ಮಗನ ಮದುವೆ ಬಗ್ಗೆ ಸತ್ಯ ಒಪ್ಪಿಕೊಂಡ್ರಿ, ಹಾಗೆ ನಿಮ್ಮ ಗಂಡ ಅವರೇ ಎಂದು ಒಪ್ಪಿಕೊಳ್ಳಿ; ಲೀಲಾವತಿಗೆ ಪ್ರಕಾಶ್‌ರಾಜ್ ಟಾಂಗ್!
ನಟಿ ಲೀಲಾವತಿ ವೈಯಕ್ತಿಕ ಬದುಕು ನಿಗೂಢವಾಗಿಯೇ ಇತ್ತು. ಲೀಲಾವತಿ ಎಲ್ಲಿಯೂ ಸಹ ತಮ್ಮ ಕುಟುಂಬದ ಬಗ್ಗೆ ಎಲ್ಲಿಯೂ ಮುಕ್ತವಾಗಿ ಹೇಳಿಕೊಂಡಿರಲಿಲ್ಲ. ಈ ಗೌಪ್ಯತೆ ಹಲವು ವಿವಾದಗಳಿಗೂ ಸಹ ಎಡೆ ಮಾಡಿಕೊಟ್ಟಿತ್ತು. ಆದರೆ ಈ ಗೌಪ್ಯತೆಗೆ ಕುರಿತಾದ ಕೆಲ ಮಾಹಿತಿಗಳನ್ನು ರಾಜ್ ಕುಟುಂಬದ ಆಪ್ತ, ಕನ್ನಡ ಚಲನಚಿತ್ರರಂಗದ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.
ಲೀಲಾವತಿ ಕುಟುಂಬದ ಬಗ್ಗೆ ಎರಡು ನಿಜ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಸ್ಪೋಟಕ ಮಾಹಿತಿ ಎಂದು ಬರೆದುಕೊಂಡಿದ್ದರು. ಮೊದಲನೆಯದು ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಎಂಬುದು ಹಾಗೂ ಎರಡನೆಯದು ವಿನೋದ್ ರಾಜ್ ಅವರಿಗೆ ಮದುವೆಯಾಗಿದೆ ಎಂಬುವುದು. ಇದಕ್ಕೆ ತಮಿಳುನಾಡಿನ ಒಂದು ಆಸ್ತಿ ಪತ್ರವನ್ನೂ ಸಹ ಸಾಕ್ಷಿಯಾಗಿ ಪ್ರಕಟಿಸಿದ್ದ ಪ್ರಕಾಶ್ ರಾಜ್ ಮೇಹು ಇದರಲ್ಲಿ ಲೀಲಾವತಿ ಅವರ ಗಂಡ ಮಹಾಲಿಂಗ ಭಾಗವತರ್ ಎಂಬುವುದು ಸ್ಪಷ್ಟವಾಗಿ ಉಲ್ಲೇಖವಾಗಿದೆ ಎಂದು ಹೇಳಿದ್ದರು.

ಅಲ್ಲದೇ ವಿನೋದ್ ರಾಜ್ ಅವರ ಮದುವೆ ಸಹ ಆಗಿದೆ ಎಂಬುದಕ್ಕೆ ಯುವರಾಜ್ ಎಂಬ ಹುಡುಗನ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್ ಒಂದನ್ನು ಸಾಕ್ಷಿಯನ್ನಾಗಿ ಹಾಕಿದ್ದ ಪ್ರಕಾಶ್ ರಾಜ್ ಮೇಹು ಇದರಲ್ಲಿ ಆ ಹುಡುಗನ ತಂದೆ ಹೆಸರು ವಿನೋದ್ ರಾಜ್ ಎಂದಿದೆ ಎಂದು ತಿಳಿಸಿದ್ದರು. ಅಲ್ಲದೇ ಲೀಲಾವತಿ ಹಾಗೂ ವಿನೋದ್ ರಾಜ್ ಆ ಹುಡುಗನ ಮತ್ತು ಆ ಹುಡುಗ ತಾಯಿಯ ಜತೆ ಇರುವ ಫೋಟೊವನ್ನು ಪ್ರಕಾಶ್ ರಾಜ್ ಹಂಚಿಕೊಂಡಿದ್ದರು. ಈ ಮೂಲಕ ಆಕೆ ಕೆಲಸದಾಕೆ ಅಲ್ಲ ವಿನೋದ್ ರಾಜ್ ಪತ್ನಿ ಎಂದು ವಾದಿಸಿದ್ದರು.
ಹೀಗೆ ಪ್ರಕಾಶ್ ರಾಜ್ ಮೇಹು ಸ್ಪೋಟಕ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ಲೀಲಾವತಿ ಸಿನಿ ವರ್ಲ್ಡ್ ಯುಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಭಾಗವಹಿಸಿ ಆಕ್ರೋಶ ಹೊರಹಾಕಿದ್ದಾರೆ. "ಮಗನಿಗೆ ಮದುವೆ ಮಾಡಿದ್ದೀನಿ. ಯಾಕೆ ಹೇಳ್ಲಿಲ್ಲ ಅಂದ್ರೆ, ಎಂಥೆಂಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್‌ಗಳಲ್ಲಿ ಮಾಡಿದ್ದಾರೆ. ನನಗೆ ಆ ಚೈತನ್ಯ ಇರಲಿಲ್ಲ. ಹಾಗಾಗಿ ಅದನ್ನು ರಹಸ್ಯವಾಗಿ ಇಡುವುದೇ ಒಳ್ಳೆಯದು ಎನಿಸಿತು" ಎಂದು ಹೇಳಿಕೆ ನೀಡುವುದರ ಮೂಲಕ ತಮ್ಮ ಮಗನ ಮದುವೆಯಾಗಿದೆ ಎಂಬ ಸತ್ಯವನ್ನು ಲೀಲಾವತಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ನಮ್ಮ ವೈಯಕ್ತಿಕ ವಿಚಾರ ಕೆದಕಿದ್ರೆ ನರಕಕ್ಕೆ ಹೋಗ್ತೀರ ಎಂದಿದ್ದಾರೆ.

