ರಾಜಣ್ಣ 'ಕಾಂತಾರ- 1' ಚಿತ್ರ ನೋಡಿದ್ರೆ ಖಂಡಿತ ಇಷ್ಟೊತ್ತಿಗೆ ಫೋನ್ ಮಾಡ್ತಿದ್ರು- ಪ್ರಗತಿ ಶೆಟ್ಟಿ
ಕನ್ನಡ ಚಿತ್ರರಂಗದ 'RRR' ಎಂದೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಜನಪ್ರಿಯರಾಗಿದ್ದಾರೆ. ಮೂವರು ನಡುವೆ ಒಳ್ಳೆಯ ಒಡನಾಟವಿದೆ. ಸಿನಿಮಾ ಕೆಲಸಗಳ ವಿಚಾರದಲ್ಲೂ ಒಬ್ಬರಿಗೊಬ್ಬರು ಜೊತೆಯಾಗಿರುವುದು ಇದೆ. ಸದ್ಯ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ -1' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ.
ಮೂವರು ಕೂಡ ಒಬ್ಬರ ಸಿನಿಮಾವನ್ನು ಮತ್ತೊಬ್ಬರು ಬೆಂಬಲಿಸುತ್ತಾ ಬರ್ತಿದ್ದಾರೆ. ಇದೇ ವರ್ಷ 'ಸು ಫ್ರಮ್ ಸೋ' ಸಿನಿಮಾ ನಿರ್ಮಿಸಿ ನಟಿಸಿ ರಾಜ್ ಬಿ ಶೆಟ್ಟಿ ಸಕ್ಸಸ್ ಕಂಡಿದ್ದಾರೆ. ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಇದೀಗ ರಿಷಬ್ ಸಿನಿಮಾ ಕೂಡ ಸದ್ದು ಮಾಡ್ತಿದೆ. 'ರಿಚರ್ಡ್ ಆಂಟನಿ' ಸಿನಿಮಾ ಮೂಲಕ ರಕ್ಷಿತ್ ಶೆಟ್ಟಿ ದರ್ಬಾರ್ ಮಾಡೋದು ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

3 ವರ್ಷಗಳ ಹಿಂದೆ 'ಕಾಂತಾರ' ಚಿತ್ರದ ಪ್ರೀಮಿಯರ್ ಶೋ ನೋಡಿ ರಕ್ಷಿತ್ ಶೆಟ್ಟಿ ಥ್ರಿಲ್ ಆಗಿದ್ದರು. ಸಿನಿಮಾ ಮುಗಿಯುತ್ತಿದ್ದಂತೆ ಚಿತ್ರಮಂದಿರದ ಕೊನೆ ಸಾಲಿನಿಂದ ಓಡೋಡಿ ಬಂದು ಸ್ಕ್ರೀನ್ ಮುಂದೆ ನಿಂತಿದ್ದ ರಿಷಬ್ ಶೆಟ್ಟಿ ಅವರನ್ನು ಅಪ್ಪಿಕೊಂಡಿದ್ದರು. ಅದ್ಭುತ ಸಿನಿಮಾ ಮಾಡಿದ್ದೀಯಾ ಮಗಾ ಎಂದು ಅಭಿನಂದಿಸಿದ್ದರು. ಆ ವೀಡಿಯೋ ಇನ್ನು ಸಿನಿರಸಿಕರು ಕಣ್ಮುಂದೆ ಇದೆ. ಇನ್ನು 'ಕಾಂತಾರ' ಚಿತ್ರದ ಕೋಲ ಸನ್ನಿವೇಶ ಚಿತ್ರೀಕರಣಕ್ಕೆ ರಾಜ್ ಬಿ ಶೆಟ್ಟಿ ಕೂಡ ಸಾಥ್ ಕೊಟ್ಟಿದ್ದರು.
'ಕಾಂತಾರ' ಚಿತ್ರಕ್ಕೆ ರಕ್ಷಿತ್, ರಾಜ್ ಬೆಂಬಲವಾಗಿ ನಿಂತಿದ್ದರು. ಆದರೆ ಪ್ರೀಕ್ವೆಲ್ ಸಿನಿಮಾ ಬಗ್ಗೆ ಇಬ್ಬರೂ ಈವರೆಗೆ ಪ್ರತಿಕ್ರಿಯಿಸಿಲ್ಲ. ಕೊನೆಪಕ್ಷ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಕೂಡ ಮಾಡಿಲ್ಲ. ಈ ಬಗ್ಗೆ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಗ್ಯಾರಂಟಿ ನ್ಯೂಸ್ ವಾಹಿನಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 'ಕಾಂತಾರ- 1' ಸೇರಿದಂತೆ ರಿಷಬ್ ಚಿತ್ರಗಳಿಗೆ ಅವರು ಕಾಸ್ಟ್ಯೂಮ್ ಡಿಸೈನರ್ ಕೂಡ ಆಗಿದ್ದಾರೆ.

