ಕೇರಳದಲ್ಲಿ ಶತ್ರು ಸಂಹಾರ ಪೂಜೆ, ದರ್ಶನ್ ಜೊತೆ ಇದ್ದ ಮತ್ತೊಬ್ಬ ಕೊಲೆ ಆರೋಪಿ, ಯಾರು ಈ ವ್ಯಕ್ತಿ ?
ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬ ಮಾತು ದರ್ಶನ್‌ಗೆ ಅಕ್ಷರಶಃ ಅನ್ವಯವಾಗುತ್ತದೆ. ಯಾಕೆಂದರೆ ಸಾರಥಿ ನಂತರ ದರ್ಶನ್ ಯಾವತ್ತು ಸಜ್ಜನರ ಸಹವಾಸವನ್ನ ಮಾಡ್ಲೇ ಇಲ್ಲ. ಬದಲಿಗೆ ಹಣದ ಅಮಲು .. ಅಳತೆಗೂ ಮೀರಿದ ಜನಪ್ರಿಯತೆ .. ಸುತ್ತಲು ಮೊಳಗುವ ಜೈಕಾರದ ನಶೆಯಲ್ಲಿ ತಮ್ಮ ಸುತ್ತ ಮುತ್ತ ಇದ್ದ, ತಮ್ಮ ಒಳಿತನ್ನೇ ಬಯಸುತ್ತಿದ್ದವರನ್ನೆಲ್ಲ ದೂರ ಮಾಡಿದರು.
ಯಾವುದು ಸರಿ ಯಾವುದು ತಪ್ಪು ಎಂದು ತಿದ್ದಿ ತೀಡುತ್ತಿದ್ದವರ ಜೊತೆ ಸಂಬಂಧ ಕಡಿದುಕೊಂಡರು. ತನ್ನ ಚಿತ್ರಕ್ಕೆ ಬಣ್ಣ ಹಚ್ಚಿದ್ದ ನಾಯಕಿ ಜೊತೆ ಲವ್ವು-ಡವ್ವು ಅಂತ ಶುರು ಮಾಡಿದರು. ಇದನ್ನ ಪ್ರಶ್ನಿಸಿದ ಹೆಂಡ್ತಿ ವಿಜಯ ಲಕ್ಷ್ಮೀಗೆ ಸಾಯುವಂತೆ ಹೊಡೆದು ತನ್ನ ಪೌರುಷದ ಪ್ರದರ್ಶನವನ್ನಷ್ಟೇ ಅಲ್ಲ ತನ್ನ ವಿಕೃತಿಯ ಪ್ರದರ್ಶನವನ್ನೂ ಕೂಡ ಮಾಡಿದರು. ಜೈಲು ಪಾಲಾಗಿ ಮತ್ತೆ ಮರಳಿ ಬಂದರು.

ಆದರೆ. ಹೀಗೆ ಜೈಲಿಂದ ಬಂದ ದರ್ಶನ್ ತನ್ನ ತಪ್ಪನ್ನೂ ಆಗ ಕೂಡ ತಿದ್ದಿಕೊಳ್ಳಲಿಲ್ಲ. ಸಜ್ಜನರ ಸಹವಾಸವನ್ನೂ ಮಾಡಲಿಲ್ಲ. ಬದಲಿಗೆ ಅ'ಪವಿತ್ರ' ಸಂಬಂಧಕ್ಕೆ ಹಾತೊರೆದರು. ಅಳಿದು ಉಳಿದ ಹಿತೈಶಿಗಳನ್ನೆಲ್ಲ ದೂರ ಮಾಡಿದರು. ಮನೆ ತುಂಬಾ ನಾಯಿಗಳನ್ನು ಸಾಕುವುದರ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನು ಸಾಕಲು ಶುರು ಮಾಡಿದರು. ಇವರೆಲ್ಲರ ಸಹಕಾರ ಮತ್ತು ಬೆಂಬಲದಿಂದ ಕಳೆದ ವರ್ಷ ಮತ್ತೊಮ್ಮೆ ಜೈಲು ಪಾಲಾದರು.
