ಪ್ರಜ್ವಲ್ ದೇವರಾಜ್ 'ಗಣ' ಟೀಸರ್ ರಿಲೀಸ್; ಇದು ಪಾಸ್ಟ್ ಟೈಮ್ ಟ್ರಾವೆಲ್ ಥ್ರಿಲ್ಲರ್ ಕಥೆನಾ?
ಸಾಲು ಸಾಲು ವಿಫಲತೆಗಳ ಬಳಿಕ ಜಡೇಶ್ ಕೆ ಹಂಪಿ ನಿರ್ದೇಶನದ ಜೆಂಟಲ್‌ಮನ್ ಚಿತ್ರದ ಮೂಲಕ ಬಹಳ ದಿನಗಳ ಬಳಿಕ ಯಶಸ್ಸನ್ನು ಪಡೆದಿದ್ದ ನಟ ಪ್ರಜ್ವಲ್ ದೇವರಾಜ್ ನಂತರದ ದಿನಗಳಲ್ಲಿ ಮತ್ತೆ ಸೋಲಿನ ಹಾದಿಯಲ್ಲಿ ಸಾಗಿದ್ದಾರೆ.
ಹೌದು, ಜಂಟಲ್‌ಮನ್ ಬಳಿಕ ಬಂದ ಪ್ರಜ್ವಲ್ ದೇವರಾಜ್ ನಟನೆಯ ಯಾವ ಚಿತ್ರವೂ ಸಹ ಹೇಳಿಕೊಳ್ಳುವಂತಹ ಯಶಸ್ಸನ್ನು ಸಾಧಿಸಿಲ್ಲ. ಅದರಲ್ಲಿಯೂ ಕಳೆದ ವರ್ಷ ತೆರೆಗೆ ಬಂದ ಅಬ್ಬರ ಅಬ್ಬರಿಸಲಿಲ್ಲ ಹಾಗೂ ವೀರಂ ಹೇಳಿಕೊಳ್ಳುವಂತಹ ಸದ್ದು ಮಾಡಲಿಲ್ಲ. ಹೀಗೆ ಮತ್ತೆ ಹಿನ್ನಡೆ ಅನುಭವಿಸಿರುವ ಪ್ರಜ್ವಲ್ ದೇವರಾಜ್ ನಾಳೆ ( ಜುಲೈ 4 ) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಈ ವಿಶೇಷ ದಿನದ ಅಂಗವಾಗಿ ಪ್ರಜ್ವಲ್ ದೇವರಾಜ್ ನಟನೆಯ ಮುಂದಿನ ಚಿತ್ರ 'ಗಣ'ದ ಟೀಸರ್ ಬಿಡುಗಡೆಗೊಂಡಿದೆ. ಚಿತ್ರದ ಟೀಸರ್ ನೋಡಿದರೆ ಇದೊಂದು ಪಾಸ್ಟ್ ಟೈಮ್ ಟ್ರಾವೆಲ್ ಕಥೆಯನ್ನು ಹೊಂದಿರುವ ಚಿತ್ರವಿರಬಹುದಾ ಎಂಬ ಪ್ರಶ್ನೆ ಸಿನಿ ರಸಿಕರಲ್ಲಿ ಮೂಡಲಿದೆ.
ನಾಯಕ ತನ್ನ ಬದುಕಿನಲ್ಲಿ ನಡೆಯುವ ಘಟನೆಗಳನ್ನು ಹಿಂದಿನ ಸಮಯಕ್ಕೆ ಹೋಗಿ ನೋಡುವ ಕುರಿತಾದ ಡೈಲಾಗ್ ಟೀಸರ್‌ನಲ್ಲಿದ್ದು, ಈ ಅನುಮಾನ ಮೂಡಲು ಕಾರಣವಾಗಿದೆ. "ಮಾಡಿದ್ ತಪ್ಪು, ಆಡಿದ್ ಮಾತು, ಹೊರಟೋದ್ ಸಮಯ, ಒಡೆದ್ಹೋದ್ ಹೃದಯ ಹೋದಂಗೇನೇ. ಅದನ್ನು ಯಾವನ್ ಕೈಲೂ ಬದಲಾಯಿಸೋಕಾಗಲ್ಲ. ಪಾಸ್ಟ್ ಈಸ್ ಪಾಸ್ಟ್ ಅಷ್ಟೇ. ಆದರೆ ನನ್ನ ಜೀವನ ಹಾಗಲ್ಲ. ಪಾಸ್ಟ್ ಬದಲಾಗ್ತಾ ಇದೆ. ಯಾರಿಂದ, ಯಾವಾಗಿಂದ ನಾನು ಕಂಡುಹಿಡಿಯುತ್ತೇನೆ" ಎಂಬ ಪ್ರಜ್ವಲ್ ದೇವರಾಜ್ ಹೇಳುವ ಡೈಲಾಗ್‌ನೊಂದಿಗೆ ಟೀಸರ್ ಆರಂಭಗೊಂಡಿದ್ದು, ಟೀಸರ್‌ನಲ್ಲಿ ಹಲವಾರು ಆಕ್ಷನ್ ದೃಶ್ಯಗಳು, ಸಂಬಂಧಗಳ ದೃಶ್ಯಗಳು ಹಾಗೂ ನಾಯಕ ತಾನು ಸಿಲುಕಿಕೊಂಡಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಡೆಸುವ ಹೋರಾಟದ ದೃಶ್ಯಗಳಿವೆ.
