'ಡೇರ್ ಡೆವಿಲ್ ಮುಸ್ತಾಫಾ' ವೀಕ್ಷಿಸಿ ಹಾಡಿ ಹೊಗಳಿದ ಪ್ರಕಾಶ್ ರಾಜ್
ಡೇರ್ ಡೆವಿಲ್ ಮುಸ್ತಾಫಾ ಈ ವರ್ಷ ತೆರೆಕಂಡ ಒಳ್ಳೆಯ ಚಿತ್ರಗಳಲ್ಲಿ ಒಂದು. ಬಹು ದಿನಗಳ ಹಿಂದೆಯೇ ಸೆಟ್ಟೇರಿದ್ದ ಈ ಚಿತ್ರ ಇತರೆ ಸಿನಿಮಾಗಳಿಗಿಂತ ಭಿನ್ನ ಎಂದು ಈ ಹಿಂದಿನಿಂದಲೂ ಹೇಳಲಾಗುತ್ತಿದೆ. ಇದಕ್ಕೆ ಕಾರಣ ಈ ಕಥೆ ಪೂರ್ಣಚಂದ್ರ ತೇಜಸ್ವಿ ಅವರ 'ಅಬಚೂರಿನ ಪೋಸ್ಟ್ ಆಫೀಸು' ಪುಸ್ತಕವನ್ನು ಆಧರಿಸಿದ ಸಿನಿಮಾ ಎಂಬುದು.
ಹೌದು, ಸಿನಿಮಾ ತಾರೆಗಳ ರೀತಿಯ ಫ್ಯಾನ್ ಫೋಲೋಯಿಂಗ್ ಹೊಂದಿರುವ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ ಪ್ರಸಿದ್ಧ ಕಥೆಯನ್ನಾಧರಿಸಿದ ಚಿತ್ರ ಎಂಬ ಕಾರಣಕ್ಕೆ ಈ ಚಿತ್ರ ಹಿಂದಿನಿಂದಲೂ ಸಹ ತುಂಬಾ ದೊಡ್ಡ ಮಟ್ಟದಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಾ ಬಂದಿದೆ.

ಪೂರ್ಣಚಂದ್ರ ತೇಜಸ್ವಿ ಅವರ ನೂರು ಜನ ಅಭಿಮಾನಿಗಳೇ ಸೇರಿ ನಿರ್ಮಿಸಿರುವ ಚಿತ್ರ ಇದಾಗಿದ್ದು, ಈ ಪ್ರಯತ್ನ ವಿಫಲವಾಗಿಲ್ಲ. ಎಲ್ಲಾ ಧರ್ಮದವರು ಒಂದೇ ಎಂಬ ಅಂಶವನ್ನು ಹೊಂದಿರುವ ಚಿತ್ರವನ್ನು ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ. ಈಗಾಗಲೇ ಚಿತ್ರರಂಗದ ಹಲವು ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದು, ಇದೀಗ ಖ್ಯಾತ ಚಲನಚಿತ್ರ ಕಲಾವಿದ ಪ್ರಕಾಶ್ ರಾಜ್ ಸಹ ಡೇರ್ ಡೆವಿಲ್ ಮುಸ್ತಾಫಾ ಚಿತ್ರವನ್ನು ವೀಕ್ಷಿಸಿದ್ದಾರೆ.
ಇಂದು (ಜೂನ್ 12 ) ಚಿತ್ರವನ್ನು ವೀಕ್ಷಿಸಿ ಹೊರಬಂದ ಪ್ರಕಾಶ್ ರಾಜ್ ಚಿತ್ರತಂಡದ ಜತೆ ಫೋಟೊಗೆ ಖುಷಿಯಿಂದ ಪೋಸ್ ನೀಡಿದ್ದಾರೆ. ಅಲ್ಲದೇ ಆ ಫೋಟೊವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಕಾಶ್ ರಾಜ್ "Wow #Dareಡೆವಿಲ್Musthafa.. ಒಂದು ಆಹ್ಲಾದಕರ ಸಿನೆಮಾ.. ಈ ಯುವತಂಡದ ಪ್ರಬುಧ್ಧತೆ.. ಸಾಮಾಜಿಕ ಕಳಕಳಿ.. ಕಂಡು ಮನತುಂಬಿ ಬಂತು .. ಇಂತಹ ನಮ್ಮ ನೆಲದ ಅದಮ್ಯ ಪ್ರತಿಭೆಗಳನ್ನು ಬೆಂಬಲಿಸುವುದು ನಮ್ಮೆಲ್ಲರ ಹೊಣೆ.. ಇಂದೇ ನೋಡಿ.." ಎಂದು ಬರೆದುಕೊಂಡಿದ್ದಾರೆ.
