ಪ್ರಕಾಶ್ ರೈ ಅವರ ಕೈ ಅಡುಗೆ 'ಒಗ್ಗರಣೆ' ವಿಶೇಷಗಳು
ಭಾರತೀಯ ಚಿತ್ರರಂಗ ಕಂಡ ಕನ್ನಡದ ಅತ್ಯದ್ಭುತ ಪ್ರತಿಭೆ ಪ್ರಕಾಶ್ ರೈ ಯಾನೆ ಪ್ರಕಾಶ್ ರಾಜ್. 'ನಾನು ನನ್ನ ಕನಸು' ಹಾಗೂ 'ಧೋನಿ' (ತಮಿಳು, ತೆಲುಗು) ಚಿತ್ರಗಳ ಬಳಿಕ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ತ್ರಿಭಾಷಾ ಚಿತ್ರ 'ಒಗ್ಗರಣೆ'. ಇದೇ ಜೂನ್.6ರಂದು ಚಿತ್ರಮಂದಿರಗಳ ತುಂಬ 'ಒಗ್ಗರಣೆ' ಘಮಲು ತುಂಬಿಕೊಳ್ಳಲಿದೆ.
ಪ್ರಕಾಶ್ ರೈ ಅವರು ಕಷ್ಟಪಡದೆ ಬಹಳ ಇಷ್ಟಪಟ್ಟು ಮಾಡಿರುವ ಸಿನಿಮಾ ಇದು. ಈ ಚಿತ್ರದ ಬಗ್ಗೆ ಮಾತನಾಡಿರುವ ಅವರು ಅರುವತ್ತು ದಿನಗಳಲ್ಲಿ ಅಂದುಕೊಂಡ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ. 'ಒಗ್ಗರಣೆ'ಯಲ್ಲಿ ಹಾಡುಗಳ ರುಚಿ ಇನ್ನಷ್ಟು ಸೊಗಸಾಗಿದೆ ಎನ್ನುತ್ತಾರೆ.
'ಒಗ್ಗರಣೆ' ಚಿತ್ರ ಮಲಯಾಳಂನ 'ಸಾಲ್ಟ್ ಅಂಡ್ ಪೆಪ್ಪರ್' ಚಿತ್ರದ ರೀಮೇಕ್. ಪ್ರಕಾಶ್ ರೈ ನಿರ್ದೇಶನದ ಜೊತೆಗೆ ನಿರ್ಮಿಸಿ, ನಟಿಸಿರುವ ಚಿತ್ರವಿದು. ರೈ ಜೊತೆ ತೆಲುಗಿನ ಕೆ.ಎಸ್.ರಾಮಾರಾವ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. [ಹೊಸ ತಂತ್ರಜ್ಞಾನದಲ್ಲಿ 'ಗುಡ್ಡದ ಭೂತ' ಧಾರಾವಾಹಿ]
ಈ ಚಿತ್ರದ ವಿಶೇಷಗಳಲ್ಲಿ ಇಳಯರಾಜಾ ಅವರ ರಾಗ ರುಚಿ, ಕೈಲಾಶ್ ಖೇರ್ ಅವರ ಕಿವಿಗಿಂಪಾದ ಕಂಠ ಬೆರೆತಿದ್ದು, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯದೊಂದಿಗೆ ರೈ ಸಿದ್ಧಪಡಿಸಿರುವ ಪ್ರೀತಿಯ ನಳಪಾಕವಿದು. ಭಿನ್ನ ಕಥಾಹಂದರ ವಿಭಿನ್ನ ನಿರೂಪಣೆಯೇ ಚಿತ್ರದ ಜೀವಾಳ.
ಯುವ ಪ್ರೇಮಿಗಳಾಗಿ ತೇಜಸ್ ಹಾಗೂ ಸಂಯುಕ್ತಾ ಹೊರನಾಡ್, ವಿಶೇಷ ಪಾತ್ರಗಳಲ್ಲಿ ಮಂಡ್ಯ ರಮೇಶ್, ಅಚ್ಯುತ ಕುಮಾರ್ ಇದ್ದಾರೆ. ಇನ್ನು ಪ್ರಕಾಶ್ ರೈ ಅವರಿಗೆ ಜೋಡಿಯಾಗಿ ಸ್ನೇಹಾ ಇದ್ದಾರೆ. ಭರ್ಜರಿ ಊಟದ ಜೊತೆಗೆ ಉಪ್ಪಿನಕಾಯಿಯಂತೆ ಹಾಸ್ಯ ಸನ್ನಿವೇಶಗಳು ಚಿತ್ರದಲ್ಲಿ ಹದವಾಗಿ ಬೆರೆತಿವೆ.
ಈ ಚಿತ್ರದ ಬಗ್ಗೆ ಮಾತನಾಡಿರುವ ಪ್ರಕಾಶ್ ರೈ ಅವರು, "ಒಗ್ಗರಣೆ ಸಿನಿಮಾ ಊಟದ ಸಿನಿಮಾ. ಎಷ್ಟು ವರ್ಷಗಳಾದ ಮೇಲೆ ಹನುಮಂತಪ್ಪನ ಬಿರಿಯಾನಿ, ಮೈಲಾರಿ ದೋಸೆ, ವಿದ್ಯಾರ್ಥಿ ಭವನ್ ದೋಸೆ ತಿನ್ನೋ ಸೌಭಾಗ್ಯ ಈ ಚಿತ್ರದ ಮೂಲಕ ತಮಗೆ ದೊರೆತಂತಾಗಿದೆ ಎನ್ನುತ್ತಾರೆ.
(ಪ್ರಕಾಶ್ ರೈ ಹೊಸರುಚಿ 'ಒಗ್ಗರಣೆ' ಟೇಸ್ಟ್ ಮಾಡಿ)


Click it and Unblock the Notifications