ರಾಜ್ ಹಾಗೂ ರಕ್ಷಿತ್ ಸಿನಿಮಾ ನೋಡಿ ಫೋನ್ ಮಾಡಿ, ಮೆಸೇಜ್ ಮಾಡಿ ಮಾತನಾಡಿದ್ರಾ? ಏನು ಹೇಳಿದ್ರು? ಎನ್ನುವ ಪ್ರಶ್ನೆಗೆ "ರಾಜಣ್ಣ ಇನ್ನು ಸಿನಿಮಾ ನೋಡಿಲ್ಲ ಅನ್ನಿಸುತ್ತದೆ. ನಮ್ಮ ತಂಡದಲ್ಲಿ ಯಾರೇ ಸಿನಿಮಾ ಮಾಡಿದ್ರು, ನೋಡಿ ಒಬ್ಬರಿಗೊಬ್ಬರು ಬೆಂಬಲ ಸೂಚಿಸುತ್ತೇವೆ. 'ಸು ಫ್ರಂ ಸೋ' ಚಿತ್ರವನ್ನು ನಾನು, ರಿಷಬ್ ಮತ್ತು ತಂಡ ಹೋಗಿ ನೋಡಿದ್ವಿ. ಹೇಗೆ ಪ್ರಮೋಷನ್ ಮಾಡಬೇಕು ಎನ್ನುವ ಬಗ್ಗೆ ಇಬ್ಬರೂ ಚರ್ಚಿಸಿದ್ರು. ಅದು ನಮ್ಮ ತಂಡದಲ್ಲಿ ಒಬ್ಬರ ಮೇಲೆ ಒಬ್ಬರಿಗಿರುವ ಪ್ರೀತಿ ಅದು. ಖಂಡಿತ ರಾಜಣ್ಣ ಸಿನಿಮಾ ನೋಡಿದ್ದರೆ ಇಷ್ಟೊತ್ತಿಗೆ ಕಾಲ್ ಮಾಡ್ತಿದ್ರು. ಅವ್ರು ತಮ್ಮ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ ಅನ್ನಿಸುತ್ತೆ" ಎಂದಿದ್ದಾರೆ.
ಮಾತು ಮುಂದುವರೆಸಿರುವ ಪ್ರಗತಿ "ಕಳೆದ ಬಾರಿ 'ಕಾಂತಾರ' ಚಿತ್ರದ ಕೋಲ ಸನ್ನಿವೇಶಗಳನ್ನು ಮಾಡುವಾಗ ರಾಜಣ್ಣ ಬಂದು ಜೊತೆಗಿದ್ದರು. 3 ದಿನಗಳ ಕಾಲ ಆ ಚಿತ್ರೀಕರಣದಲ್ಲಿ ಬೆಂಬಲ ನೀಡಿದ್ದರು. ಈ ಬಾರಿ ಅರವಿಂದ್, ಶನಿಲ್ ಎಲ್ಲಾ ನಿಬಾಯಿಸಿದ್ದರು. ಈ ಬಾರಿ 'ಸು ಫ್ರಮ್ ಸೋ' ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದರು. ಆ ಚಿತ್ರದಲ್ಲಿ ಶನಿಲ್(ರವಿಯಣ್ಣ), ಜೆಪಿ ತುಮ್ಮಿನಾಡ್ ಎಲ್ಲರೂ ಅದ್ಭುತ ಕೆಲಸ ಮಾಡಿದ್ದಾರೆ. ಅವರಿಗೆ ಸಕ್ಸಸ್ ಸಿಕ್ಕಿದೆ" ಎಂದು ತಿಳಿಸಿದ್ದಾರೆ.
ರಕ್ಷಿತ್ ಶೆಟ್ಟಿ ಬಗ್ಗೆ ಮಾತನಾಡಿ "ಚಿಂಟು ಅಣ್ಣ(ರಕ್ಷಿತ್ ಶೆಟ್ಟಿ) ಯೂಎಸ್‌ನಲ್ಲಿ ಇದ್ದಾರೆ. 'ರಿಚರ್ಡ್ ಆಂಟನಿ' ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ಮುಳುಗಿದ್ದಾರೆ. ಹಾಗಾಗಿ ನಾನು ಡಿಸ್ಟರ್ಬ್ ಮಾಡ್ಲಿಲ್ಲ. ಸಿನಿಮಾ ನೋಡಿದ್ದರೆ ಅವ್ರು ಇಷ್ಟೊತ್ತಿಗೆ ಕಾಲ್ ಮಾಡ್ತಿದ್ರು" ಎಂದು ವಿವರಿಸಿದ್ದಾರೆ.


Click it and Unblock the Notifications











