ಅವರು ಚಹಾ ಮಾರುತ್ತಿದ್ದರೋ, ಭಿಕ್ಷೆ ಬೇಡುತ್ತಿದ್ದರೋ ಗೊತ್ತಿಲ್ಲ, ಆದರೆ...; ಮೋದಿ ವಿರುದ್ಧ ಪ್ರಕಾಶ್ ರಾಜ್ ಟೀಕಾಪ್ರಹಾರ
ವಿಶ್ವದಾದ್ಯಂತ ಮನ್ನಣೆ ಪಡೆದು, ಭಾರತದಲ್ಲಿ ಹಲವರ ನೆಚ್ಚಿನ ನಾಯಕರಾಗಿ ಹೊರ ಹೊಮ್ಮಿದವರು ನರೇಂದ್ರ ಮೋದಿ. ಸೋಲಿಲ್ಲದ ಸರದಾರ ಎಂದೇ ಕರೆಯಲ್ಪಡುವ ಸದ್ಯ ಮೂರನೇ ಬಾರಿ ರಾಷ್ಟ್ರದ ಚುಕ್ಕಾಣಿ ಹಿಡಿದಿದ್ದಾರೆ. ಬಿಹಾರ್‌ನಲ್ಲಿ ತಮ್ಮ ನೇತೃತ್ವದಲ್ಲಿ ಎನ್‌ಡಿಎಯನ್ನು ಗೆಲ್ಲಿಸಿದ್ದಾರೆ. ಮೊನ್ನೆ ಮೊನ್ನೆ ಬಂಗಾಳದಲ್ಲಿಯೂ ಕೂಡ ಗೆಲುವಿನ ಧ್ವಜ ಹಾರಿಸಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಇಂಧನ ಬಳಕೆಯನ್ನು ಕಡಿತಗೊಳಿಸುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ. ವಿದೇಶಿ ವಿನಿಮಯ ಉಳಿಸಲು ಮತ್ತು ದೇಶವನ್ನು ಸ್ವಾವಲಂಬನೆಗೊಳಿಸಲು ಮನವಿ ಮಾಡಿದ್ದಾರೆ.

ಇಷ್ಟೇ ಅಲ್ಲ ದೇಶದ ವಿವಿಧ ಭಾಗಗಳಲ್ಲಿ ತೀವ್ರವಾಗಿ ಏರಿಕೆಯಾಗುತ್ತಿರುವ ಉಷ್ಣಾಂಶ ಮತ್ತು ಬಿಸಿಲಿನ ತಾಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಗರಿಕರಿಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಹಾಗೂ ಹೈಡ್ರೇಟ್ ಆಗಿರುವಂತೆ ಕರೆ ನೀಡಿದ್ದಾರೆ.
ಆದರೆ, ಪ್ರಧಾನಿ ಮೋದಿಯವರ ಈ ಜಾಗತಿಕ ಜನಪ್ರಿಯತೆ ಮತ್ತು ವರ್ಚಸ್ಸನ್ನು ನಟ ಪ್ರಕಾಶ್ ರಾಜ್ ಮೊದಲಿನಿಂದಲೂ ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತ ವೈಖರಿ ಮತ್ತು ನೀತಿಗಳನ್ನು ಸದಾ ನಿರಂತರವಾಗಿ ಟೀಕಿಸುವ ಪ್ರಕಾಶ್ ರಾಜ್, ಈಗ ಮತ್ತೊಮ್ಮೆ ಪ್ರಧಾನಿ ವಿರುದ್ಧ ತಮ್ಮ ಪದಗಳ ಮೂಲಕ ಚಾಟಿ ಬೀಸಿದ್ದಾರೆ.
ಹೌದು, ಭಾರತೀಯ ಸಾಮಾಜಿಕ-ರಾಜಕೀಯ ವಿದ್ಯಮಾನಗಳನ್ನು ಗಮನಿಸುವವರಿಗೆ ಪ್ರಕಾಶ್ ರಾಜ್ ಅವರ #justasking ಎಂಬ ಹ್ಯಾಶ್‌ಟ್ಯಾಗ್ ಹೊಸದೇನಲ್ಲ. ವ್ಯವಸ್ಥೆಯ ವಿರುದ್ಧ ಪ್ರಕಾಶ್ ರಾಜ್ ಪ್ರಯೋಗ ಮಾಡುವ ಡಿಜಿಟಲ್ ಅಸ್ತ್ರ ಇದು.
ಸದ್ಯ ಇದೇ ಅಸ್ತ್ರವನ್ನು ಮತ್ತೊಮ್ಮೆ ಪ್ರಯೋಗ ಮಾಡಿರುವ ಪ್ರಕಾಶ್ ರಾಜ್, ಮೋದಿ ಅವರ ಅಡಿಪಾಯ ಗುರಿಯಾಗಿಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಸಲಿಗೆ ಕ್ರಿಸ್ ನಾಯರ್ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ (ಎಕ್ಸ್) ಪೋಸ್ಟ್ ಹಂಚಿಕೊಂಡಿದ್ದರು. ನನಗೆ ಸಂಪೂರ್ಣ ವಿಶ್ವಾಸವಿದೆ, ಮೋದಿ ಚಹಾ ಮಾರುವವರೂ ಆಗಿರಲಿಲ್ಲ, ಭಿಕ್ಷುಕರೂ ಆಗಿರಲಿಲ್ಲ. ಅವರು ಹುಟ್ಟಿನಿಂದಲೇ ಸುಳ್ಳುಗಾರರು. ಇದನ್ನು ಯಾರ್ಯಾರು ಒಪ್ಪುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು.
