08 ವರ್ಷದ ಹಿಂದೆ ನನ್ನಿಂದ ತಪ್ಪಾಗಿದೆ, ದೊಡ್ಡ ಮನಸ್ಸು ಮಾಡಿ ನನ್ನ ಕ್ಷಮಿಸಿ- ಪ್ರಕಾಶ್ ರಾಜ್..!
ಜಾಹೀರಾತಿನ ಸಲುವಾಗಿ ಸೋಶಿಯಲ್ ಸಂದೇಶವನ್ನು ನೀಡುವುದಕ್ಕಾಗಿ ಚಿತ್ರರಂಗದ ತಾರೆಯರು ಸಾಮಾಜಿಕ ಸಮಸ್ಯೆಗಳ ವಿರುದ್ಧ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವಾಗಿ ಮಾತನಾಡುತ್ತಾರೆ. ಇದಕ್ಕೆ ಪೂರಕವಾಗಿ ತಮ್ಮ ನೆಚ್ಚಿನ ತಾರೆಯರ ಮೇಲಿನ ಪ್ರೀತಿಯಿಂದ ಬಹಳಷ್ಟು ಬದಲಾವಣೆಗಳು ಈಗಾಗಲೇ ಆಗಿವೆ. ಆಗುತ್ತಿವೆ.
ಆದರೆ, ಕೆಲವರು ಹೀಗೆ ಮಾಡಬೇಡಿ, ಹಾಗೇ ಮಾಡಬೇಡಿ ಎಂದು ಲೆಕ್ಚರ್ ನೀಡಿ ಆ ನಂತರ ತಾವೇ ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಾರೆ. ಪಾನ್ ಮಸಾಲಾ, ರಮ್ಮಿ ಸರ್ಕಲ್ ಸೇರಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸಾಲಿನಲ್ಲಿ 08-09ವರ್ಷಗಳ ಹಿಂದೆ ಸೇರಿಕೊಂಡಿದ್ದ ಪ್ರಕಾಶ್ ರಾಜ್ ಈಗ ನಾನು ಮಾಡಿದ್ದು ತಪ್ಪು ಎಂದು ಹೇಳಿದ್ದಾರೆ.

ಹೌದು, ಅಸಲಿಗೆ ಪಕ್ಕದ ತೆಲುಗು ರಾಜ್ಯದಲ್ಲಿ ಎಕ್ಕಾ ರಾಜಾ ರಾಣಿಯ ಆಟವನ್ನು ಆಡುವಂತೆ ತಮ್ಮ ತಮ್ಮ ಅಭಿಮಾನಿಗಳಿಗೆ ಜಾಹೀರಾತಿನ ಮೂಲಕ ಕರೆ ನೀಡಿ, ತಪ್ಪು ದಾರಿಗೆ ಎಳೆದಿದ್ದ ಸೆಲೆಬ್ರಿಟಿಗಳ ವಿರುದ್ಧ ಪೊಲೀಸರು ಸಮರವನ್ನು ಸಾರಿದ್ದಾರೆ. ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ, ರಾಣಾ ದಗ್ಗುಬಾಟಿ ಸೇರಿ 25 ಜನರ ವಿರುದ್ದ ಐಟಿ ಕಾಯ್ದೆಯ ಸೆಕ್ಷನ್ 318(4), ಬಿಎನ್‌ಎಸ್ 3, 3ಎ, 4 ಮತ್ತು 66ಡಿ ಅಡಿಯಲ್ಲಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆ ಪೈಕಿ ಕಿರುತೆರೆಯಲ್ಲಿ ಪ್ರಸಾರವಾಗುವ ಜಬರದಸ್ತ್ ಕಾರ್ಯಕ್ರಮದ ಮೂಲಕ ಮನೆ ಮಾತಾದ ರೀತು ಚೌಧರಿ ಪಂಜಾಗುಡ್ಡ ಪೊಲೀಸ್ ಠಾಣೆಗೆ ತೆರಳಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ವಿಷ್ಣುಪ್ರಿಯ ಅವರ ವಿಚಾರಣೆಯನ್ನು ಕೂಡ ಪೊಲೀಸರು ಮಾಡಿದ್ದಾರೆ. ಪೊಟ್ಟೇಲ್ ಸೇರಿ ಹಲವು ಚಿತ್ರಗಳಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿರುವ ಅನನ್ಯಾ ನಾಗಲ್ಲಾ ನನ್ನಿಂದ ತಪ್ಪಾಗಿದೆ ಎಂದು ಸೋಶಿಯಲ್ ಮೀಡಿಯಾ ಮೂಲಕ ಕ್ಷಮೆ ಕೋರಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಾಣಾ ದಗ್ಗುಬಾಟಿ ಕೂಡ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ಧಾರೆ.
