'ಯುವರತ್ನ' ಚಿತ್ರಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟ ಪ್ರಕಾಶ್ ರೈ
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ ಯುವರತ್ನ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಕರ್ನಾಟಕದ ನಾನಾಭಾಗಳಲ್ಲಿ ಚಿತ್ರೀಕರಣ ಮಾಡುತ್ತಿರುವ ಯುವರತ್ನ ಚಿತ್ರತಂಡದಿಂದ ದಿನಕ್ಕೊಂದರಂತೆ ಇಂಟ್ರಸ್ಟಿಂಗ್ ವಿಚಾರಗಳು ಹೊರಬೀಳುತ್ತಿವೆ.
ಸದ್ಯ 50ರಷ್ಟು ಭಾಗದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಚಿತ್ರಕ್ಕೆ ಸ್ಟಾರ್ ಕಲಾವಿದರು ಎಂಟ್ರಿ ಕೊಡುತ್ತಲೆ ಇದ್ದಾರೆ. ಈಗಾಗಲೆ ಸಾಕಷ್ಟು ಕಲಾವಿದರು ಚಿತ್ರತಂಡ ಸೇರಿಕೊಂಡಿದ್ದಾರೆ. ಇದರ ಜೊತೆಗೀಗ ಮತ್ತೋರ್ವ ಸ್ಟಾರ್ ನಟ 'ಯುವರತ್ನ'ನ ಜೋಡಿಯಾಗಿದ್ದಾರೆ.
ದಕ್ಷಿಣ ಭಾರತೀಯ ಚಿತ್ರರಂಗ ಮತ್ತು ಬಾಲಿವುಡ್ ನಲ್ಲಿ ಖಳ ನಟನಾಗಿ ಮಿಂಚು ಹರಿಸುತ್ತಿರುವ ಖ್ಯಾತ ನಟ ಪ್ರಕಾಶ್ ರೈ ಈಗ 'ಯುವರತ್ನ' ಚಿತ್ರತಂಡ ಸೇರ್ಪಡೆಯಾಗಿದ್ದಾರೆ ಎನ್ನುವ ವಿಚಾರ ಕೇಳಿ ಬರುತ್ತಿದೆ. ರಾಜಕೀಯದಲ್ಲಿ ಬ್ಯುಸಿ ಇದ್ದ ಪ್ರಕಾಶ್ ರೈ ಈಗ ಮತ್ತೆ ಸಿನಿಮಾಗೆ ಮರಳಿದ್ದಾರೆ.

'ಯುವರತ್ನ'ನ ಅಡ್ಡದಲ್ಲಿ ಪ್ರಕಾಶ್ ರೈ
ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಯುವರತ್ನ' ಚಿತ್ರಕ್ಕೆ ಪ್ರಕಾಶ್ ರೈ ಎಂಟ್ರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಅರ್ಧದಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪ್ರಕಾಶ್ ರೈ ಅವರನ್ನು ಕರೆದುಕೊಂಡು ಬಂದಿದೆ. ಮೂಲಗಳ ಪ್ರಕಾರ ಚಿತ್ರದಲ್ಲಿ ಪ್ರಕಾಶ್ ರೈ ಕಾಲೇಜು ಪ್ರಿನ್ಸಿಪಾಲ್ ಆಗಿ ಕಾಣಸಿಕೊಳ್ಳಲಿದ್ದಾರಂತೆ. ಆದ್ರಿನ್ನು ಅಧಿಕೃತವಾಗಿಲ್ಲ.

ಚುನಾವಣೆಯ ಬಳಿಕ ಮೊದಲ ಸಿನಿಮಾ
ಕಳೆದ ಕೆಲವು ತಿಂಗಳುಗಳಿಂದ ಪ್ರಕಾಶ್ ರೈ ರಾಜಕೀಯದಲ್ಲಿ ಬ್ಯುಸಿಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡ ಬಳಿಕ ಪ್ರಕಾಶ್ ರೈ, ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅಂದ್ರೆ ಚುನಾವಣೆಯ ಬಳಿಕ 'ಯುವರತ್ನ' ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ ಪ್ರಕಾಶ್.

'ರಾಜಕುಮಾರ' ಬಳಿಕ ಪುನೀತ್ ಜೊತೆ ಪ್ರಕಾಶ್
ಪ್ರಕಾಶ್ ರೈ ರಾಜಕುಮಾರ ಚಿತ್ರದಲ್ಲು ಕಾಣಿಸಿಕೊಂಡಿದ್ದರು. ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಕಾಂಬಿನೇಶನ್ ನಲ್ಲಿ ಮೂಡಿ ಬಂದಿದ್ದ ಮೊದಲ ಸಿನಿಮಾ 'ರಾಜಕುಮಾರ' ಚಿತ್ರದಲ್ಲೂ ಪ್ರಕಾಶ್ ರೈ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಈಗ ಅದೇ ಚಿತ್ರತಂಡದ ಜೊತೆ ಎರಡನೆ ಬಾರಿ ಭಾಗಿಯಾಗುತ್ತಿದ್ದಾರೆ ರೈ.

ಧಾರವಾಡದಲ್ಲಿ ನಡೆಯುತ್ತಿದೆ ಚಿತ್ರೀಕರಣ
'ಯುವರತ್ನ' ಚಿತ್ರದ 5ನೇ ಹಂತದ ಚಿತ್ರೀಕರಣ ಧಾರವಾಡದಲ್ಲಿ ನಡೆಯುತ್ತಿದೆ. ಅನೇಕ ದಿನಗಳಿಂದ ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡವೀಗ ಮತ್ತೆ ಧಾರವಾಡದಲ್ಲಿ ಬೀಡುಬಿಟ್ಟಿದೆ. ಧಾರವಾಡದ ಕರ್ನಾಟಕ ವಿವಿಯಲ್ಲಿ ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ. ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪುಗೆ ನಾಯಕಿಯಾಗಿ ಸಾಯೇಶಾ ಸೈಗಲ್ ಬಣ್ಣಹಚ್ಚಿದ್ದಾರೆ. ಇನ್ನು ಉಳಿದಂತೆ ಚಿತ್ರದಲ್ಲಿ ರಾಧಿಕಾ ಶರತ್ ಕುಮಾರ್, ಧನಂಜಯ್ ಮತ್ತು ಅರು ಗೌಡ ಸೇರಿದಂತೆ ಅನೇಕ ಕಲಾವಿದರ ದಂಡೆ ಚಿತ್ರದಲ್ಲಿದೆ.


Click it and Unblock the Notifications











