ಶಿವರಾಜ್ ಕುಮಾರ್ ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ವಾಪಸ್ ಆಗ್ತಾರಾ ಪ್ರಭುದೇವ?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಮೂಡಿ ಬರುತ್ತಿದೆ. ಇಬ್ಬರು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಕೇಳಿ ಬರುತ್ತಿದೆ. ಆದರೆ ಈಗಾಗಲೇ ಭಟ್ರು ಈ ಸಿನಿಮಾದ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಇದೀಗ ಈ ಸಿನಿಮಾದ ಬಗ್ಗೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೇಳಿ ಬರುತ್ತಿದೆ. ಹೌದು, ಶಿವರಾಜ್ ಕುಮಾರ್ ಮತ್ತು ಯೋಗರಾಜ್ ಭಟ್ ಸಿನಿಮಾದಲ್ಲಿ ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಪ್ರಭ್ರುದೇವ ಅನೇಕ ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ.
ನಿರ್ದೇಶಕ ಯೋಗರಾಜ್ ಗಾಳಿಪಟ-2 ಸಿನಿಮಾ ಚಿತ್ರೀಕರಣ ವೇಳೆಯೇ ಪ್ರಭುದೇವರನ್ನು ಭೇಟಿಯಾಗಿದ್ದರು. ಆಗಲೇ ಪ್ರಭುದೇವ ಎಂಟ್ರಿ ಬಗ್ಗೆ ಸಖತ್ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಯೋಗರಾಜ್ ಭಟ್ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಈಗಾಗಲೇ ಪ್ರಭುದೇವ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಕಥೆ ಕೇಳಿ ಪ್ರಭುದೇವ ಇಂಪ್ರೆಸ್ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಚಿತ್ರದಲ್ಲಿ ನಟಿಸಲು ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲವಂತೆ.

ಒಂದು ವೇಳೆ ಪ್ರಭುದೇವ, ಶಿವಣ್ಣ ಜೊತೆ ನಟಿಸಲು ಒಪ್ಪಿಕೊಂಡರೆ ಮೊದಲ ಬಾರಿಗೆ ಪ್ರಭುದೇವ ಮತ್ತು ಶಿವಣ್ಣ ಜೋಡಿ ತೆರೆಮೇಲೆ ಬರಲಿದ್ದು ಇದು ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಲಿದೆ. ಅಂದ್ಹಾಗೆ ಪ್ರಭುದೇವ ಕನ್ನಡದಲ್ಲಿ ಎಚ್ ಟು ಓ ಮತ್ತು ಮನಸೆಲ್ಲಾ ನೀನೆ ಸಿನಿಮಾದಲ್ಲಿ ನಟಿಸಿದ್ದಾರೆ.
ಯೋಗರಾಜ್ ಭಟ್ ಸದ್ಯ ಗಾಳಿಪಟ-2 ಸಿನಿಮಾ ಮುಗಿಸಬೇಕಿದೆ. ಇನ್ನು ಶಿವರಾಜ್ ಕುಮಾರ್ ಭಜರಂಗಿ-2 ಸಿನಿಮಾದಲ್ಲಿ ನಿರತರಾಗಿದ್ದಾರೆ. ಅಲ್ಲದೇ ಶಿವಣ್ಣ ಬಳಿ ಸಾಲು ಸಾಲು ಸಿನಿಮಾಗಳಿವೆ. ಈ ಎಲ್ಲಾ ಸಿನಿಮಾಗಳು ಮುಗಿದ ಬಳಿಕ ಭಟ್ಟರ ಸಿನಿಮಾ ಪ್ರಾರಂಭಿಸುವ ಸಾಧ್ಯತೆ ಇದೆ.


Click it and Unblock the Notifications