ಇನ್ನು ಡೇರ್ ಡೆವಿಲ್ ಮುಸ್ತಾಫಾ ಚಿತ್ರ 25 ದಿನಗಳ ಪ್ರದರ್ಶನವನ್ನು ಪೂರೈಸಿದ್ದು, ಐವತ್ತು ದಿನಗಳತ್ತ ಸಾಗಿದೆ. ಈ ನಡುವೆ ಚಿತ್ರತಂಡ ಕೇಕ್ ಕತ್ತರಿಸುವ ಮೂಲಕ ಚಿತ್ರದ ಯಶಸ್ಸನ್ನು ಸಂಭ್ರಮಿಸಿದ್ದು, ಸಿನಿ ರಸಿಕರೂ ಸಹ ಚಿತ್ರ ಈ ಮೈಲಿಗಲ್ಲನ್ನು ಮುಟ್ಟಿದ್ದರ ಬಗ್ಗೆ ಪೋಸ್ಟ್ ಹಾಕಿಕೊಂಡು ಸಂತಸ ಹೊರಹಾಕಿದ್ದರು.
ಇನ್ನು ನಿನ್ನೆ ಡೇರ್ ಡೆವಿಲ್ ಮುಸ್ತಾಫಾ ಚಿತ್ರತಂಡ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಚಿತ್ರ ಕೋಮು ಸೌಹಾರ್ದತೆಯನ್ನು ಸಾರುವ ಕಥೆಯನ್ನು ಹೊಂದಿದ್ದು ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕೆಂದು ಮನವಿ ಸಲ್ಲಿಸಿದ್ದರು.
ಶಶಾಂಕ್ ಸೊಗ್ಗಾಲ್ ನಿರ್ದೇಶನದ ಈ ಚಿತ್ರ 25 ದಿನಗಳನ್ನು ಪೂರೈಸಿದ್ದರ ಬಗ್ಗೆ ವಿತರಕ ಕಾರ್ತಿಕ್ ಗೌಡ ಮಾಹಿತಿಯನ್ನು ಹಂಚಿಕೊಂಡಿದ್ದು, "'ಡೇರ್‌ಡೆವಿಲ್ ಮುಸ್ತಾಫಾ' ಸಿನಿಮಾ ಇಂದು 25 ದಿನಗಳ ಪೂರೈಸಿದೆ. ಅದರ ಬಜೆಟ್ ಅನ್ನು ಪರಿಗಣಿಸಿ ನೋಡಿದರೆ ಇದು ದೊಡ್ಡ ಯಶಸ್ಸು. ಪ್ರತಿ ಸಿನಿಮಾ ಯಶಸ್ಸು ಕಂಡಿದೆ ಎಂದು ಹಣೆಪಟ್ಟಿ ಕಟ್ಟಲು 10/100 ಕೋಟಿ ಗಳಿಸುವ ಅಗತ್ಯವಿಲ್ಲ. ವಿಭಿನ್ನ ಚಿತ್ರಗಳಿಗೆ ಮಾನದಂಡ ವಿಭಿನ್ನವಾಗಿರುತ್ತದೆ. ವಿತರಕ ಮತ್ತು ಉದ್ಯಮದ ಉತ್ಸಾಹಿಯಾಗಿ ನಾನು ಬಯಸಿದ ಏಕೈಕ ವಿಷಯವೆಂದರೆ ವಾರ ಮೊದಲ 2 ವಾರದಲ್ಲಿ ಇರುವಂತೆ ಪ್ರೇಕ್ಷಕರ ಸಂಖ್ಯೆ 3 ಹಾಗೂ ನಾಲ್ಕನೇ ವಾರದಲ್ಲೂ ಇರಬೇಕು. ದಕ್ಷಿಣದ ಬೇರೆ ಇಂಡಸ್ಟ್ರಿಗಳಲ್ಲಿ ಇದು ನಿಯಮಿತವಾಗಿ ನಡೆಯುತ್ತದೆ. ಈ ಹಾದಿಯಲ್ಲಿ ಸಾಗಲು ಏನು ಮಾಡಬೇಕು ಎಂದು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