ಮಿಕ್ಕಂತೆ ನಯನಿ ಪಾವನಿ, ನೇಹಾ ಪಠಾಣ್, ಪದ್ಮಾವತಿ, ಪಾಂಡು, ಇಮ್ರಾನ್ ಖಾನ್, ಹರ್ಷ ಸಾಯಿ, ಬಯ್ಯ ಸನ್ನಿ ಯಾದವ್, ಟೇಸ್ಟಿ ತೇಜ, ನೀತು ಅಗರ್ವಾಲ್, ವರ್ಷಿಣಿ, ಸಿರಿ ಹನುಮಂತು, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಶ್ರೀಮುಖಿ, ನಿರೂಪಕಿ ಶ್ಯಾಮಲಾ, ಮೌನಕ್ಕೆ ಶರಣಾಗಿದ್ದಾರೆ. ಇದರ ನಡುವೆ ಈಗ ಪ್ರಕಾಶ್ ರಾಜ್ ವಿಡಿಯೋ ಮೂಲಕ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.ನಾನು ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ್ದು ಹೌದು ಆದರೆ ಆ ನಂತರ ನನ್ನ ತಪ್ಪಿನ ಅರಿವು ನನಗಾಗಿತ್ತು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಕಾಶ್ ರಾಜ್ ಜೂನ್ 2016ರ ಸಮಯದಲ್ಲಿ ಜಂಗ್ಲಿ ರಮ್ಮಿ ಅವರು ನನ್ನನ್ನು ಸಂಪರ್ಕಿಸಿದ್ದರು. ನಾನು ಕೂಡ ಒಪ್ಪಿಕೊಂಡು ರಮ್ಮಿ ಆಡಿ ಎಂದು ಹೇಳಿದ್ದೇ, ಆದರೆ ಆ ನಂತರ ನನಗೆ ಯಾಕೋ ಕಸಿವಿಸಿ ಆಗಲು ಶುರುವಾಯ್ತು, ನಾನು ಮಾಡಿದ್ದು ಸರಿಯಲ್ಲ ಎಂಬ ಭಾವನೆ ನನಗೆ ಬಂತು ಎಂದು ಹೇಳಿದ್ದಾರೆ.
ಆದರೆ, ಅದಾಗಲೇ ಜಾಹೀರಾತು ಚಿತ್ರೀಕರಣವಾಗಿದ್ದರಿಂದ, ಒಂದು ವರ್ಷದ ಒಪ್ಪಂದ ಇದ್ದಿದ್ದರಿಂದ ನನ್ನಿಂದ ಆಗ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದಿರುವ ಪ್ರಕಾಶ್ ರಾಜ್ ಒಂದು ವರ್ಷದ ನಂತರ ನಮ್ಮ ನಡುವೆ ಆಗಿದ್ದ ಒಪ್ಪಂದದ ನವೀಕರಣ ಮಾಡಲು ಅವರು ಮತ್ತೆ ಬಂದರು. ಆಗ ನಾನು ಆಗಲ್ಲ, ನನ್ನ ಆತ್ಮಸಾಕ್ಷಿ ಇದಕ್ಕೆ ಒಪ್ಪುತ್ತಿಲ್ಲ ಎಂದು ಹೇಳಿ ಅವರನ್ನು ಕಳಿಸಿದ್ದೆ ಎಂದು ಹೇಳಿದ್ದಾರೆ. ಇದು 08-09 ವರ್ಷದ ಹಿಂದಿನ ಕಥೆ ಅದಾದ ನಂತರ ನಾನು ಜೂಜಿಗೆ ಪ್ರೋತ್ಸಾಹಿಸುವ ಕೆಲಸವನ್ನು ಯಾವತ್ತು ಮಾಡಿಲ್ಲ, ಜೂಜಾಟದ ಪ್ರಚಾರವನ್ನು ಕೂಡ ಮಾಡಿಲ್ಲ ಎಂದು ಕೂಡ ಹೇಳಿದ್ದಾರೆ.