ಸಾಮಾನ್ಯವಾಗಿ ಇಂತಹ ವಿವಾದಾತ್ಮಕ ರಾಜಕೀಯ ಪೋಸ್ಟ್‌ಗಳಿಂದ ಹಲವರು ದೂರ ಇರುವ ಪ್ರಯತ್ನ ಮಾಡುತ್ತಾರೆ. ಆದರೆ, ಪ್ರಕಾಶ್ ರಾಜ್ ಬೇರೆಯವರಂತೆ ಅಲ್ಲ. ಹೀಗಾಗಿ ಈ ಪೋಸ್ಟ್ ಕಣ್ಣಿಗೆ ಬಿದ್ದ ತಕ್ಷಣವೇ ರೀ ಟ್ವಿಟ್ ಮಾಡಿರುವ ಪ್ರಕಾಶ್ ರಾಜ್ , ಅವರು ಚಹಾ ಮಾರುತ್ತಿದ್ದರೋ ಅಥವಾ ಭಿಕ್ಷೆ ಬೇಡುತ್ತಿದ್ದರೋ ನನಗೆ ಗೊತ್ತಿಲ್ಲ. ಆದರೆ ಅವರ ಸುಳ್ಳುಗಳಿಗೆ ನಾನು ಸಾಕ್ಷಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ನನ್ನ ಈ ಮಾತನ್ನು ಯಾರೆಲ್ಲಾ ಒಪ್ಪುತ್ತೀರಾ ಎನ್ನುವುದು ನನಗೆ ತಿಳಿಸಿ ಎಂದು ಬರೆದು ತಮ್ಮದೇ ಆದ #justasking ಹ್ಯಾಶ್‌ಟ್ಯಾಗ್ ಬಳಸಿದ್ದಾರೆ. ಈ ಮೂಲಕ ಅವರು ವಿಷಯವನ್ನು ಕೇವಲ ವ್ಯಕ್ತಿಗತ ನಿಂದನೆಯಾಗಿ ಉಳಿಸದೆ, ದೇಶದ ಸಾರ್ವಜನಿಕ ಚರ್ಚೆಯ ಮುಂಚೂಣಿಗೆ ತಂದಿದ್ದಾರೆ.
ನಿರೀಕ್ಷೆಯಂತೆ ಪ್ರಕಾಶ್ ರಾಜ್ ಈ ಪೋಸ್ಟ್ ಹಂಚಿಕೊಂಡಿದ್ದೇ ತಡ, ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ಶುರುವಾಗಿದೆ. ಸರ್ಕಾರದ ವಿಮರ್ಶಕರು ಮತ್ತು ವಿರೋಧ ಪಕ್ಷದ ಬೆಂಬಲಿಗರು ಪ್ರಕಾಶ್ ರಾಜ್ ಪರವಾಗಿ ನಿಂತಿದ್ದು, ಪ್ರಧಾನಿಯವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ಪ್ರಧಾನಿ ಮೋದಿಯವರ ಬೆಂಬಲಿಗರು ಪ್ರಕಾಶ್ ರಾಜ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅವರು ಕೇವಲ ಪ್ರಚಾರಕ್ಕಾಗಿ ಮತ್ತು ವೈಯಕ್ತಿಕ ದ್ವೇಷದಿಂದ ದೇಶದ ಅತ್ಯುನ್ನತ ಹುದ್ದೆಯಲ್ಲಿರುವವರನ್ನು ನಿಂದಿಸುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.
ಕನಿಷ್ಠ, ನಿನ್ನಂತೆ ಹಣಕ್ಕಾಗಿ ಟಿವಿಯಲ್ಲಿ ಅಜಯ್ ದೇವಗನ್ ಅವರಿಂದ ಹೊಡೆಸಿಕೊಳ್ಳುತ್ತಿರಲಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಚಹಾ ಮಾರಾಟ ಒಂದು ವೃತ್ತಿ, ಅದು ಭಿಕ್ಷಾಟನೆಯಲ್ಲ, ಕನಿಷ್ಠ ಅವರಿಗೆ ನಿಮ್ಮಂತೆ ಸುಳ್ಳು ಅಜೆಂಡಾ ಇಲ್ಲ ಎಂದೆಲ್ಲಾ ತಿರುಗೇಟು ನೀಡಿದ್ದಾರೆ. ನಿಮ್ಮ ಕಾಳಜಿ ಏನು ಎಂದು ಅರ್ಥವಾಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications