ಲೂಸ್ ಮಾದ ಯೋಗಿ, ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್
ಸ್ಟಾರ್ ನಟರ ಹುಟ್ಟುಹಬ್ಬ ಅಂದ್ರೆ, ಅದು ಅಭಿಮಾನಿಗಳಿಗೆ ದೊಡ್ಡ ಹಬ್ಬ. ನೆಚ್ಚಿನ ನಟ ಕೂಡ ಆ ದಿನವನ್ನು ಅಷ್ಟು ಸಂಭ್ರಮಿಸುತ್ತಾನೋ ಇಲ್ವೋ ಅಭಿಮಾನಿಗಳಿಗೆ ಅದು ಸಿಕ್ಕಾಪಟ್ಟೆ ಸ್ಪೆಷಲ್. ಆ ದಿನ ಆರಾಧ್ಯ ದೈವವನ್ನು ನೋಡಿ ಕೈ ಕುಲುಕಿ ಹುಟ್ಟುಹಬ್ಬದ ಶುಭ ಕೋರಬೇಕು ಎಂದು ಬಯಸುತ್ತಾರೆ.
ದೊಡ್ಡ ಕಲಾವಿದರ ನಿವಾಸಗಳಲ್ಲಿ ಅವರ ಹುಟ್ಟುಹಬ್ಬದ ದಿನ ಅಭಿಮಾನಿಗಳ ಸಂಭ್ರಮವೇ ಜೋರಾಗಿರುತ್ತದೆ. ಆದರೆ ಅದ್ಯಾಕೊ ಇತ್ತೀಚಿನ ವರ್ಷಗಳಲ್ಲಿ ನಟರು ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ಏನೇನೋ ಕಾರಣ ಕೊಡುತ್ತಾರೆ. ಕೊವಿಡ್ ಸಂಕಷ್ಟದ ಸಮಯದಲ್ಲಿ ಹಲವು ನಟ-ನಟಿಯರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಬ್ರೇಕ್ ಹಾಕಿದ್ದರು.

ಕೊರೊನಾ ಹಾವಳಿ ಬಳಿಕ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದರು. ಆದರೆ ಈಗಲೂ ಕೆಲವರು ಆ ವಿಶೇಷವಾದ ದಿನ ಅಭಿಮಾನಿಗಳ ಕೈಗೆ ಸಿಗದೇ ಹುಟ್ಟುಹಬ್ಬ ಆಚರಣೆ ಬೇಡ ಎನ್ನುತ್ತಿದ್ದಾರೆ. ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಭಿಮಾನಿಗಳಲ್ಲಿ ಮನವಿ ಮಾಡುತ್ತಿದ್ದಾರೆ. ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬದ ಆಚರಣೆ ಇಲ್ಲ ಎಂದಿದ್ದರು.
ಇದೀಗ ಲೂಸ್ ಮಾದ ಯೋಗಿ ಹಾಗೂ ಪ್ರಜ್ವಲ್ ದೇವರಾಜ್ ಕೂಡ ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ ಆಚರಣೆಗೆ ಒಲ್ಲೆ ಎಂದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಜ್ವಲ್ ದೇವರರಾಜ್ "ನನ್ನ ಆತ್ಮೀಯ ಗೆಳೆಯರೇ, ಜುಲೈ 4 ರಂದು ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಈ ವರ್ಷ ನನ್ನ ಹುಟ್ಟುಹಬ್ಬವನ್ನು ನಿಮ್ಮ ಜೊತೆ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಕ್ಷಮೆ ಇರಲಿ"
"ಪ್ರತಿಸಲ ನನ್ನ ಜೊತೆ ಹಾಗೂ ನಿಮ್ಮ ಊರುಗಳಲ್ಲಿ, ನಗರಗಳಲ್ಲಿ ನಿಮ್ಮ ಪ್ರೀತಿ ಅಭಿಮಾನವನ್ನು ಅನಾಥಾಶ್ರಮಗಳಲ್ಲಿ, ವೃದ್ಧಾಶ್ರಮಗಳಲ್ಲಿ ಅನ್ನದಾನ, ಸಿಹಿ ಹಂಚುವುದು ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ನು ಹಂಚುವುದು, ರಕ್ತದಾನ ಹೀಗೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ನನ್ನ ಹುಟ್ಟುಹಬ್ಬವನ್ನು ಆಚರಿಸುತ್ತ ಬಂದಿದ್ದೀರಿ. ಈ ಪ್ರೀತಿಯ ಅಭಿಮಾನಕ್ಕೆ ನಾನು ಸದಾ ಚಿರರುಣಿ. ಈ ವರ್ಷ ನಿಮ್ಮ ಊರಿನ ನಿಮ್ಮ ಅಕ್ಕ-ಪಕ್ಕದ ಶಾಲೆಗಳಲ್ಲಿ, ಆಶ್ರಮಗಳಲ್ಲಿ ಬಡವರಿಗೆ, ಅಸಾಯಕರಿಗೆ ಸಹಾಯ ಹಸ್ತವನ್ನು ನೀಡುವ ಮುಖಾಂತರ ಆಚರಿಸಿ ಎಂದು ಈ ಮೂಲಕ ನನ್ನ ಗೆಳೆಯರಲ್ಲಿ ಮನವಿ. ಮುಂದಿನ ವರ್ಷ ಖಂಡಿತ ಸೇರೋಣ" ಎಂದು ಬರೆದುಕೊಂಡಿದ್ದಾರೆ.
ಲೂಸ್ ಮಾದ ಯೋಗಿ ವೀಡಿಯೋ ಮಾಡಿ ಈ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. "ಪ್ರತಿ ವರ್ಷ ಜುಲೈ 6ರಂದು ನೀವೇ ಬಂದು ಕೇಕ್ ತಂದು ನನ್ನ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಿರಿ. ಆದರೆ ಈ ಬಾರಿ ನಾನು ಆ ದಿನ ರಾಜ್ಯದಲ್ಲಿ ಇರುವುದಿಲ್ಲ. ಚಿತ್ರೀಕರಣದ ಕಾರಣ ಬೇರೆ ರಾಜ್ಯಕ್ಕೆ ಹೋಗುತ್ತಿದ್ದೀನಿ. ಮುಂದಿನ ವರ್ಷ ಸಿಗುವೆ ಅಥವಾ ಶೂಟ್ ಮುಗಿಸಿಕೊಂಡು ಬಂದ ಬಳಿಕ ಸಿಗ್ತೀನಿ. ಯಾರು ಮನೆ ಬಳಿ ಬರಬೇಡಿ, ಆದ ದಿನ ನಾನು ಮನೆಯಲ್ಲಿ ಇರಲ್ಲ" ಎಂದು ಹೇಳಿದ್ದಾರೆ.
ಸದ್ಯ ಕೊನೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ಇಂತಹ ಸಮಯದಲ್ಲಿ ಸಂಭ್ರಮಾಚರಣೆ ಬೇಡ ಎಂದು ಗಣೇಶ್, ಪ್ರಜ್ವಲ್, ಯೋಗಿ ನಿರ್ಧರಿಸಿದಂತಿದೆ, ಅದಕ್ಕೆ ಈ ರೀತಿ ಹೇಳುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇವರ ಪೋಸ್ಟ್‌ಗಳಿಗೆ ಕೆಲವರು ಇದೇ ವಿಚಾರ ಪ್ರಸ್ತಾಪಿಸಿ ಕಾಮೆಂಟ್ ಸಹ ಮಾಡಿದ್ದಾರೆ.


Click it and Unblock the Notifications