ಇಂಥಾ ದರ್ಶನ್ ಈ ಬಾರಿಯಾದರೂ ಎಚ್ಚೆತ್ತುಕೊಳ್ಳುತ್ತಾರೆ, ಸಜ್ಜನರ ಸಹವಾಸ ಮಾಡುತ್ತಾರೆ ಈ ಮೂಲಕ ತಮ್ಮ ಬುದ್ದಿಯಲ್ಲಿರುವ ಕೊಳೆಯನ್ನು ಹೊಗಲಾಡಿಸಿಕೊಳ್ಳುತ್ತಾರೆ ಎಂದೇ ಅನೇಕರು ಅಂದುಕೊಂಡಿದ್ದರು. ಇದಕ್ಕೆ ಪೂರಕವಾಗಿ ತನ್ನ ಪತಿಯ ಸುತ್ತ ಮುತ್ತ ಇದ್ದವರನ್ನೆಲ್ಲ ವಿಜಯಲಕ್ಷ್ಮಿ ಮನೆಗೆ ಕಳಿಸಿದ್ದಾರೆ ಎಂಬ ಸುದ್ದಿ ಕೂಡ ಕೇಳಿ ಬಂದಿತ್ತು. ದರ್ಶನ್ ಸುತ್ತ ವಿಜಯಲಕ್ಷ್ಮಿ ಅಷ್ಟದಿಗ್ಭಂಧನವನ್ನೇ ಹಾಕಿದ್ದಾರೆ, ದರ್ಶನ್ ಅವರನ್ನು ಭೇಟಿಯಾಗಬೇಕು ಅಂದರೆ ವಿಜಯಲಕ್ಷ್ಮಿ ಅವರ ಮೂಲಕವೇ ಹೋಗಬೇಕೆಂಬ ಮಾತು ಕೂಡ ರಾಜರಾಜೇಶ್ವರಿ ನಗರದ ಸುತ್ತ ಮುತ್ತ ಕೇಳಿ ಬಂದಿತ್ತು.
ಹೀಗಾಗಿ ದರ್ಶನ್ ನಡೆ ಮತ್ತು ನುಡಿಯಲ್ಲಿ ಬದಲಾವಣೆಯ ನಿರೀಕ್ಷೆಯನ್ನು ಅನೇಕರು ಮಾಡುತ್ತಿದ್ದಾರೆ. ಹೀಗಿರುವಾಗ ದರ್ಶನ್ ಈಗ ರೌಡಿಯ ಜೊತೆ ಕಾಣಿಸಿಕೊಂಡಿದ್ದಾರೆ. ನಿರೀಕ್ಷೆಗಳನ್ನು ಈ ಮೂಲಕ ಹುಸಿಗೊಳಿಸಿದ್ದಾರೆ.
ಹೌದು, ಅಸಲಿಗೆ ದರ್ಶನ್ ನಿನ್ನೆ ಕೇರಳದ ಕಣ್ಣೂರಿನಲ್ಲಿರುವ ಮಾಡಾಯಿಕಾವು ಶ್ರೀಭಗವತೀ ದೇವಸ್ಥಾನಕ್ಕೆ ದರ್ಶನ್ ತಮ್ಮ ಅಧಿಕೃತ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಅವರ ಜೊತೆ ಭೇಟಿ ನೀಡಿದ್ದರು. ತಮ್ಮ ಸ್ವಂತ ಸಹೋದರ ದಿನಕರ್ ಅನುಪಸ್ಥಿತಿಯಲ್ಲಿಯೇ ದೇವರು ಕೊಟ್ಟ ತಮ್ಮ ಧನ್ವೀರ್ ಜೊತೆ ದೇವಾಲಯದ ಪ್ರದಕ್ಷಣೆಯನ್ನು ಹಾಕಿದ್ದರು. ತನ್ನ ವಿರುದ್ಧ ಷಡ್ಯಂತ್ರ ರೂಪಿಸುತ್ತಿರುವ ಶತ್ರುಗಳ ನಾಶವಾಗಲಿ ಎಂದು ಶತ್ರು ಸಂಹಾರ ಪೂಜೆಯನ್ನು ಮಾಡಿ ಮಾಡಾಯಿಕಾವು ಶ್ರೀಭಗವತೀ ಪಾದಕ್ಕೇರಗಿದ್ದರು.
