ಲೋಕಸಭೆ ಚುನಾವಣೆಯಲ್ಲಿ ಪ್ರಕಾಶ್ ರೈ ಸ್ಪರ್ಧೆ: ಯಾವ ಕ್ಷೇತ್ರ, ಯಾವ ಪಕ್ಷ?
ಪ್ರಕಾಶ್ ರೈ ಅವರ ಹೇಳಿಕೆ, ಹೋರಾಟ, ಪ್ರತಿಭಟನೆಗಳನ್ನ ಗಮನಿಸುತ್ತಿದ್ದ ಅನೇಕ ಮಂದಿ ರೈ ಮುಂದಿನ ದಿನದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಎಂದು ಲೆಕ್ಕಾಚಾರ ಮಾಡ್ತಿದ್ರು. ಬಹುಶಃ ಯಾವುದಾದರೂ ಒಂದು ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ತಾರೆ ಎಂಬ ಚರ್ಚೆ ನಡೆಯುತ್ತಲೇ ಇತ್ತು.
ಈ ಚರ್ಚೆಗಳಿಗೆ ಈಗ ಸ್ವತಃ ಪ್ರಕಾಶ್ ರೈ ಅವರೇ ಉತ್ತರಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಕಾಶ್ ರೈ ಸ್ಪರ್ಧೆ ಮಾಡುವುದಾಗಿ ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ನಿರ್ಧಾರಗಳ ಬಗ್ಗೆ ರೈ ತೋರಿದ ವಿರೋಧ ಎಲ್ಲವೂ ಇದಕ್ಕೆ ನಾಂದಿಯಾಗಿತ್ತು. ಇದೀಗ, ಆ ಲೆಕ್ಕಾಚಾರ ನಿಜ ಆಗಿದೆ. ಅಷ್ಟಕ್ಕೂ, ಯಾವ ಕ್ಷೇತ್ರದಿಂದ ಹಾಗೂ ಯಾವ ಪಕ್ಷದಿಂದ ಪ್ರಕಾಶ್ ರೈ ಸ್ಪರ್ಧೆ ಮಾಡ್ತಿದ್ದಾರೆ.? ಮುಂದೆ ಓದಿ.....

ಹೊಸ ವರ್ಷಕ್ಕೆ ಹೊಸ ಸುದ್ದಿ ನೀಡಿದ ರೈ
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನತೆಗೆ ನಟ ಪ್ರಕಾಶ್ ರೈ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. 2019ನೇ ವರ್ಷವನ್ನ ಬರಮಾಡಿಕೊಂಡು ರೈ, ''ನಾನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ'' ಎಂದು ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.

ಯಾವ ಕ್ಷೇತ್ರದಿಂದ ರೈ ಕಣಕ್ಕೆ?
ಪ್ರಕಾಶ್ ರೈ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ಸುದ್ದಿ ಖಚಿತವಾಗುತ್ತಿದ್ದಂತೆ, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಪ್ರಶ್ನೆಯೇ ಜೋರು. ಆದ್ರೆ, ಆ ವಿಷ್ಯವನ್ನ ರೈ ಬಿಟ್ಟುಕೊಟ್ಟಿಲ್ಲ. ಸದ್ಯಕ್ಕೆ ಗೌಪ್ಯವಾಗಿಟ್ಟಿದ್ದು, ಸದ್ಯದಲ್ಲೇ ತಿಳಿಸಲಿದ್ದಾರಂತೆ.

ಯಾವ ಪಕ್ಷದ ಕಡೆ ರೈ ಒಲವು?
ಇನ್ನು ಪ್ರಕಾಶ್ ಯಾವ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ, ಯಾವ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಕುತೂಹಲ ಕಾಡ್ತಿದೆ. ಬಟ್, ಈ ಚರ್ಚೆಗೆ ರೈ ಬ್ರೇಕ್ ಹಾಕಿದ್ದಾರೆ. ''ನಾನು ಯಾವ ಪಕ್ಷದ ಜೊತೆಯೂ ಹೋಗಿಲ್ಲ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ'' ಎಂದಿದ್ದಾರೆ.

ಪರ-ವಿರೋಧದ ಚರ್ಚೆ
ಪ್ರಕಾಶ್ ರೈ ಅವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಜನರು ಪರ ವಿರೋಧದ ಚರ್ಚೆ ಮಾಡ್ತಿದ್ದಾರೆ. ಅನೇಕರು ರೈ ಅವರ ನಿರ್ಧಾರವನ್ನ ಸ್ವಾಗತಿಸಿದ್ದರೇ, ಹಲವರು ಕಾಲೆಳೆಯುತ್ತಿದ್ದಾರೆ.


Click it and Unblock the Notifications