ಹೀಗೆ ಲೀಲಾವತಿ ಹೇಳಿಕೆಯನ್ನು ನೀಡಿದ ಬಳಿಕ ಮತ್ತೊಂದು ಪೋಸ್ಟ್ ಅನ್ನು ಪ್ರಕಾಶ್ ರಾಜ್ ಮೇಹು ಅವರು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, "ಒಂದು ಸತ್ಯವನ್ನು ಒಪ್ಪಿಕೊಂಡದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಹಾಗೆ ಆ ಇನ್ನೊಂದು ಸತ್ಯವನ್ನೂ ಒಪ್ಪಿಕೊಂಡು ಧರ್ಮರಾಯನಂತೆ ನೇರವಾಗಿ ಸ್ವರ್ಗಕ್ಕೆ ನಡೆದುಕೊಂಡೇ ಹೊರಟುಬಿಡಿ ಆ ಮಹಾಲಿಂಗ ಭಾಗವತರರ ಆತ್ಮಕ್ಕೆ ಶಾಂತಿಯಾದರು ಸಿಗಲಿ. ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರೂ ಚಿಂತೆಯಿಲ್ಲ. "ಯುವರಾಜ"ನಿಗೆ ಹುಟ್ಟುಹಬ್ಬದ ಶುಭಾಶಯಗಳು" ಪೋಸ್ಟ್ ಮಾಡಿದ್ದಾರೆ.
ಹೀಗೆ ಲೀಲಾವತಿ ಕುಟುಂಬದ ಕುರಿತು ಮತ್ತೊಮ್ಮೆ ಬರೆದುಕೊಂಡು, ವಿನೋದ್ ರಾಜ್ ಮಗ ಎಂದು ತಾವು ಆರೋಪಿಸಿದ ಯುವರಾಜ್‌ಗೆ ಹುಟ್ಟುಹಬ್ಬದ ಶುಭಾಶಯವನ್ನೂ ಸಹ ಕೋರಿರುದ ಪ್ರಕಾಶ್ ರಾಜ್ ಮೇಹು ಈ ಮೂಲಕ ತಾನು ಸಾಕ್ಷಿ ಇಟ್ಟು ಬಹಿರಂಗಪಡಿಸಿದ್ದ ಎರಡು ವಿಷಯಗಳಲ್ಲಿ ಮಗನಿಗೆ ಮದುವೆಯಾಗಿದ್ದು ನಿಜ ಎಂಬ ಒಂದು ಸತ್ಯವನ್ನು ಒಪ್ಪಿಕೊಂಡಿರುವ ನೀವು ನಿಮ್ಮ ಗಂಡ ಮಹಾಲಿಂಗ ಭಾಗವತರ್ ಎಂಬ ಮತ್ತೊಂದು ಸತ್ಯವನ್ನೂ ಸಹ ಒಪ್ಪಿಕೊಂಡುಬಿಡಿ ಎಂದು ಲೀಲಾವತಿಗೆ ಟಾಂಗ್ ನೀಡಿದ್ದಾರೆ.


Click it and Unblock the Notifications