ಆದರೆ ಈ ಸಮಯದಲ್ಲಿ ದರ್ಶನ್ ಅವರ ಜೊತೆ ಮತ್ತೊಬ್ಬ ವ್ಯಕ್ತಿ ಕೂಡ ಇದ್ದ ಆ ವ್ಯಕ್ತಿಯೇ ಪ್ರಜ್ವಲ್ ರೈ. ಈ ಪ್ರಜ್ವಲ್ ರೈ ಬೇರೆ ಯಾರು ಅಲ್ಲ ಬದಲಿಗೆ ದರ್ಶನ್ ಅವರಂತೆಯೇ ಕೊಲೆ ಆರೋಪಿ. 2017ರಲ್ಲಿ ಕರೋಪಾಡಿ ಜಲೀಲ್ ಕೊಲೆ ಪ್ರಕರಣದಲ್ಲಿ ಪ್ರಜ್ವಲ್ ರೈ ಹೆಸರು ಕೇಳಿ ಬಂದಿತ್ತು. ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದ ಜಲೀಲ್ ಕೊಲೆ ಪ್ರಕರಣದಲ್ಲಿ ಹನ್ನೊಂದು ಜನರ ಬಂಧನವಾಗಿತ್ತು. ಆ ಹನ್ನೊಂದು ಜನರಲ್ಲಿ ಈ ಪ್ರಜ್ವಲ್ ರೈ ಕೂಡ ಒಬ್ಬರು.
ಇಂಥಾ ಪ್ರಜ್ವಲ್ ರೈ ಸಹವಾಸವನ್ನು ದರ್ಶನ್ ಮಾಡಿದ್ದಾರೆ. ಕೇರಳದ ಕಾವು ಭಗವತಿ ದೇವಾಲಯಕ್ಕೆ ದರ್ಶನ್ ಅವರನ್ನು ಕರೆದುಕೊಂಡು ಹೋಗುವುದಲ್ಲದೇ ಕೇರಳದಲ್ಲಿ ಉಳಿದುಕೊಳ್ಳಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಈ ಪ್ರಜ್ವಲ್ ರೈ ಅವರೇ ಮಾಡಿದ್ದರು ಎನ್ನುವ ಮಾತು ಈಗ ಕೇಳಿ ಬರುತ್ತಿದೆ.
ಇನ್ನು ದರ್ಶನ್‌ಗೆ ಪುತ್ತೂರಿನಲ್ಲಿ ಕೆಲ ಗೆಳೆಯರಿದ್ದಾರೆ. ಅವರ ಸಲಹೆಯ ಮೇರೆಗೆ ದರ್ಶನ್ ಭದ್ರಕಾಳಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆದರೆ ಈ ಸಮಯದಲ್ಲಿ ಪ್ರಜ್ವಲ್ ರೈ ಇವರ ಜೊತೆ ಕಾಣಿಸಿಕೊಂಡಿದ್ದಾರೆ. ಕೇವಲ ದೇವಸ್ಥಾನದಲ್ಲಿ ಮಾತ್ರವಲ್ಲ ದರ್ಶನ್ ಅವರ ಜೊತೆ ಪ್ರಜ್ವಲ್ ರೈ ಮತ್ತು ಅವರ ಸಂಗಡಿಗರು ಫೋಟೊವನ್ನು ಕೂಡ ತೆಗೆಸಿಕೊಂಡಿದ್ದಾರೆ. ಸದ್ಯ ಪ್ರಜ್ವಲ್ ರೈ ಜೊತೆ ದರ್ಶನ್ ಇರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಹಿನ್ನೆಲೆ ಅನೇಕರು ಈಗ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸಹವಾಸ ದೋಷದಿಂದ ಜೈಲಿಗೆ ಹೋಗಿ ಬಂದರೂ ಕೂಡ ದರ್ಶನ್ ಇನ್ನು ಬುದ್ದಿ ಕಲಿಯಲಿಲ್ಲವಲ್ಲ ಎಂಬ ವಿಷಾದವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ನಾಯಿ ಬಾಲ ಯಾವತ್ತಿದ್ದರೂ ಡೊಂಕೆ ಎನ್ನುವುದಕ್ಕೆ ದರ್ಶನ್ ಅವರ ಈ ಗೆಳೆತನವೇ ಸಾಕ್ಷಿ ಎನ್ನುತ್ತಿದ್ದಾರೆ. ಇನ್ನಾದರೂ ರೌಡಿಗಳಿಂದ, ಕೊಲೆ ಆರೋಪಿಗಳಿಂದ ದೂರ ಇರಿ ಎನ್ನುವ ಸಲಹೆಯನ್ನು ಕೂಡ ದರ್ಶನ್ ಅವರಿಗೆ ಅನೇಕರು ನೀಡುತ್ತಿದ್ದಾರೆ.
