ರಂಗಭೂಮಿ, ಸಿನಿಮಾ ಕಲಾವಿದರ ಸಂಗಮ ಒಗ್ಗರಣೆ
ರಂಗಭೂಮಿ ಹಾಗೂ ಸಿನಿಮಾ ನಟರನ್ನು ಸೇರಿಕೊಂಡು ಮಾಡಿದ ಸಿನಿಮಾ ಇದು. ಅದಿಷ್ಟೇ ಅಲ್ಲದೆ ಬೇರೆ ಭಾಷೆಯ ಕಲಾವಿದರನ್ನೂ ಇಲ್ಲಿಗೆ ಕರೆದುಕೊಂಡು ಬಂದದ್ದು ಈ ಚಿತ್ರದ ವಿಶೇಷಗಳಲ್ಲಿ ಒಂದು ಎನ್ನುತ್ತಾರೆ ರೈ. ಚಿತ್ರದ ಬಗೆಗಿನ ವಿವರಗಳನ್ನು ಅವರ ಮಾತಿನಲ್ಲೇ ಕೇಳಿ...
ಈ ಚಿತ್ರದ ಕಥೆ ಇಷ್ಟವಾಯಿತು, ಅವರು ಹೇಳಿರುವ ವಿಚಾರಗಳು ಮನಸ್ಸಿಗೆ ಹಿಡಿಸಿದವು. ಇದನ್ನು ನಮ್ಮ ಭಾಷೆಗೆ ತರುವುದು ಹೇಗೆ ಎಂದು ಯೋಚಿಸಿದಾಗ. ಕೆಲವೊಂದು ಹೊಸ ಪಾತ್ರಗಳು ಸೃಷ್ಟಿಯಾದವು. ಕೆಲವು ಹಳೆ ಪಾತ್ರಗಳನ್ನು ತೆಗೆಯಬೇಕಾಯಿತು. [ಪ್ರಕಾಶ್ ರೈ ಅಭಿನಯದ ಸೂಪರ್ ಹಿಟ್ ಕನ್ನಡ ಚಿತ್ರಗಳು]
ನಮ್ಮ ಬಿ ಸುರೇಶ್ ಹಾಗೂ ಜಯಂತ್ ಕಾಯ್ಕಿಣಿ ಜೊತೆಗಿದ್ದರು, ಇವರೊಂದಿಗೆ ಮಾತನಾಡುತ್ತಾ ಮಾತನಾಡುತ್ತಾ ಅದು ಬೇರೆಯ ರೂಪ ಪಡೆದುಕೊಳ್ತಾ ಹೋಯ್ತು. ಆ ಪ್ರಕಾರ ಒಗ್ಗರಣೆ ಸಿನಿಮಾ ಭಿನ್ನ ರೂಪ ಪಡೆದುಕೊಂಡಿದೆ. ಚಿತ್ರ ನೋಡಿದರೆ ಎರಡು ಗಂಟೆಗಳ ಕಾಲ ಒಂದು ಒಳ್ಳೆಯ ಊಟ ಮಾಡಿದ ಅನುಭವ ನಿಮಗಾಗುತ್ತದೆ.
ಪ್ರೀತಿ, ಪ್ರೇಮದ ಬಗ್ಗೆ ಅಷ್ಟಾಗಿ ಇಷ್ಟವಿಲ್ಲದ ಹೆಣ್ಣುಮಗಳೊಬ್ಬಳು (ಸ್ನೇಹಾ) ಹೇಗೆ ಪ್ರೀತಿಗೆ ಮನಸೋಲುತ್ತಾಳೆ ಎಂಬುದೇ ಕಥೆ. ಚಿತ್ರದಲ್ಲಿ ನನ್ನ ಪಾತ್ರ ಕಾಳಿದಾಸ ಎಂದು. ಸುಮಾರು 45 ವರ್ಷ ವಯಸ್ಸಿನ ಒಬ್ಬ ಪುರಾತತ್ವ ವಸ್ತು ಸಂಶೋಧಕ, ಅವನಿಗೂ ಅಷ್ಟೇ ಪ್ರೀತಿ ಪ್ರೇಮದ ಬಗ್ಗೆ ದೊಡ್ಡ ಆಸಕ್ತಿ ಇರೋದಿಲ್ಲ. ಆದರೆ ಊಟದ ವಿಚಾರದಲ್ಲಿ ತುಂಬಾ ಪ್ರೀತಿ ಇರುವವನು. ಎಲ್ಲಿದ್ದರೂ, ಹೇಗಿದ್ದರೂ ಮೊದಲು ಊಟಕ್ಕೆ ಪ್ರಾಮುಖ್ಯತೆ ಕೊಡುವವನು.
ಒಂದು ಸಲ ಹೆಣ್ಣು ನೋಡಲು ಹೋಗಿ ಅಲ್ಲಿದ್ದ ಅಡುಗೆಭಟ್ಟ ಚೆನ್ನಾಗಿ ಅಡುಗೆ ಮಾಡಿದ ಎಂದು ಅವನನ್ನು ಮನೆಗೆ ಕರೆದುಕೊಂಡು ಬಂದಿರುತ್ತಾನೆ. ಆ ರೀತಿಯ ಒಂದು ವಿನೋದಭರಿತ ಪಾತ್ರ ನನ್ನದು. ಈ ರೀತಿಯ ಕಾಳಿದಾಸನ ಜೀವನದಲ್ಲಿ ಒಬ್ಬ ಹುಡುಗಿ ಹೇಗೆ ಬರುತ್ತಾಳೆ? ಒಂದು ರುಚಿರುಚಿಯಾದ ಅಡುಗೆ ಇವರಿಬ್ಬರನ್ನು ಹೇಗೆ ಒಂದು ಮಾಡುತ್ತದೆ ಎಂಬುದೇ ಚಿತ್ರದ ಕಥಾಹಂದರ. ತೆರೆಯ ಮೇಲೆ ಇದನ್ನು ನೋಡುವುದೇ ಒಂದು ಸೊಗಸಾದ ಅನುಭವ.
(ಪ್ರಕಾಶ್ ರೈ ಹೊಸರುಚಿ 'ಒಗ್ಗರಣೆ' ಟೇಸ್ಟ್ ಮಾಡಿ)


Click it and Unblock the Notifications












