಅವರು ಕನ್ನಡದ ಸಿನಿ ಪರದೆ ಮೇಲೆ ಕಾಣಿಸಿಕೊಳ್ಳಲು ಹೆಚ್ಚು ಕಾಲ ಬೇಕಾಯ್ತು. ಆದರೆ ಕನ್ನಡದಲ್ಲೂ ಹೆಚ್ಚು ಸಿನಿಮಾ ಮಾಡಿಲ್ಲ. ಉಪೇಂದ್ರ ಜೊತೆಗೆ 'ಹೆಚ್ 2 ಓ' ಸಿನಿಮಾದಲ್ಲಿ ವೈರಮುತ್ತು ಪಾತ್ರ ಮಾಡಿ ಎಲ್ಲರ ಮನ ಗೆದ್ದಿದ್ದರು ಪ್ರಭುದೇವ. ಇಷ್ಟು ದಿನ ಕನ್ನಡದಿಂದ ದೂರ ಇದ್ದ ಪ್ರಭುದೇವ ಈಗ ಸಾಲು, ಸಾಲು ಸಿನಿಮಾ ಮಾಡುತ್ತಾ ಇದ್ದಾರೆ.

ಪುನೀತ್ ರಾಜ್‌ಕುಮಾರ್ ಜೊತೆ ಪ್ರಭುದೇವ ಕಮ್‌ಬ್ಯಾಕ್!
ಇತ್ತೀಚೆಗೆ ಪ್ರಭುದೇವ ಕಮ್‌ಬ್ಯಾಕ್ ಮಾಡಿದ್ದು ನಟ ಪುನೀತ್ ರಾಜ್‌ಕುಮಾರ್ ಜೊತೆಗೆ. ನಟ ಕೃಷ್ಣ ಅಭಿನಯದ 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಪುನೀತ್ ರಾಜ್‌ಕುಮರ್ ಅಭಿನಯಿಸಿದ್ದಾರೆ. ಇನ್ನು ಪುನೀತ್ ರಾಜ್‌ಕುಮಾರ್ ಜೊತೆಗೆ ಹಾಡೊಂದರಲ್ಲಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಇನ್ನು ಲಕ್ಕಿ ಮ್ಯಾನ್ ಸಿನಿಮಾದಲ್ಲಿ ಇವರ ಪಾತ್ರ ಹೇಗಿರಲಿದೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.

ಶಿವರಾಜ್ ಕುಮಾರ್ ಜೊತೆ ಪ್ರಭುದೇವ!
ಶಿವರಾಜ್ ಕುಮಾರ್ ಜೊತೆಗೆ ನಟ ಪ್ರಭುದೇವ ಸಿನಿಮಾ ಪ್ರಕಟವಾಗಿದೆ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಇನ್ನು ಇತ್ತೀಚೆಗೆ ಇದರ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಅಧಿಕೃತವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇವರ ಕಂಬಿನೇಷನ್ ಬಗ್ಗೆಯೇ ಹೆಚ್ಚಿನ ಕುತೂಹಲ ಮೂಡಿದೆ. 1960ರಲ್ಲಿ ನಡೆಯುವ ಆ್ಯಕ್ಷನ್ ಡ್ರಾಮಾ ಕಥೆ ಇದಾಗಿದ್ದು, ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಇಬ್ಬರೂ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಂದೇಶ್ ಬ್ಯಾನರ್‌ನಲ್ಲಿ ಪ್ರಭುದೇವ ಸಿನಿಮಾ!
ಇದರ ಜೊತೆಗೆ ಈಗ ಮತ್ತೊಂದು ಸಿನಿಮಾ ಪ್ರಕಟ ಆಗಿದೆ. ಕನ್ನಡ ನಿರ್ಮಾಪಕ ಸಂದೇಶ್ ಪ್ರಭುದೇವ ಹೊಸ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಕನ್ನಡ ಸಿನಿಮಾ ಸೇರಿದಂತೆ ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ಈ ಸಿನಿಮಾ ನಿರ್ಮಾಣ ಆಗಲಿದೆ. ಈ ಮೂಲಕ ಸದ್ಯ ಒಟ್ಟು 3 ಕನ್ನಡ ಸಿನಿಮಾಗಳಲ್ಲಿ ಪ್ರಭುದೇವ ಕಾಣಿಸಿಕೊಳ್ಳುತ್ತಾ ಇದ್ದಾರೆ.


Click it and Unblock the Notifications