ಇನ್ನುಳಿದಂತೆ ದರ್ಶನ್ ಭೇಟಿ ನೀಡಿದ ಈ ದೇವಸ್ಥಾನಕ್ಕೆ ಅದ್ರದ್ದೇ ಆದ ಇತಿಹಾಸ ಇದೆ. ಇಲ್ಲಿ ಪಾರ್ವತಿ ದೇವಿ ರುದ್ರಕಾಳಿಯ ಅವತಾರದಲ್ಲಿ ಸಂಚರಿಸುತ್ತಾಳೆ ಎನ್ನುವ ನಂಬಿಕೆ ಇದೆ. ಇಷ್ಟೇ ಅಲ್ಲ ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡಲು ನಕ್ಷತ್ರ, ಗಳಿಗೆ ಮತ್ತು ಸೂಕ್ತ ಸಮಯ ನೋಡಿಕೊಂಡು ಪೂಜೆ ಮಾಡಲಾಗುತ್ತೆ. ಇಲ್ಲಿ ರಾತ್ರಿ 8ರ ನಂತರ ಪೂಜಾರಿಗಳ ಹೊರತಾಗಿ ಇನ್ಯಾರು ಸಹ ಇರುವಂತೆ ಇಲ್ಲ.
ನಿನ್ನೆ ಶುಭ ದಿನವಾದ ಹಿನ್ನೆಲೆ ಪ್ರಾರ್ಥನೆ ಮಾಡಿದರೆ ಫಲ ಸಿಗುತ್ತೆ ಎನ್ನುವ ನಂಬಿಕೆ ಹಲವರದ್ದು. ಹೀಗಾಗಿಯೇ ದರ್ಶನ್ ನಿನ್ನೆ ಶತ್ರು ಸಂಹಾರ ಪೂಜೆಯನ್ನು ಮಾಡಿದ್ದಾರೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಇಲ್ಲಿ ವಾಮಮಾರ್ಗದಲ್ಲಿ ಪೂಜೆ ಮಾಡುವ ಸಂಪ್ರದಾಯ ಕೂಡ ಇದೆ. ಮದ್ಯವನ್ನು ಇಟ್ಟು ನೈವೇದ್ಯವನ್ನು ಕೂಡ ಅನೇಕರು ತೋರಿಸುತ್ತಾರೆ ಎಂದು ಎಂದು ದೇವಸ್ಥಾನದ ಅರ್ಚಕ ಶರತ್ ಗೌರೀಶ್ ಅವರು ಹೇಳಿದ್ದಾರೆ. ಇನ್ನು ಈ ದೇವಾಲಯದಲ್ಲಿ ಒಟ್ಟು 08 ರೀತಿಯ ಪೂಜೆಗಳನ್ನು ಮಾಡಲಾಗುತ್ತಿದ್ದು, ಶತ್ರು ಸಂಹಾರ ಪೂಜೆ ಬಹಳ ವಿಶೇಷವಾದುದು. ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 6 ಗಂಟೆಯ ನಡುವೆ ಈ ಪೂಜೆಯನ್ನು ಮಾಡಿಸಲಾಗುತ್ತದೆ ಎನ್ನುವ ಮಾತನ್ನು ಭಕ್ತರು ಸದ್ಯ ಹೇಳುತ್ತಿದ್ದಾರೆ.
ಇನ್ನು ಚಿತ್ರದ ವಿಚಾರಕ್ಕೆ ಬಂದರೆ ದರ್ಶನ್ ಸದ್ಯ ಡೆವಿಲ್ ಚಿತ್ರದ ಚಿತ್ರೀಕರಣಕ್ಕೆ ಮರು ಚಾಲನೆ ನೀಡಿದ್ದಾರೆ. ಮೈಸೂರಿನಲ್ಲಿ ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಂತದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಾಡೆಲ್ ಹಾಗೂ ಉತ್ತಮ ಭರತನಾಟ್ಯ ಕಲಾವಿದೆಯಾಗಿ ಕೂಡ ಹೆಸರು ಮಾಡಿರುವ ಮಂಗಳೂರು ಚೆಲುವೆ ರಚನಾ ರೈ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಸುಧಾಕರ್ ಜೆ ರಾಜ್ ಛಾಯಾಗ್ರಹಣ ಡೆವಿಲ್ ಚಿತ್ರಕ್ಕೆ ಇದೆ. ಬಾಲಿವುಡ್ ನಟ ಮಹೇಶ್ ಮಂಜ್ರೇಕರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಮಿಲನಾ ಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಜೈ ಮಾತ ಕಂಬೈನ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದೆ. ಈ ವರ್ಷದ ಅಂತ್ಯಕ್ಕೆ ಡೆವಿಲ್ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











