ರೆಡ್ ಮಾರ್ಕೆಟ್ 'ಮಾಫಿಯಾ' ಸುತ್ತಾ ಪ್ರಜ್ವಲ್ ದೇವರಾಜ್ ಜಬರ್ದಸ್ತ್ ಆಕ್ಷನ್
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕರಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ 'ಮಾಫಿಯಾ' ಚಿತ್ರದ ಟೀಸರ್ ಇತ್ತೀಚಿಗೆ ರಿಲೀಸ್ ಆಗಿದೆ. ಲೋಹಿತ್ .ಹೆಚ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸಿರುವ 'ಮಾಫಿಯಾ' ಸಿನಿಮಾ ಟೈಟಲ್‌ನಿಂದಲೇ ಸದ್ದು ಮಾಡ್ತಿದೆ. ಚಿತ್ರದ ನಿರ್ದೇಶಕ ಲೋಹಿತ್ ಮಾತನಾಡಿ "ಈವರೆಗೂ ಯಾರು ತೋರಿಸಿರದ "ಮಾಫಿಯಾ" ಈ ಚಿತ್ರದಲ್ಲಿ ತೋರಿಸಿದ್ದೇವೆ. ಬೇರೆ ಬೇರೆ ಮಾರ್ಕೆಟ್ ಹೆಸರು ಕೇಳಿರುತ್ತೀರಾ. ಆದರೆ ಇದೇ ಮೊದಲ ಬಾರಿಗೆ ರೆಡ್ ಮಾರ್ಕೆಟ್ ಪರಿಚಯಿಸಲಾಗಿದೆ. ಅದು ಏನೆಂಬುದನ್ನು ಚಿತ್ರದಲ್ಲೇ ನೋಡಬೇಕು" ಎಂದಿದ್ದಾರೆ.

ಪ್ರಜ್ವಲ್ ದೇವರಾಜ್ ಮಾತನಾಡಿ "ಸಿಕ್ಸರ್ ಚಿತ್ರದಿಂದ ನನ್ನ ಸಿನಿ ಜರ್ನಿ ಸಾಗಿಬಂದಿದೆ. 35 ಚಿತ್ರಗಳನ್ನು ಪೂರೈಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಇನ್ನು "ಮಾಫಿಯಾ" ಚಿತ್ರದ ಬಗ್ಗೆ ಹೇಳಬೇಕಾದರೆ, ಕುಮಾರ್ ಅವರು ಒಳ್ಳೆಯ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಲೋಹಿತ್ ಅವರ ವಯಸ್ಸು ಚಿಕ್ಕದಾಗಿದ್ದರೂ ಕೆಲಸದಲ್ಲಿ ಅಸಾಧಾರಣ. ನಾನು, ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ" ಎಂದು ವಿವರಿಸಿದರು.
ಪ್ರಜ್ವಲ್ ದೇವರಾಜ್ ಅಭಿನಯದ 35 ನೇ ಚಿತ್ರವನ್ನು ನಿರ್ಮಿಸುತ್ತಿರುವುದು ಖುಷಿಯಾಗಿದೆ. ನಿರ್ದೇಶಕ ಲೋಹಿತ್ ಸೇರಿದಂತೆ ಚಿತ್ರತಂಡದ ಸಹಕಾರದಿಂದ "ಮಾಫಿಯಾ" ಚಿತ್ರ ಚೆನ್ನಾಗಿ ಮೂಡಿಬಂದಿದೆ. ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದರು ನಿರ್ಮಾಪಕ ಕುಮಾರ್ ಬಿ. ತಿಳಿಸಿದ್ದಾರೆ.
"ನಾನು ಪಟಪಟ ಎಂದು ಮಾತನಾಡುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ಅದಿತಿ ಪ್ರಭುದೇವ ಹೇಳಿದರು. ನಟ ಶೈನ್ ಶೆಟ್ಟಿ, ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ , ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಗೂ ಛಾಯಾಗ್ರಾಹಕ ಪಾಂಡಿಕುಮಾರ್ ಸೇರಿದಂತೆ ಅನೇಕರು 'ಮಾಫಿಯಾ' ಚಿತ್ರದ ಬಗ್ಗೆ ಮಾತನಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳಿನಲ್ಲೂ ಕೂಡ 'ಮಾಫಿಯಾ' ಸಿನಿಮಾ ಬಿಡುಗಡೆಯಾಗಲಿದೆ. ಪಾಂಡಿ ಕುಮಾರ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ಅನೂಪ್ ಸಿಳೀನ್ ಸಂಗೀತ ಚಿತ್ರಕ್ಕಿದೆ. 'ಜೆಂಟಲ್‌ಮನ್' ಬಳಿಕ ಪ್ರಜ್ವಲ್ ನಟಿಸಿದ ಯಾವುದೇ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ಇದೇ ವರ್ಷ ಬಂದ 'ವೀರಂ' ಸಿನಿಮಾ ಸೋಲುಂಡಿತ್ತು. 'ತತ್ಸಮ ತದ್ಬವ' ಸಿನಿಮಾದಲ್ಲಿ ಪ್ರಜ್ವಲ್ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
'ಮಾಫಿಯಾ' ಸಿನಿಮಾ ಮೂಲಕ ಡೈನಾಮಿಕ್ ಪ್ರಿನ್ಸ್ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. 'ಗಣ' ಎನ್ನುವ ಮತ್ತೊಂದು ಸಿನಿಮಾ ಕೂಡ ಪ್ರಜ್ವಲ್ ಕೈಯಲ್ಲಿದೆ. ಅದಿತಿ ಪ್ರಭುದೇವ ಮದುವೆ ನಂತರ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಮತ್ತೆ 'ಮಾಫಿಯಾ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಬರ್ತಿದ್ದಾರೆ.
ಹಾರರ್ ಥ್ರಿಲ್ಲರ್ ಸಿನಿಮಾಗಳನ್ನು ಕಟ್ಟಿಕೊಟ್ಟು ಗಮನ ಸೆಳೆದಿರುವ ಲೋಹಿತ್ .ಹೆಚ್ ಈ ಬಾರಿ ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಶೈನ್ ಶೆಟ್ಟಿ, ವಾಸುಕಿ ವೈಭವ್, ಒರಟ ಪ್ರಶಾಂತ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಹೊಸ ವರ್ಷದಲ್ಲಿ 'ಮಾಫಿಯಾ' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.


Click it and Unblock the Notifications