ಮುಂದುವರೆದು 2021ರಲ್ಲಿ ಆ ಕಂಪನಿಯನ್ನು ಬೇರೆಯವರಿಗೆ ಮಾರಿದರು ಅನ್ಸುತ್ತೆ ಆಗ ಅವರು ಕೆಲ ಕಡೆ ನನ್ನ ವಿಡಿಯೋ ತುಣುಕುಗಳನ್ನು ಬಳಸಿಕೊಂಡಿದ್ದರು ಎಂದಿರುವ ಪ್ರಕಾಶ್ ರಾಜ್ ಆಗ ನಾನು ಅವರಿಗೆ ಎಚ್ಚರಿಕೆಯನ್ನು ನೀಡಿದ್ದೆ, ಕಾಂಟ್ರ್ಯಾಕ್ಟ್ ಅವಧಿ ಮುಗಿದಿದೆ, ಹೀಗಾಗಿ ನೀವು ನನ್ನ ಅನುಮತಿ ಇಲ್ಲದೆ ನನ್ನ ತುಣುಕುಗಳನ್ನು ಬಳಸುವಂತೆ ಇಲ್ಲ ಎಂದು ಲೀಗಲ್ ನೋಟಿಸ್ ಕೂಡ ಕಳಿಸಿದ್ದೆ ಎಂದು ಹೇಳಿದ್ದಾರೆ. ನೋಟಿಸ್ ಕಳಿಸಿದ ನಂತರ ಅವರು ಪ್ರಸಾರವನ್ನು ನಿಲ್ಲಿಸಿದರು ಎಂದು ಕೂಡ ಪ್ರಕಾಶ್ ರಾಜ್ ಹೇಳಿದ್ದಾರೆ.
ಇನ್ನು ನಾನು ಎಲ್ಲರಿಗೆ ಪ್ರಶ್ನೆಯನ್ನು ಕೇಳುತ್ತೇನೆ, ನನ್ನ ಬಗ್ಗೆ ಪ್ರಶ್ನೆಗಳು ಎದ್ದಾಗ ನಾನು ಉತ್ತರ ಕೊಡಬೇಕು ಎಂದಿರುವ ಪ್ರಕಾಶ್ ರಾಜ್, ನನಗೆ ಈ ವರೆಗೂ ಪೊಲೀಸರಿಂದ ಯಾವುದೇ ನೋಟಿಸ್ ಬಂದಿಲ್ಲ, ಒಂದು ವೇಳೆ ಬಂದರೆ ಖಂಡಿತ ಅದಕ್ಕೆ ನಾನು ಉತ್ತರವನ್ನು ಕೊಡುತ್ತೇನೆ ಯಾಕೆಂದರೆ ಅದು ನನ್ನ ಜವಾಬ್ಧಾರಿ ಎಂದು ಹೇಳಿದ್ದಾರೆ. ಇನ್ನು ಇದೇ ಸಮಯದಲ್ಲಿ ಯುವ ಜನಾಂಗಕ್ಕೆ ಸಂದೇಶವನ್ನು ನೀಡಿರುವ ಪ್ರಕಾಶ್ ರಾಜ್ ಜೂಜಾಟಕ್ಕೆ ಬಲಿಯಾಗಬೇಡಿ, ಅದು ಜೀವನವನ್ನೇ ಹಾಳು ಮಾಡುತ್ತೆ, ''Say no to betting apps" ಎಂದು ಹೇಳಿದ್ದಾರೆ. 08 ವರ್ಷದ ಹಿಂದೆ ನನ್ನಿಂದ ತಪ್ಪಾಗಿದೆ. ಈ ತಪ್ಪನ್ನು ನೀವೆಲ್ಲ ಕ್ಷಮಿಸುತ್ತೀರೆಂದು ನಾನು ನಂಬುತ್ತೇನೆ, ಕ್ಷಮೆ ಇರಲಿ ಎಂದು ಕೂಡ ಮನವಿಯನ್ನು ಮಾಡಿದ್ದಾರೆ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ಕನ್ನಡದಲ್ಲಿ ಕೂಡ ಅನೇಕ ಸೆಲೆಬ್ರಿಟಿಗಳು ಬೆಟ್ಟಿಂಗ್ ಅಪ್ಲಿಕೇಶನ್‌ನ ಪ್ರಚಾರ ಮಾಡುತ್ತಾರೆ. ಆಡೂ ಆಟ ಆಡು ಎಂದು ಹೇಳುತ್ತಾರೆ. ಹೀಗಾಗಿ ಈಗ ಆಂಧ್ರದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡ ನಂತರ ಕರ್ನಾಟಕದಲ್ಲಿ ಕೂಡ ಇದೇ ರೀತಿ ಪೊಲೀಸರು ದೂರನ್ನು ದಾಖಲಿಸಿಕೊಳ್ಳಬೇಕು, ಕನ್ನಡದ ಸ್ಟಾರ್‌ಗಳಿಗೆ ಈ ಮೂಲಕ ತಾವು ಮಾಡುತ್ತಿರುವುದು ತಪ್ಪು ಎಂದು ಮನವರಿಕೆಯನ್ನು ಮಾಡಿಕೊಡಬೇಕು ಎಂಬ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ. ಕನ್ನಡ ಸ್ಟಾರ್‌ಗಳು ಬೆಟ್ಟಿಂಗ್ ಆಪ್‌ಗಳ ಪ್ರಚಾರದಿಂದ ಅಂತರವನ್ನು ಕಾಪಾಡಿಕೊಳ್ಳಬೇಕು ಎನ್ನುವ ಮಾತು ಕೇಳಿ ಬರುತ್ತಿದೆ.
ಒಟ್ನಲ್ಲಿ ಸದ್ಯ ಯೂಟ್ಯೂಬರ್ಸ್, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್,ನಿರೂಪಕಿಯರು ಮತ್ತು ಸ್ಟಾರ್‌ಗಳನ್ನು ಒಳಗೊಂಡಂತೆ 25 ಜನರ ವಿರುದ್ದ ಸೈಬರಾಬಾದ್‌ನ ಮಿಯಾಪುರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡಿ ಯುವ ಜನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಿಯಾಪುರದ ಪ್ರಮೋದ್ ಶರ್ಮಾ ಎಂಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆ ಎಲ್ಲರಿಗೆ ನೋಟಿಸ್ ಕೂಡ ಕಳುಹಿಸುತ್ತಿದ್ದಾರೆ.ಇನ್ನು ಆಂಧ್ರ ಸರ್ಕಾರ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಬೆಟ್ಟಿಂಗ್ ಸುಳಿಯಲ್ಲಿ ಸದ್ಯ ತೆಲುಗು ಚಿತ್ರರಂಗ ಸಿಲುಕಿದೆ. ಒಬ್ಬೊಬ್ಬರನ್ನೇ ಕರೆದು ಪೊಲೀಸರು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿ ಇನ್ನುಳಿದ ಅನೇಕರು ಹಾಜರಾಗುತ್ತಾರಾ, ಮುಂಬರುವ ದಿನಗಳಲ್ಲಿ ಬೆಟ್ಟಿಂಗ್ ಆಪ್ ಗಳಿಂದ ಚಿತ್ರರಂಗದ ತಾರೆಯರು ದೂರ ಇರುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ. ಈ ಪ್ರಕರಣ ಮುಂದೆ ಯಾವ ತಿರುವು ಪಡಯುತ್ತೆ ಎನ್ನುವ ಕುತೂಹಲ ಕೂಡ ಈಗ ಅನೇಕರಲ್ಲಿ ಮೂಡಿದೆ.


Click it and Unblock the Notifications











