ಸ್ನೇಹಿತನ 'ಕನಸನ್ನು' ಲೋಕಾರ್ಪಣೆ ಮಾಡಿದ ಪ್ರಶಾಂತ್ ನೀಲ್
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ತಮ್ಮ ಹಲವು ವರ್ಷಗಳ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ತಮ್ಮ ಹುಟ್ಟೂರಿನಲ್ಲಿ ಸ್ಟುಡಿಯೋ ಕಟ್ಟುವ ಕನಸು ಹೊಂದದ್ದ ರವಿ ಬಸ್ರೂರು ಅದನ್ನು ಸಾಧಿಸಿದ್ದಾರೆ.
ಬಸ್ರೂರಿನಲ್ಲಿ 'ರವಿ ಬಸ್ರೂರು ಮ್ಯೂಸಿಕ್ ಆಂಡ್ ಮೂವೀಸ್' ಹೆಸರಿನ ಸುಸಜ್ಜಿತ, ಆಧುನಿಕ ಸೌಲಭ್ಯಗಳುಳ್ಳ ಸ್ಟುಡಿಯೋ ನಿರ್ಮಿಸಿದ್ದಾರೆ ರವಿ.
ರವಿ ಬಸ್ರೂರು ಬಹು ಪ್ರೀತಿಯಿಂದ ಕಟ್ಟಿದ ಸ್ಟುಡಿಯೋವನ್ನು ಇಂದು (ಜನವರಿ 01) ಲೋಕಾರ್ಪಣೆ ಮಾಡಿದ್ದಾರೆ ರವಿ ಬಸ್ರೂರು ಅವರ ಗೆಳೆಯ ನಿರ್ದೇಶಕ ಪ್ರಶಾಂತ್ ನೀಲ್.
ಈ ಸಂತಸದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರವಿ ಬಸ್ರೂರು,'ನನ್ನ ಜೀವನದ ಇಲ್ಲಿಯ ತನಕದ ಏಲ್ಲಾ ಹೆಜ್ಜೆಯಲ್ಲೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹರಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು, ನಿಮ್ಮಿಂದಲೇ ನಡೆದ ಹೊಸ ದಾರಿ' ಎಂದು ಬರೆದು ತಮ್ಮ ಹಾಗೂ ಪ್ರಶಾಂತ್ ನೀಲ್ ಅವರ ಚಿತ್ರ ಹಂಚಿಕೊಂಡಿದ್ದಾರೆ.

ಹಲವು ಸಿನಿಮಾಗಳಿಗೆ ಸಂಗೀತ
ಏನನ್ನಾದರೂ ಸಾಧಿಸಬೇಕೆಂಬ ಆಸೆಯಿಂದ ಊರು ಬಿಟ್ಟು ಬೆಂಗಳೂರು ಸೇರಿದ ರವಿ ಇದೀಗ ಖ್ಯಾತ ಸಂಗೀತ ನಿರ್ದೇಶಕರಾಗಿದ್ದಾರೆ. ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಅವರಿಗೆ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಬಹು ದೊಡ್ಡ ಗುರುತು ತಂದುಕೊಟ್ಟಿತು.

ವಾಪಸ್ ಬರಲು ಅಂದೇ ನಿಶ್ಚಯ
ಊರು ಬಿಟ್ಟು ಬೆಂಗಳೂರಿಗೆ ಹೋಗಬೇಕಾದರೆ ಎಂದುಕೊಂಡಿದ್ದರಂತೆ, ಯಶಸ್ಸು ಗಳಿಸಿ ಊರಿಗೆ ವಾಪಸ್ಸಾಗುತ್ತೇನೆಂದು. ಹಾಗೆಯೇ ಜೀವನದಲ್ಲಿ ಯಶಸ್ಸು ಕಂಡಿರುವ ರವಿ ಬಸ್ರೂರು ಈಗ ಊರಿಗೆ ಮರಳಿದ್ದು, ತಮ್ಮ ಊರಿನಲ್ಲೇ ಸ್ಟುಡಿಯೋ ನಿರ್ಮಿಸಿದ್ದಾರೆ.

ಉಗ್ರಂ ಮೂಲಕ ಸ್ವತಂತ್ರ್ಯ ಸಂಗೀತ ನಿರ್ದೇಶಕ
ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಸಿನಿಮಾ ಮೂಲಕ ಸ್ವತಂತ್ರ ಸಂಗೀತ ನಿರ್ದೇಶನ ಪ್ರಾರಂಭಿಸಿದ ರವಿ ಬಸ್ರೂರು, ಮಫ್ತಿ, ಅಂಜನಿಪುತ್ರ, ಕೆಜಿಎಫ್, ಕೆಜಿಎಫ್ 2 ಗೆ ಸಹ ಸಂಗೀತ ನೀಡಿದ್ದಾರೆ. ಇದೀಗ ಪ್ರಶಾಂತ್ ನೀಲ್ ನಿರ್ದೇಶಿಸಿ ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾಕ್ಕೆ ಸಹ ಸಂಗೀತ ನೀಡಲಿದ್ದಾರೆ ರವಿ ಬಸ್ರೂರು.
Recommended Video

ನಾಗರಬಾವಿಯಲ್ಲಿ ಸ್ಟುಡಿಯೋ ನಿರ್ಮಿಸಿದ್ದರು
ಈ ಮೊದಲು ಬೆಂಗಳೂರಿನ ನಾಗರಬಾವಿಯಲ್ಲಿ ಸ್ಟುಡಿಯೋ ನಿರ್ಮಿಸಿದ್ದರು ರವಿ ಬಸ್ರೂರು. ತಮ್ಮ ಸಿನಿಮಾಗಳ ಸಂಗೀತದ ಕಾರ್ಯಗಳನ್ನು ಅಲ್ಲಿಯೇ ಮಾಡುತ್ತಿದ್ದರು. 'ಮೌನದಿಂದ ಕೆಲಸ ಮಾಡು, ನಿನ್ನ ಯಶಸ್ಸು ಮಾತನಾಡಲಿ' ಎಂಬ ಸಾಲುಗಳನ್ನು ಸ್ಟುಡಿಯೋದ ಗೋಡೆಯ ಮೇಲೆ ಬರೆಸಿದ್ದರು ರವಿ ಬಸ್ರೂರು.


Click it and Unblock the Notifications