ಇದನ್ನೆಲ್ಲಾ ಗಮನಿಸಿದರೆ ಚಿತ್ರ ಪಾಸ್ಟ್ ಟೈಮ್ ಟ್ರಾವೆಲ್ ವಿಷಯಧಾರಿತವಾಗಿದೆ ಎಂಬುದನ್ನು ಊಹಿಸಬಹುದಾಗಿದೆ. ಇನ್ನು ಈ ಚಿತ್ರದಲ್ಲಿ ಯಶಾ ಶಿವಕುಮಾರ್, ವೇದಿಕಾ ಹಾಗೂ ಕೃಷಿ ತಪಂಡಾ ಹೀಗೆ ಮೂವರು ನಾಯಕಿಯರಿದ್ದು, ಚಿತ್ರಕ್ಕೆ ಹರಿಪ್ರಸಾದ್ ಜಕ್ಕ ಎಂಬ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ದಾರೆ.
ಜಂಟಲ್‌ಮನ್‌ನಲ್ಲಿ 'ವುಮನ್ ಎಗ್ ಟ್ರಾಫಿಕಿಂಗ್' ಎಂಬ ಮಾಫಿಯಾದ ವಿರುದ್ಧ ಹೋರಾಡುವ ವಿಭಿನ್ನ ಕಥಾಹಂದರವಿರುವ ಚಿತ್ರದಲ್ಲಿ ನಟಿಸಿದ್ದ ಪ್ರಜ್ವಲ್ ದೇವರಾಜ್ ಈ ಸಿನಿಮಾದ ಬಳಿಕ ಮಾಡುತ್ತಿರುವ ಪ್ರಯೋಗಾತ್ಮಕ ಸಿನಿಮಾವಿದು ಎಂದೇ ಹೇಳಬಹುದಾಗಿದ್ದು, ಈ ಚಿತ್ರ ಯಾವಾಗ ತೆರೆಗೆ ಬರಲಿದೆ ಹಾಗೂ ಸಿನಿ ರಸಿಕರು ಇದನ್ನು ಯಾವ ರೀತಿ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ನಾಳೆ ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳಿಗೆ ಈ ಹಿಂದೆಯೇ ವಿಶೇಷ ವಿಡಿಯೊ ಮಾಡುವ ಮೂಲಕ ಪ್ರಜ್ವಲ್ ದೇವರಾಜ್ ಮನವಿ ಮಾಡಿಕೊಂಡಿದ್ದರು. "ಹಾಯ್ ಎಲ್ರಿಗೂ ನಮಸ್ಕಾರ. ನಾನು ನಿಮ್ಮ ಪ್ರಜ್ವಲ್ ದೇವರಾಜ್ ಮಾತನಾಡ್ತಾ ಇದ್ದೀನಿ. ನಾನು ಈ ವಿಡಿಯೊ ಮಾಡುತ್ತಿರುವ ಕಾರಣ ಏನು ಅಂತ ಅಂದ್ರೆ, ಕಳೆದ ಐದು ವರ್ಷಗಳಿಂದ ನನ್ನ ಹುಟ್ಟುಹಬ್ಬದ ದಿನ ನಿಮ್ಮನ್ಯಾರನ್ನೂ ಸಹ ಭೇಟಿಯಾಗಲು ಆಗಿರಲಿಲ್ಲ. ಕಾರಣ ಏನು ಅಂತ ನಿಮಗೂ ಸಹ ಗೊತ್ತು. ಈ ವರ್ಷ ನಾಲ್ಕನೇ ತಾರೀಖು ನಿಮ್ಮನ್ನೆಲ್ಲರನ್ನೂ ಸಹ ಭೇಟಿಯಾಗ್ತೇನೆ. ಮನೆಯತ್ರ ಎಲ್ಲರೂ ಬನ್ನಿ. ಎಲ್ರೂ ಊಟ ಮಾಡಿಕೊಂಡು ಹೋಗಿ. ನಿಮ್ಮ ಜತೆ ಸಾಕಷ್ಟು ಸಮಯ ಕಳೆಯಬೇಕು ಅಂತ ನನಗೂ ಸಹ ಆಸೆ ಇದೆ. ಆದರೆ ಒಂದು ಮನವಿ ನನ್ನ ಕಡೆಯಿಂದ. ಹಾರ, ಕೇಕು ಇವೆಲ್ಲವೂ ತರದೇ ಶಾಲಾ ಮಕ್ಕಳಿಗಾಗಿ, ಶಾಲೆಗಳಿಗಾಗಲಿ ಅಥವಾ ಕಷ್ಟದಲ್ಲಿರುವ ಮಕ್ಕಳ ಫೀಸ್‌ಗಾಗಿಯಾದರೂ ಉಪಯೋಗಿಸಿ. ಇದೇ ನೀವು ನನಗೆ ಕೊಡುವ ಉಡುಗೊರೆ" ಎಂದು ಪ್ರಜ್ವಲ್ ದೇವರಾಜ್ ವಿಡಿಯೊದಲ್ಲಿ ಹೇಳಿಕೊಂಡಿದ್ದರು.


Click it and Unblock the Notifications











